ವಿನೋದ್ 
ಮಂಡ್ಯ

ಗೂಡ್ಸ್ ಟೆಂಪೋ ಡಿಕ್ಕಿಯಾಗಿ ಬೈಕ್ ಸವಾರ ಸಾವು

ಮಳವಳ್ಳಿ: ತಾಲೂಕಿನ ನಾಗೇಗೌಡನದೊಡ್ಡ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಬುಧವಾರ ರಾತ್ರಿ ಗೂಡ್ಸ್ ವಾಹನದ ಹಿಂಬದಿಗೆ ಬೈಕ್ ಡಿಕ್ಕಿ ಹೊಡೆದು ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ತಾಲೂಕಿನ ಬಿ.ಜಿ.ಪುರ ಹೋಬಳಿ ಸರಗೂರು ಗ್ರಾಮದ ವೀರಭದ್ರಸ್ವಾಮಿ ಪುತ್ರ ವಿನೋದ್(26) ಮೃತ ಯುವಕ. ಈತ ಸ್ವಗ್ರಾಮದಿಂದ ಕಾರ್ಯನಿಮಿತ್ತ ರಾತ್ರಿ ಮಳವಳ್ಳಿ ಪಟ್ಟಣಕ್ಕೆ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ರಸ್ತೆ ಬದಿಯಲ್ಲಿ ಟಯರ್ ಪಂಕ್ಚರ್ ಆಗಿ ನಿಂತಿದ್ದ ಎಳನೀರು ತುಂಬಿಸಿಕೊಂಡಿದ್ದ ಗೂಡ್ಸ್ ಟೆಂಪೋ ಹಿಂಬದಿಗೆ ಡಿಕ್ಕಿ ಹೊಡೆದಿದ್ದಾನೆ. ಅಪಘಾತದ ರಭಸಕ್ಕೆ ಸವಾರ ವಿನೋದ್ ಸ್ಥಳದಲ್ಲೇ ಸಾವನ್ನಪ್ಪಿದ್ದು, ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ಮೃತದೇಹವನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಶವಾಗಾರಕ್ಕೆ ಸ್ಥಳಾಂತರಿಸಿದರು. ಗುರುವಾರ ಮರಣೋತ್ತರ ಪರೀಕ್ಷೆ ನಂತರ ಕುಟುಂಬದವರಿಗೆ ಶವವನ್ನು ಒಪ್ಪಿಸಲಾಗಿದೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.