ಕರಗದ ಮನೆಯಿಂದ ದೇವರು ಮೆರವಣಿಗೆ ಹೊರಟಾಗ ಮಹಿಳೆಯರು ತಂಬಿಟ್ಟಿನ ಆರತಿ ನೀಡಿದರು.
ಹಲಗೂರು: ಸಮೀಪದ ಗುಂಡಾಪುರ ಗ್ರಾಮದಲ್ಲಿ ನೆಲೆಸಿರುವ 9 ಹಳ್ಳಿಗಳ ಗ್ರಾಮ ದೇವತೆ ಬೆಟ್ಟದರಸಮ್ಮನ ಜಾತ್ರೆ ಗುರುವಾರ ಕೊಂಡೋತ್ಸವದ ನಂತರ ಸಂಪನ್ನಗೊಂಡಿತು.
ಮಾ.4ರಂದು ಆರಂಭವಾದ ಜಾತ್ರೆಯಲ್ಲಿ ದಿನನಿತ್ಯ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದವು. ಬಾಯಿ ಬೀಗ , ಊರ್ಜಿ ಆಡಿಸುವುದು, ತಟ್ಟೆ ಪೂಜೆ, ತಂಬಿಟ್ಟಿನ ಆರತಿ, ರಂಗಸ್ಥಳ ಕುಣಿತ, ಪಂಜಿನ ಸೇವೆ ಸೇರಿದಂತೆ ಇತರ ಕಾರ್ಯಕ್ರಮಗಳು ವೈಭವಯುತವಾಗಿ ನಡೆಯಿತು. ಬುಧವಾರ ಮಧ್ಯರಾತ್ರಿ ಗ್ರಾಮದ ಮಧ್ಯಭಾಗದಲ್ಲಿರುವ ಕರಗದ ಮನೆಯಲ್ಲಿ ದೇವರಿಗೆ ಪೂಜೆ ಸಲ್ಲಿಸಿದ ನಂತರ ಬೆಟ್ಟದರಸಮ್ಮನವರ ಕರಗವನ್ನು ಅರ್ಚಕರಾದ ವೀರಭದ್ರಪ್ಪ ಅವರು ಹೊತ್ತು ಸಾಗಿದರು. ಕರಗ ಸಾಗುವ ಮಾರ್ಗದಲ್ಲಿ ಮಹಿಳೆಯರು ತಂಬಿಟ್ಟಿನ ಆರತಿ ಹಿಡಿದು ಸಾಗಿದರು. ನಂತರ ಬೆಟ್ಟದ ತಪ್ಪಲಿನಲ್ಲಿರುವ ಮೂಲ ದೇವಾಲಯದ ಬಳಿ ಅಗ್ನಿಕೊಂಡವನ್ನು ನಡೆಮಡಿಯ ಮೇಲೆ ಪ್ರವೇಶ ಮಾಡಿ ಜಾತ್ರೋತ್ಸವವನ್ನು ಸಂಪನ್ನಗೊಳಿಸಲಾಯಿತು.