ಮಂಡ್ಯ ನಗರದ ಕೆಎಚ್‌ಬಿ ಮಹಾರಾಜನಗರ ಬಡಾವಣೆಯಲ್ಲಿ ತಡೆಗೋಡೆ ನಿರ್ಮಾಣ ಕಾಮಗಾರಿಗೆ ಶಾಸಕ ಪಿ.ರವಿಕುಮಾರ್ ಗಣಿಗ ಭೂಮಿ ಪೂಜೆ ನೆರವೇರಿಸಿದರು. 
ಮಂಡ್ಯ

ಕೆಎಚ್‌ಬಿ ಬಡಾವಣೆಗೆ ಕಾವೇರಿ ನೀರು ಪೂರೈಕೆ: ಶಾಸಕ ಪಿ.ರವಿಕುಮಾರ್ ಗಣಿಗ ಹೇಳಿಕೆ

ಕೆ.ಎನ್.ರಾಘವೇಂದ್ರ

ಪ್ರಮುಖ ಮುಖ್ಯಾಂಶಗಳು

  • ತಡೆಗೋಡೆ ನಿರ್ಮಾಣಕ್ಕೆ ಭೂಮಿ ಪೂಜೆ
  • ಒಂದು ಕೋಟಿ ರೂ ವೆಚ್ಚದಲ್ಲಿ ಕಾಮಗಾರಿ
ಮಂಡ್ಯ: ನಗರದ ಕೆಎಚ್‌ಬಿ ಮಹಾರಾಜನಗರ (ಕೆರೆ ಅಂಗಳ) ಬಡಾವಣೆಯ ಸಮಗ್ರ ಅಭಿವೃದ್ಧಿಗೆ ಬದ್ಧ. ಅಂತೆಯೇ ಬಡಾವಣೆಗೆ ಕಾವೇರಿ ನೀರು ಪೂರೈಕೆ ಮಾಡಲು ಪೈಪ್‌ಲೈನ್ ಅಳವಡಿಕೆಗೆ 75 ಲಕ್ಷ ರೂ ಬಿಡುಗಡೆಗೊಳಿಸಲಾಗಿದೆ ಎಂದು ಶಾಸಕ ಪಿ.ರವಿಕುಮಾರ್ ಗಣಿಗ ಹೇಳಿದರು.
ನಗರದ ಕೆಎಚ್‌ಬಿ ಮಹಾರಾಜನಗರ ಬಡಾವಣೆಯ ಪಂಚಮುಖಿ ಗಣಪತಿ ದೇವಸ್ಥಾನದ ಸಮೀಪ ಕೆರೆ ಹೆಬ್ಬಳ್ಳಕ್ಕೆ ಕಾವೇರಿ ನೀರಾವರಿ ನಿಗಮದಿಂದ ಒಂದು ಕೋಟಿ ರೂ ವೆಚ್ಚದಲ್ಲಿ ತಡೆಗೋಡೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಕಾವೇರಿ ನೀರು ಪೂರೈಕೆ ಯೋಜನೆಗೆ ತಿಂಗಳೊಳಗೆ ಚಾಲನೆ ನೀಡಲಾಗುವುದು. ಹೊಳಲು ಗ್ರಾಮದಿಂದ ಮಂಡ್ಯ ನಗರಕ್ಕೆ ಬರುತ್ತಿದ್ದ ನೀರನ್ನು ತಡೆಯುವ ನಿಟ್ಟಿನಲ್ಲಿ ಶಾಶ್ವತ ಪರಿಹಾರ ಕಲ್ಪಿಸಲು 100 ಕೋಟಿ ರೂ ಅನುದಾನ ನೀಡಲಾಗಿದೆ ಎಂದರು.
ಕಾವೇರಿ ನೀರಾವರಿ ನಿಗಮದಿಂದ ಮಂಡ್ಯ ವಿಧಾನಸಭಾ ಕ್ಷೇತ್ರಕ್ಕೆ ನೂರು ಕೋಟಿ ರೂ ಅನುದಾನ ಬಿಡುಗಡೆ ಮಾಡಿದೆ. ಇದರಲ್ಲಿ 18 ಕೋಟಿ ರೂ ಗಳನ್ನು ಕೆಎಚ್‌ಬಿ ಬಡಾವಣೆ ಹಾಗೂ ಬೀಡಿ ಕಾರ್ಮಿಕರ ಕಾಲನಿಯಲ್ಲಿ ಹಾದು ಹೋಗಿರುವ ನಾಲೆಗಳ ತಡೆಗೋಡೆಗೆ ನೀಡಲಾಗಿದೆ. ಈ ಪೈಕಿ ಈಗಾಗಲೇ ಬೀಡಿ ಕಾರ್ಮಿಕರ ಕಾಲನಿಗೆ 10 ಕೋಟಿ ರೂ ವೆಚ್ಚದಲ್ಲಿ ತಡೆಗೋಡೆ ನಿರ್ಮಾಣ ಮಾಡಲಾಗಿದೆ. ಮುಂದುವರೆದ ಭಾಗವಾಗಿ ಕೆಎಚ್‌ಬಿ ಬಡಾವಣೆಯಲ್ಲಿರುವ ಪಂಚಮುಖಿ ಗಣಪತಿ ದೇವಸ್ಥಾನ ಹಾಗೂ ಜೆಎಸ್‌ಎಸ್ ಸ್ಕೂಲ್ ಸಮೀಪ 1 ಕೋಟಿ ರೂ ವೆಚ್ಚದಲ್ಲಿ ತಡೆಗೋಡೆ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಾಗಿದೆ ಎಂದು ತಿಳಿಸಿದರು.
ಪ್ರತಿ ವರ್ಷ ಮಳೆಗಾಲದಲ್ಲಿ ವಿಶ್ವೇಶ್ವರಯ್ಯ ಪಿಕಪ್ ನಾಲೆಯಿಂದ ಕೆಎಚ್‌ಬಿ ಬಡಾವಣೆಗೆ ನೀರು ನುಗ್ಗುತ್ತಿತ್ತು. ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ 5.5 ಕೋಟಿ ರೂ ವೆಚ್ಚದಲ್ಲಿ ತಡೆಗೋಡೆ ನಿರ್ಮಾಣ ಮಾಡುವುದಕ್ಕೆ ಅನುಮೋದನೆ ಸಿಕ್ಕಿದೆ. ಶೀಘ್ರವೇ ಟೆಂಡರ್ ಕರೆದು ಕಾಮಗಾರಿ ಕೈಗೊಳ್ಳಲಾಗುವುದು. ಮುಂದಿನ ಐವತ್ತು ವರ್ಷ ಯಾವುದೇ ರೀತಿಯ ತೊಂದರೆಯಾಗಬಾರದು. ಆ ನಿಟ್ಟಿನಲ್ಲಿ ತಡೆಗೋಡೆ ನಿರ್ಮಾಣ ಮಾಡಿ ಶಾಶ್ವತ ಪರಿಹಾರ ಕಲ್ಪಿಸಲು ಮುಂದಾಗಿದ್ದೇವೆ. ಪಂಚಮುಖಿ ಗಣಪತಿ ದೇವಸ್ಥಾನದ ಮುಂಭಾಗ ಇರುವ ಪಾರ್ಕ್ ಅಭಿವೃದ್ಧಿಗೆ ಒಂದು ಕೋಟಿ ರೂ ಮಂಜೂರು ಮಾಡುವುದಾಗಿ ಭರವಸೆ ನೀಡಿದರು.
ನಗರಸಭಾ ಮಾಜಿ ಸದಸ್ಯ ಜಾಕೀರ್‌ಪಾಷಾ, ಮುಡಾ ಮಾಜಿ ಅಧ್ಯಕ್ಷ ನಯೀಂ, ಬಡಾವಣೆ ನಿವಾಸಿಗಳಾದ ಅಶೋಕ, ಗೋವಿಂದರಾಜು, ರವಿ, ಬಿ.ಜೆ.ಸೋಮಶೇಖರ್, ಎಂ.ಎಲ್.ಶಂಕರ್, ಶಶಿಧರ್, ಸತೀಶ್, ಪ್ರಶಾಂತ್, ಅನಿಲ್, ಕೃಷ್ಣೇಗೌಡ, ಮಹೇಶ್ ಇತರರಿದ್ದರು.
ಮನವಿ ಸಲ್ಲಿಕೆ: ಬಡಾವಣೆಗೆ ಕುಡಿಯುವ ಕಾವೇರಿ ನೀರು, ಚರಂಡಿ, ಯುಜಿಡಿ ಸೇರಿದಂತೆ ಯಾವುದೇ ಮೂಲ ಸೌಲಭ್ಯಗಳಿಲ್ಲ. ಆದ್ದರಿಂದ ಬಡಾವಣೆಗೆ ಮೂಲ ಸೌಲಭ್ಯ ಕಲ್ಪಿಸಲು ಮುಂದಾಗಬೇಕೆಂದು ಸ್ಥಳೀಯರು ಶಾಸಕ ಪಿ.ರವಿಕುಮಾರ್ ಗಣಿಗ ಅವರಿಗೆ ಮನವಿ ಸಲ್ಲಿಸಿದರು. ಇದಕ್ಕೂ ಮೊದಲು ಬಡಾವಣೆ ನಾಗರಿಕರು ಶಾಸಕರಿಗೆ ಅದ್ಧೂರಿ ಸ್ವಾಗತ ನೀಡಿದರು.

ಒಂದು ಕೋಟಿ ರೂ ವೆಚ್ಚದಲ್ಲಿ ನಾಲೆ ಅಭಿವೃದ್ಧಿ
ಮಂಡ್ಯ ವಿಧಾನಸಭಾ ಕ್ಷೇತ್ರದ ಕೀಲಾರ ಗ್ರಾಮದಲ್ಲಿ ಒಂದು ಕೋಟಿ ರೂ ವೆಚ್ಚದಲ್ಲಿ ನಾಲೆ ಅಭಿವೃದ್ಧಿ ಹಾಗೂ ಹೊನ್ನಾಯಕನಹಳ್ಳಿ ಗ್ರಾಮದಲ್ಲಿ ಒಂದು ಕೋಟಿ ರೂ ವೆಚ್ಚದಲ್ಲಿ ನಾಲೆ ಮತ್ತು ಸೇವಾ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಪಿ.ರವಿಕುಮಾರ್ ಗಣಿಗ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ನಾಲೆಗಳ ಆಧುನೀಕರಣವಾಗದ ಪರಿಣಾಮ ರೈತರಿಗೆ ಸಮಸ್ಯೆಯಾಗಿತ್ತು. ಕೆಆರ್‌ಎಸ್ ಡ್ಯಾಂನಿಂದ ನೀರು ಬಿಟ್ಟರೆ ಮಂಡ್ಯ ತಾಲೂಕಿನ ರೈತರ ಜಮೀನಿಗೆ ತಲುಪಲು ಒಂದು ವಾರ ಬೇಕಿತ್ತು. ಈ ಹಿನ್ನೆಲೆಯಲ್ಲಿ ನಾಲೆ ಅಭಿವೃದ್ಧಿ ಮಾಡುವ ಕಾಮಗಾರಿ ಸಮರೋಪಾದಿಯಲ್ಲಿ ನಡೆಯುತ್ತಿದೆ. ಪರಿಣಾಮ ಡ್ಯಾಂನಲ್ಲಿ ನೀರು ಬಿಟ್ಟರೆ ಕೇವಲ ಎಂಟು ಗಂಟೆಯೊಳಗೆ ರೈತರ ಜಮೀನು ತಲುಪುತ್ತಿದೆ ಎಂದರು.