ಶ್ರೀರಂಗಪಟ್ಟಣದಲ್ಲಿ ಆರೋಗ್ಯ ಇಲಾಖೆಯಿಂದ ಲಾರ್ವಾ ಸಮೀಕ್ಷೆ ಕಾರ್ಯ ಮೇಲ್ವಿಚಾರಣೆ ಮಾಡಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಯಿತು. ಎಸ್.ಡಿ.ಬೆನ್ನೂರ, ಜಿ.ಬಿ.ಹೇಮಣ್ಣ ಇತರರು ಇದ್ದರು. 
ಮಂಡ್ಯ

ಲಾರ್ವಾ ಉತ್ಪತ್ತಿಯಾಗದಂತೆ ಎಚ್ಚರ ವಹಿಸಿ

ಶ್ರೀರಂಗಪಟ್ಟಣ: ಈಡಿಸ್ ಲಾರ್ವಾ ಸಮೀಕ್ಷೆಗಾಗಿ ಮನೆ ಮನೆಗೆ ಭೇಟಿ ನೀಡುವ ಆರೋಗ್ಯ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿಗೆ ಸಾರ್ವಜನಿಕರು ಸಹಕಾರ ನೀಡಬೇಕೆಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ ಬೆನ್ನೂರ್ ತಿಳಿಸಿದರು.
ಪಟ್ಟಣದ ಪಿಡಬ್ಲ್ಯೂಡಿ ಕಚೇರಿ ಹಿಂಭಾಗದ 2ನೇ ವಾರ್ಡಿನ ಬೀದಿಯಲ್ಲಿ ಶುಕ್ರವಾರ ಲಾರ್ವಾ ಸಮೀಕ್ಷೆಯಲ್ಲಿ ಮಾತನಾಡಿದ ಅವರು, ಆರೋಗ್ಯ ಇಲಾಖೆ ನಿರ್ದೇಶನದ ಮೇರೆಗೆ ಪಟ್ಟಣದಲ್ಲಿ ಪ್ರತಿ ತಿಂಗಳ ಮೊದಲನೇ ಹಾಗೂ ಮೂರನೇ ಶುಕ್ರವಾರ ಆರೋಗ್ಯ ಇಲಾಖೆಯ ಸಿಬ್ಬಂದಿ ತಂಡ ಮನೆ ಮನೆಗೆ ಭೇಟಿ ನೀಡಿ, ನೀರು ಸಂಗ್ರಹ ಮಾಡಿರುವ ಪರಿಕರಗಳನ್ನು ಪರಿಶೀಲಿಸಿ, ಈಡಿಸ್ ಲಾರ್ವ ಪತ್ತೆ ಹಚ್ಚಿ ಬಳಿಕ ಅದನ್ನು ತೆರವುಗೊಳಿಸುವ ಕಾರ್ಯ ನಡೆಸುತ್ತಿದೆ. ಸಾರ್ವಜನಿಕರು ಲಾರ್ವಾ ಸಮೀಕ್ಷೆಗೆ ಸಹಕಾರ ನೀಡುವುದರ ಜತೆಗೆ ತಮ್ಮ ಮನೆಯ ಸುತ್ತಮುತ್ತಲ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದರಿಂದ ಆರೋಗ್ಯದಿಂದರಲು ಸಾಧ್ಯವಾಗಲಿದೆ ಎಂದರು.
ಡೆಂಘಿ ಒಂದು ಸಾಂಕ್ರಾಮಿಕ ರೋಗವಾಗಿದ್ದು, ರೋಗ ನಿಯಂತ್ರಣದಲ್ಲಿ ಸಾರ್ವಜನಿಕರು ಸಹಕರಿಸದಿದ್ದಲ್ಲಿ ದಂಡ ವಿಧಿಸಬಹುದಾಗಿದೆ. ಮನೆಯ ಒಳಾಂಗಣ, ಹೊರಾಂಗಣದಲ್ಲಿ ಈಡಿಸ್ ಲಾರ್ವಾ ಸಂತಾನೋತ್ಪತ್ತಿ ಕಂಡು ಬಂದರೆ ಪಟ್ಟಣ ಪ್ರದೇಶದಲ್ಲಿ 800 ರೂ., ಗ್ರಾಮೀಣ ಪ್ರದೇಶದಲ್ಲಿ 400 ರೂ., ವಾಣಿಜ್ಯ ಸಂಸ್ಥೆಗಳು ಹಾಗೂ ಕಚೇರಿಗಳಲ್ಲಿ ಲಾರ್ವಾಗಳು ಕಂಡು ಬಂದರೆ ಪಟ್ಟಣ ಪ್ರದೇಶದಲ್ಲಿ 2 ಸಾವಿರ ರೂ., ಗ್ರಾಮೀಣ ಪ್ರದೇಶದಲ್ಲಿ 1ಸಾವಿರ ರೂ., ನಿರ್ಮಾಣ ಹಂತದ ಪ್ರಗತಿಯಲ್ಲಿರುವ ನಿವೇಶನಗಳು, ಖಾಲಿ ನಿವೇಶನಗಳಲ್ಲಿ ಲಾರ್ವಾ ಕಂಡು ಬಂದರೆ ನಗರ ಪ್ರದೇಶದಲ್ಲಿ 4 ಸಾವಿರ ರೂ., ಗ್ರಾಮೀಣ ಪ್ರದೇಶದಲ್ಲಿ 2ಸಾವಿರ ರೂ.ದಂಡ ವಿಧಿಸಬಹುದಾಗಿದೆ ಎಂದು ತಿಳಿಸಿದರು.
ಈಡಿಸ್ ಲಾರ್ವಾ ನಿಯಂತ್ರಣಕ್ಕಾಗಿ ಸೂಕ್ತ ಕ್ರಮ ಕೈಗೊಳ್ಳುವಂತೆ ಮೊದಲು ನೋಟಿಸ್ ಜಾರಿ ಮಾಡಲಾಗುತ್ತದೆ. ನೋಟಿಸ್ ಜಾರಿ ಮಾಡಿದ ನಂತರವೂ ನಿರ್ದಿಷ್ಟ ಸಮಯದೊಳಗೆ ಲಾರ್ವಾ ತೆರವುಗೊಳಿಸದಿದ್ದಲ್ಲಿ ಅಥವಾ ಅಸಹಕಾರ ತೋರಿದಲ್ಲಿ ದಂಡ ಹಾಕಬೇಕಾಗುತ್ತದೆ. ಹೀಗಾಗಿ ಸಾರ್ವಜನಿಕರು ಲಾರ್ವಾ ಉತ್ಪತ್ತಿ ಆಗದಂತೆ ಎಚ್ಚರಿಕೆ ವಹಿಸಿ ಆರೋಗ್ಯ ಇಲಾಖೆ ನೀಡುವ ಸಲಹೆ, ಸೂಚನೆಗಳನ್ನು ಪಾಲಿಸಿ ಆರೋಗ್ಯವಂತರಾಗಿರಬೇಕೆಂದು ಸಲಹೆ ನೀಡಿದರು.
ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಜಿ.ಬಿ.ಹೇಮಣ್ಣ ಮಾತನಾಡಿ, ಸೊಳ್ಳೆ ಕಡಿತದಿಂದ ಬರುವ ರೋಗಗಳ ಬಗ್ಗೆ ಹಾಗೂ ಮುಂಜಾಗ್ರತ ಕ್ರಮಗಳ ಬಗ್ಗೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಬಲರಾಮ, ಮಹೇಶ್, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ರಾಜ, ಆರೋಗ್ಯ ನಿರೀಕ್ಷಣಾಧಿಕಾರಿ ಎಂ.ಎನ್ ಕೃಷ್ಣೇಗೌಡ ಇತರರು ಇದ್ದರು.