ಮಂಡ್ಯ ನಗರದ 9ನೇ ವಾರ್ಡಿನ ಕಾಳಪ್ಪ ಬಡಾವಣೆಯಲ್ಲಿ ರಸ್ತೆ ಅಭಿವೃದ್ದಿಗೆ ಶಾಸಕ ಪಿ.ರವಿಕುಮಾರ್ ಗಣಿಗ ಭೂಮಿ ಪೂಜೆ ನೆರವೇರಿಸಿದರು.  
ಮಂಡ್ಯ

ವೃತ್ತಗಳಿಗೆ ವಿದೇಶಿ ಮಾದರಿ ರೂಪ: ಶಾಸಕ ಪಿ.ರವಿಕುಮಾರ್ ಗಣಿಗ ಹೇಳಿಕೆ

ಕೆ.ಎನ್.ರಾಘವೇಂದ್ರ

ಪ್ರಮುಖ ಮುಖ್ಯಾಂಶಗಳು

  • ಕಾಳಪ್ಪ ಬಡಾವಣೆಯಲ್ಲಿ ರಸ್ತೆ ಅಭಿವೃದ್ಧಿಗೆ ಚಾಲನೆ
  • 25 ಲಕ್ಷ ರೂ.ವೆಚ್ಚದಲ್ಲಿ ನಿರ್ಮಾಣ
ಮಂಡ್ಯ: ನಗರದಲ್ಲಿನ ಪ್ರಮುಖ ವೃತ್ತಗಳನ್ನು ವಿದೇಶಿ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಶಾಸಕ ಪಿ.ರವಿಕುಮಾರ್ ಗಣಿಗ ಹೇಳಿದರು.
ನಗರದ 9ನೇ ವಾರ್ಡಿನ ಕಾಳಪ್ಪ ಬಡಾವಣೆಯಲ್ಲಿ ಎಸ್ಸಿಪಿ, ಟಿಎಸ್ಪಿ ಯೋಜನೆಯಡಿ 25 ಲಕ್ಷ ರೂ.ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ರಸ್ತೆ ಅಭಿವೃದ್ಧಿಗೆ ಚಾಲನೆ ನೀಡಿ ಮಾತನಾಡಿದ ಅವರು, ಮುಖ್ಯಮಂತ್ರಿಗಳ ವಿಶೇಷ ಅನುದಾನದಿಂದ ನಗರದ ವ್ಯಾಪ್ತಿಯಲ್ಲಿ 10 ಕೋಟಿ ರೂ ವೆಚ್ಚದಲ್ಲಿ ರಸ್ತೆ ಮತ್ತು ಎರಡು ಪ್ರಮುಖ ವೃತ್ತಗಳಾದ ಹೊಸಹಳ್ಳಿ, ಫ್ಯಾಕ್ಟರಿ ವೃತ್ತ, ಹೊಳಲು ವೃತ್ತಗಳನ್ನು ವಿದೇಶಿ ಮಾದರಿಯಲ್ಲಿ ಅಭಿವೃದ್ಧಿಗೊಳಿಸಲು ಸಿದ್ದತೆ ನಡೆಯುತ್ತಿವೆ ಎಂದು ತಿಳಿಸಿದರು.
ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿರುವ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ನಾಡಪ್ರಭು ಕೆಂಪೇಗೌಡ ಪ್ರತಿಮೆ ನಿರ್ಮಾಣಕ್ಕೆ ಟೆಂಡರ್ ಹಂತದಲ್ಲಿದೆ. ಆ ಕೆಲಸವನ್ನು ಶೀಘ್ರದಲ್ಲಿಯೇ ಆರಂಭಿಸುತ್ತೇವೆ. ಡಾ.ಬಿ.ಆರ್.ಅಂಬೇಡ್ಕರ್ ಜೋಡಿ ರಸ್ತೆ ಮತ್ತು ಕೆಂಪೇಗೌಡ ರಸ್ತೆಯನ್ನು ವಿಶೇಷವಾಗಿ 9 ಕೋಟಿ ರೂ ಬಿಡುಗಡೆ ಮಾಡಲಾಗಿದೆ. ಅದರಲ್ಲಿ ಹೈಟೆಕ್ ಫುಟ್‌ಬಾತ್, ಸೈಕಲ್ ಬೇ ಮತ್ತು ರಸ್ತೆ ಡಾಂಬರೀಕರಣ ಆಗಲಿದೆ. ಪುಟ್‌ಬಾತ್ ಅಭಿವೃದ್ದಿಗೆ 3 ಕೋಟಿ ರೂ ನಿಗಧಿಯಾಗಿದೆ ಎಂದು ಹೇಳಿದರು.
ಕಾವೇರಿ ನೀರಾವರಿ ನಿಗಮದಿಂದ 30 ಕೋಟಿ ರೂ.ಗಳನ್ನು ಮಂಡ್ಯ ನಗರಕ್ಕೆ ವಿನಿಯೋಗಿಸುತ್ತಿದ್ದೇವೆ. ಹೈಟೆಕ್ ಆದ ವಿದೇಶಿ ಮಾದರಿಯಲ್ಲಿ ಪುಟ್‌ಬಾತ್ ಮತ್ತು ಸೌಂದರ್ಯಿಕರಣವಾದ ನಾಲೆ ನಿರ್ಮಾಣವಾಗಲಿದೆ. ಹೊಳಲು ವೃತ್ತದಿಂದ 1ನೇ ವಾರ್ಡ್ ಕಾಳಿಕಾಂಬ ದೇವಸ್ಥಾನದವರೆಗಿನ ನಾಲೆ ಅಭಿವೃದ್ದಿಗೆ ವಿಶೇಷ ರೂಪ ನೀಡಲಾಗುವುದು. ಈ ಸಂಬಂಧ ನೀಲನಕ್ಷೆ ಸಿದ್ಧವಾಗಿದೆ. ಇನ್ನು 100 ಕೋಟಿ ರೂ ಟೆಂಡರ್ ಒಂದು ವಾರದಲ್ಲಿ ಆಗಲಿದೆ. 3 ತಿಂಗಳಲ್ಲಿ ಆ ಕೆಲಸವನ್ನು ಮುಗಿಸುತ್ತೇವೆ. ಈ ಅಭಿವೃದ್ಧಿಯಿಂದ ಮಂಡ್ಯ ನಗರದ ಸೌಂದರ್ಯ ಹೆಚ್ಚಲಿದೆ. ಬಹುದಿನದ ಬೇಡಿಕೆಯಾಗಿದ್ದ ಕಾಳಪ್ಪ ಬಡಾವಣೆಯ ನಿವಾಸಿಗಳಿಗೆ ಹಕ್ಕುಪತ್ರ ಸಿದ್ಧವಾಗಿದೆ. ಮುಖ್ಯಮಂತ್ರಿಗಳ ಸಮಯ ನಿಗದಿಗಾಗಿ ಕಾಯುತ್ತಿದ್ದೇವೆ. ಜಿ ಪ್ಲಸ್ ಒಂದು ಮಾದರಿಯಲ್ಲಿ ಮನೆಗಳ ನಿರ್ಮಾಣಕ್ಕೆ ಸಾರ್ವಜನಿಕರೇ ನೀಲನಕ್ಷೆ ಸಿದ್ಧ ಮಾಡಿಕೊಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ಲಂ ಬೋರ್ಡ್ ಅಧಿಕಾರಿಗಳಿಂದಿಗೆ ಚರ್ಚಿಸಿ, ಅತ್ತುತ್ತಮವಾದ ಮೂಲ ಸೌಕರ್ಯಯುಳ್ಳ ಮನೆ ನಿರ್ಮಾಣಕ್ಕೆ ಆಧ್ಯತೆ ನೀಡಲಾಗುವುದು ಎಂದು ಭರವಸೆ ನೀಡಿದರು.
ರಾಜ್ಯ ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮದ ಉಪಾಧ್ಯಕ್ಷೆ ವಿಜಯಲಕ್ಷ್ಮೀ ರಘುನಂದನ್, ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಎಂ.ಎಸ್.ಚಿದಂಬರ್, ಮುಡಾ ಅಧ್ಯಕ್ಷ ಬಿ.ಪಿ.ಪ್ರಕಾಶ್, ಜಾಗೃತ ಕರ್ನಾಟಕದ ಜಿಲ್ಲಾ ಸಂಚಾಲಕ ಎನ್.ನಾಗೇಶ್, ನಗರಸಭಾ ಮಾಜಿ ಸದಸ್ಯರಾದ ಗೀತಾ, ಶ್ರೀಧರ್, ಶಿವಪ್ರಕಾಶ್, ಮುಖಂಡರಾದ ದೀಪಕ್, ನಾಗೇಶ್, ಸುಬ್ಬು ಇತರರಿದ್ದರು.