ವಿಶ್ವಗುರು ಬಸವೇಶ್ವರ ಜಯಂತ್ಯುತ್ಸವದ ಅಂಗವಾಗಿ ಬಸರಾಳು ಗ್ರಾಮದಲ್ಲಿ ಶಾಸಕ ಪಿ.ರವಿಕುಮಾರ್ ಗಣಿಗ ಅವರನ್ನು ಸನ್ಮಾನಿಸಲಾಯಿತು.
ಮಂಡ್ಯ: ತಾಲೂಕಿನ ಬಸರಾಳು ಗ್ರಾಮದಲ್ಲಿ ವೀರಶೈವ ಲಿಂಗಾಯತ ಸಮುದಾಯ, ಬಸರಾಳು ವೀರಶೈವ ಅಭಿವೃದ್ಧಿ ಟ್ರಸ್ಟ್ ಹಾಗೂ ಗ್ರಾಮಸ್ಥರ ಸಹಯೋಗದಲ್ಲಿ ವಿಶ್ವಗುರು ಬಸವೇಶ್ವರ ಜಯಂತ್ಯುತ್ಸವವನ್ನು ಸಂಭ್ರಮದಿಂದ ಆಚರಣೆ ಮಾಡಲಾಯಿತು.
ಜಯಂತ್ಯುತ್ಸವದ ಅಂಗವಾಗಿ ಮಂಡ್ಯ-ನಾಗಮಂಗಲ ರಸ್ತೆಯ ಪಕ್ಕದಲ್ಲಿರುವ ಪುರಾತನ ನಂದಿ ಬಸಪ್ಪ ದೇವಾಲಯದಲ್ಲಿ ನಂದೀಶ್ವರನಿಗೆ ಬ್ರಾಹ್ಮಿ ಮುಹೂರ್ತದಲ್ಲಿ ಪಂಚಾಮೃತ ಅಭಿಷೇಕ, ಬಿಲ್ವಾ ಅರ್ಚನೆ, ಕುಂಕುಮಾರ್ಚನೆ ಮಹಾಮಂಗಳಾರತಿ ನೆರವೇರಿಸಲಾಯಿತು. ಬೆಳಗ್ಗೆಯಿಂದ ನೂರಾರು ಭಕ್ತರು ನಂದಿ ಬಸವೇಶ್ವರನಿಗೆ ಪೂಜೆ ಹಣ್ಣು ಕಾಯಿ ನೈವೇದ್ಯ ಮಾಡಿಸಿದರು. ಭಕ್ತರಿಗೆ ಪಾನಕ, ಮಜ್ಜಿಗೆ, ಹೆಸರುಬೇಳೆ, ಕೋಸಂಬರಿ ವಿತರಿಸಲಾಯಿತು. ಅಂತೆಯೇ ಮಧ್ಯಾಹ್ನ ದೇವಸ್ಥಾನದ ಆವರಣದಲ್ಲಿ 3000ಕ್ಕೂ ಹೆಚ್ಚು ಭಕ್ತರಿಗೆ ಅನ್ನದಾಸೋಹ ಮಾಡಲಾಯಿತು.
ಸಂಜೆ ದೇವಸ್ಥಾನದ ಆವರಣದಿಂದ ಅಲಂಕೃತ ಮಂಟಪದಲ್ಲಿ ಜಗಜ್ಯೋತಿ ಗುರುಬಸವೇಶ್ವರ ಹಾಗೂ ನಂದಿ ಬಸವೇಶ್ವರಸ್ವಾಮಿಯ ಪುತ್ಥಳಿಯಿಟ್ಟು ಮಂಗಳವಾದ್ಯ, ತಮಟೆ, ವೀರಗಾಸೆ ಸೇರಿದಂತೆ ಜಾನಪದ ಕಲಾತಂಡಗಳೊಂದಿಗೆ ಮಂಡ್ಯ-ನಾಗಮಂಗಲ ಮುಖ್ಯರಸ್ತೆ ಹಾಗೂ ಗ್ರಾಮದ ರಥ ಬೀದಿಯಲ್ಲಿ ಮೆರವಣಿಗೆ ಮಾಡಲಾಯಿತು. ಮೆರವಣಿಗೆಯುದಕ್ಕೂ ಗ್ರಾಮಸ್ಥರು ಪೂಜೆ ಸಲ್ಲಿಸಿದರು. ಕಳೆದ ಮೂರು ದಿನದಿಂದ ಮಂಡ್ಯ -ನಾಗಮಂಗಲ ರಸ್ತೆ, ನಾಗರಬನ, ಕಾಲಭೈರವೇಶ್ವರ ದೇವಸ್ಥಾನ, ನಂದಿ ಬಸವೇಶ್ವರಸ್ವಾಮಿ ದೇವಸ್ಥಾನ ಸೇರಿದಂತೆ ಮುಖ್ಯರಸ್ತೆಯುದ್ದಕ್ಕೂ ತಳಿರು ತೋರಣ ವಿದ್ಯುತ್ ದ್ವೀಪಗಳನ್ನ ಜಗ ಮಗಿಸುವಂತೆ ಅಲಂಕರಿಸಲಾಗಿತ್ತು. ಸಮಾಜದ ಹಲವು ಮುಖಂಡರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಸಕ ಪಿ.ರವಿಕುಮಾರ್ ಗಣಿಗ, ಮನ್‌ಮುಲ್ ಮಾಜಿ ಅಧ್ಯಕ್ಷ ಬಿ.ಆರ್.ರಾಮಚಂದ್ರು, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಯೋಗೇಶ್, ಮಾಜಿ ಅಧ್ಯಕ್ಷ ಬಿ.ಆರ್.ಕೃಷ್ಣೇಗೌಡ, ಪಟೇಲ್ ಲಿಂಗರಾಜು, ಬಿ.ಟಿ.ಶಂಕರೇಗೌಡ, ಶಂಕರ್‌ಪಟೇಲ್, ಶಂಕರ್, ಕೆಂಚನಹಳ್ಳಿ ರಾಜು, ಬಸರಾಳು ವೀರಶೈವ ಲಿಂಗಾಯತ ಸಮುದಾಯದ ಅಧ್ಯಕ್ಷ ಸುರೇಶ್, ಕೆಂಚನಹಳ್ಳಿ ನಾಗರಾಜು, ಮಂಜುನಾಥಗೌಡ ಇತರರಿದ್ದರು.