ಮಂಡ್ಯದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿದರು.  
ಮಂಡ್ಯ

ಗುಣಮಟ್ಟದ ಆಹಾರ, ಸ್ವಚ್ಛತೆಗೆ ಆದ್ಯತೆ ಕೊಡಿ: ಜಿಲ್ಲಾಧಿಕಾರಿ ಡಾ.ಕುಮಾರ ಸೂಚನೆ

ಕೆ.ಎನ್.ರಾಘವೇಂದ್ರ

ಪ್ರಮುಖ ಮುಖ್ಯಾಂಶಗಳು

  • ಮೊಬೈಲ್ ಕ್ಯಾಂಟೀನ್ ಖರೀದಿಸಲು ಗರಿಷ್ಠ 5 ಲಕ್ಷ ರೂ.ಸಹಾಯಧನ
  • ಫಲಾನುಭವಿಗಳ ಆಯ್ಕೆ ಸಭೆ
ಮಂಡ್ಯ: ಪ್ರವಾಸೋದ್ಯಮ ಇಲಾಖೆ ವತಿಯಿಂದ 2024-25ನೇ ಸಾಲಿನ ಎಸ್‌ಸಿಎಸ್‌ಪಿ ಹಾಗೂ ಟಿಎಸ್‌ಪಿ ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಣ್ಣ ಉದ್ದಿಮೆದಾರರನ್ನು ಉತ್ತೇಜಿಸುವ ಉದ್ದೇಶದಿಂದ ಆಯೋಜಿಸಲಾಗಿರುವ ಮೊಬೈಲ್ ಕ್ಯಾಂಟೀನ್ ಸಹಾಯಧನ ಯೋಜನೆಯ ಫಲಾನುಭವಿಗಳು ಗುಣಮಟ್ಟದ ಆಹಾರ, ಸ್ವಚ್ಛತೆ ಹಾಗೂ ಉತ್ತಮ ಗ್ರಾಹಕ ಸೇವೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಸಲಹೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ 2024-25ನೇ ಸಾಲಿನ ಪ್ರವಾಸೋದ್ಯಮ ಇಲಾಖೆ ಮೊಬೈಲ್ ಕ್ಯಾಂಟೀನ್ ಖರೀದಿಗಾಗಿ 5 ಲಕ್ಷ ರೂ.ಸಹಾಯಧನ ವಿತರಣೆ ಯೋಜನೆಯಡಿ 2ನೇ ಬ್ಯಾಚ್‌ನ ತರಬೇತಿ ಪೂರ್ಣಗೊಳಿಸಿದ 6 ಫಲಾನುಭವಿಗಳಿಗೆ ಸಹಾಯಧನ ಬಿಡುಗಡೆ ಮಾಡುವ ಸಂಬಂಧ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಪ್ರವಾಸೋದ್ಯಮ ಇಲಾಖೆಯಿಂದ ಎಸ್‌ಸಿಎಸ್‌ಪಿ ಹಾಗೂ ಟಿಎಸ್‌ಪಿ ಯೋಜನೆಯಡಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಸಣ್ಣ ಉದ್ದಿಮೆದಾರರಿಗೆ ಒಂದು ತಿಂಗಳ ಕೌಶಲಾಭಿವೃದ್ಧಿ ತರಬೇತಿ ನೀಡಲಾಗಿದೆ. ತರಬೇತಿ ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ ಮೊಬೈಲ್ ಕ್ಯಾಂಟೀನ್ ಖರೀದಿಸಲು ಗರಿಷ್ಠ 5 ಲಕ್ಷ ರೂ.ಸಹಾಯಧನ ನೀಡಲಾಗುತ್ತಿದೆ. ಫಲಾನುಭವಿಗಳು ಸ್ವಯಂ ಉದ್ಯೋಗ ಆರಂಭಿಸಿ ಆರ್ಥಿಕವಾಗಿ ಸ್ವಾವಲಂಬಿಗಳಾಗುವುದರ ಜತೆಗೆ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಗುಣಮಟ್ಟದ ಆಹಾರ ಸೇವೆ ವಿಸ್ತರಣೆ ಹಾಗೂ ಸ್ಥಳೀಯ ಮಟ್ಟದಲ್ಲಿ ಉದ್ಯೋಗಾವಕಾಶಗಳ ಸೃಷ್ಟಿಗೂ ನೆರವಾಗಲಿದೆ ಎಂದು ಹೇಳಿದರು.
ರಾಜ್ಯ ಸರ್ಕಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ನಿರುದ್ಯೋಗಿ ಯುವಕರಿಗೆ ಸ್ವಯಂ ಉದ್ಯೋಗ ಕಲ್ಪಿಸುವ ಉದ್ದೇಶದಿಂದ ಯೋಜನೆ ಜಾರಿಗೊಳಿಸಿದೆ. ವಾಹನ ಖರೀದಿ ಹಾಗೂ ಉದ್ಯಮ ಆರಂಭಿಸಲು ಘಟಕ ವೆಚ್ಚದ ಶೇ.70 ಅಥವಾ ಗರಿಷ್ಠ 5 ಲಕ್ಷ ರೂ.ವರೆಗೆ ಸಹಾಯಧನ ನೀಡುತ್ತಿದೆ. ಫಲಾನುಭವಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಯಶಸ್ವಿ ಉದ್ಯಮಿಗಳಾಗಬೇಕು ಎಂದರು.
ಮೊಬೈಲ್ ಕ್ಯಾಂಟೀನ್ ಆರಂಭಿಸುವ ಮುನ್ನ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದಿಂದ ಕಡ್ಡಾಯವಾಗಿ ಪರವಾನಗಿ ಪಡೆಯಬೇಕು. ಗ್ರಾಹಕರಿಗೆ ರುಚಿಕರ, ಆರೋಗ್ಯಕರ ಆಹಾರ ಒದಗಿಸುವ ಮೂಲಕ ಗುಣಮಟ್ಟ ಕಾಯ್ದುಕೊಳ್ಳಬೇಕು. ಈ ನಿಟ್ಟಿನಲ್ಲಿ ಶಿಸ್ತು ಬದ್ಧವಾಗಿ ಕಾರ್ಯನಿರ್ವಹಿಸಿ, ಗ್ರಾಹಕರೊಂದಿಗೆ ಸೌಜನ್ಯದಿಂದ ವರ್ತಿಸುವ ಮೂಲಕ ಉತ್ತಮ ಸೇವೆ ನೀಡಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿ.ಜೆ.ಶೋಭಾರಾಣಿ, ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ರಾಘವೇಂದ್ರ, ಅಗ್ನಿಶಾಮಕದಳ ಅಧಿಕಾರಿ ರಾಘವೇಂದ್ರ ಇತರರಿದ್ದರು.