ಕಿಕ್ಕೇರಿ ಹೋಬಳಿಯ ಬಸವನಹಳ್ಳಿ ಗ್ರಾಮದ ಬಿಳಿಗಿರಿರಂಗನಾಥನ ಗುಡಿ.
ಕಿಕ್ಕೇರಿ: ಹೋಬಳಿಯ ಬಸವನಹಳ್ಳಿ ಗ್ರಾಮವೆಂದರೆ ಹತ್ತೂರಿನ ಹಳ್ಳಿಗಳಿಗೆ ನ್ಯಾಯ ನೀಡುತ್ತಿದ್ದ ಊರು ಎಂದೇ ಹೆಸರುವಾಸಿಯಾಗಿತ್ತು.
ಬಹುತೇಕ ಸುತ್ತಮುತ್ತಲ ಹಳ್ಳಿಗಳಲ್ಲಿ ಸಮಸ್ಯೆ, ಗಲಾಟೆಗಳಾದರೆ ನ್ಯಾಯ ಪಂಚಾಯಿತಿಗೆ ಇಲ್ಲಿನ ಕಟ್ಟೆಮನೆಗೆ ಬಂದು ಒಪ್ಪಿಸುತ್ತಿದ್ದರು. ಇಲ್ಲಿನ ಕಟ್ಟೆಮನೆಯವರು ಎಲ್ಲವನ್ನು ವಿಚಾರಣೆ ಮಾಡಿ ಯಾವುದೇ ಸಮಸ್ಯೆಗಳು ಮುಂದೆ ಬಾರದಂತೆ ತಿಳಿವಳಿಕೆ, ಎಚ್ಚರಿಕೆ ನೀಡಿ ಸೋದರತ್ವದಿಂದ ಬಾಳುವಂತೆ ತಿಳಿ ಹೇಳುತ್ತಿದ್ದರು. ಇಲ್ಲಿನ ಪಟೇಲರಿಗೆ ಹತ್ತೂರಿನ ಜನರು ಗೌರವ ನೀಡುತ್ತಿದ್ದರು. ಪಟೇಲರ ನಡೆ ನುಡಿಗಳಿಗೆ ಜನರು ಸದಾ ಗೌರವ ಕೊಡುತ್ತಿದ್ದರು.
ಗ್ರಾಮದಲ್ಲಿ ಹಳ್ಳಿಕಾರ್ ರಾಸುಗಳನ್ನು ಹೆಚ್ಚು ಸಾಕುತ್ತಿದ್ದರು. ಹಳ್ಳಿಕಾರ್ ತಳಿಯ ರಾಸುಗಳ ಸಂವರ್ಧನೆ ಕೂಡ ನಡೆಯುತ್ತಿತ್ತು. ಸುತ್ತಮುತ್ತಲ ಗ್ರಾಮವಲ್ಲದೆ ಹೊರಗಿನ ಪ್ರದೇಶದಿಂದ ಇಲ್ಲಿನ ಹಸು, ಎತ್ತುಗಳನ್ನು ಖರೀದಿಸಲು ರೈತರು ಆಗಮಿಸುತ್ತಿದ್ದರು. ರೈತ ಸ್ನೇಹಿಯಾಗಿ ಉಳುಮೆ, ಸಾಮಾನು ಸರಂಜಾಮು ಕೆಲಸಕ್ಕೆ ಹಳ್ಳಿಕಾರ್ ರಾಸುಗಳು ಸಿದ್ಧಹಸ್ತ. ರೋಗ ನಿರೋಧಕ ಶಕ್ತಿ ಈ ರಾಸುಗಳಿಗೆ ಹೆಚ್ಚು. ಈ ಬಸವಣ್ಣನ ಹೆಸರಿನಲ್ಲಿಯೇ ಈ ಗ್ರಾಮಕ್ಕೆ ಹೆಸರು ಬಂದಿರುವುದು ವಿಶೇಷವಾಗಿದೆ.
ಗ್ರಾಮದಲ್ಲಿನ ಹಸುಗಳನ್ನು ಬಸವಣ್ಣ ಎಂದು ಕರೆಯಲಾಗುತ್ತಿತ್ತು. ಇಲ್ಲಿನ ಹೋರಿಗಳನ್ನು ಬಸವಣ್ಣನಾಗಿ ಹಲವು ಗ್ರಾಮಗಳಿಗೆ ದೇವರ ಹಸುವಾಗಿ ಬಿಡಲು ಕೊಂಡು ಹೋಗುತ್ತಿದ್ದರು. ಇಲ್ಲಿ ಖರೀದಿಸಿದ ಬಸವಣ್ಣ ಬಲುಸುಂದರವಾಗಿ ಇರುವುದಲ್ಲದೆ ಯಾರಿಗೂ ಉಪದ್ರವ ನೀಡದಿರುವುದನ್ನು ಕಂಡು ಅಚ್ಚರಿಪಡಲಾಗುತ್ತಿತ್ತು. ಗ್ರಾಮದಲ್ಲಿನ ಬಹುತೇಕ ಸಮುದಾಯದವರು ಹಳ್ಳಿಕಾರ್ ಹಸುಗಳನ್ನು ಸಾಕಣೆ ಮಾಡುವುದು, ಮಾರಾಟ ಮಾಡುವುದು ಆಗಿತ್ತು. ದೂರದ ದನಗಳ ಜಾತ್ರೆಯಲ್ಲಿ ಈ ಗ್ರಾಮದ ಜನರದ್ದೇ ವ್ಯಾಪಾರ, ವ್ಯವಹಾರ ಪ್ರಮುಖವಾಗಿ ಹೆಸರುವಾಸಿಯಾಗಿತ್ತು. ಇವರ ಪ್ರಾಮಾಣಿಕತೆ ನಂಬಿ ರೈತರು ಕಣ್ಣುಮುಚ್ಚಿ ರಾಸುಗಳನ್ನು ಖರೀದಿಸುತ್ತಿದ್ದರು. ಇದು ಹಿರಿಯರ ಪ್ರಾಮಾಣಿಕತೆಯನ್ನು ತೋರಿಸುತ್ತಿತ್ತು.
ಸಮಸ್ಯೆಯಾದವರು ಪರಿಹಾರಕ್ಕಾಗಿ ಮೊದಲು ಕಟ್ಟೆಮನಿಯಲ್ಲಿ ನ್ಯಾಯದೇವತೆಯಾಗಿ ಗೋಮಾತೆ ಬಸವ(ಹಸು)ನ ಮೇಲೆ ಆಣೆ ಮಾಡಿಸಿ ನ್ಯಾಯ ಆರಂಭಿಸುತ್ತಿದ್ದರು. ಪರಿಣಾಮ ಬಹುತೇಕರು ಸುಳ್ಳು ಹೇಳಲು ಹಿಂಜರಿದು ತಪ್ಪು ಒಪ್ಪಿಕೊಳ್ಳುತ್ತಿದ್ದರು. ಹಿಂದೆ ಗ್ರಾಮ ಹಳ್ಳದಲ್ಲಿತ್ತು. ಬಹಳ ಹಳ್ಳದಲ್ಲಿದ್ದ ಕಾರಣ ಮಳೆಗಾಲದಲ್ಲಿ ಜೌಗು ಪ್ರದೇಶವಾಗಿ ಹಲವು ಆರೋಗ್ಯ ಸಮಸ್ಯೆಗಳು ಕಾಡುತ್ತಿತ್ತು. ಪರಿಣಾಮ ಈ ಸ್ಥಳವನ್ನು ಸ್ಥಳಾಂತರಿಸಿಕೊಂಡು ಗ್ರಾಮದ ಮೇಲ್ಭಾಗದ ದಿಬ್ಬ ಪ್ರದೇಶದಲ್ಲಿ ಹೊಸದಾಗಿ ಗ್ರಾಮವನ್ನು ಕಟ್ಟಿಕೊಂಡಿದ್ದಾರೆ. ಹೊಸದಾಗಿ ನಿರ್ಮಾಣವಾಗಿರುವ ಬಸವನಹಳ್ಳಿ ಗ್ರಾಮ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿದ್ದು ಜನಸಂಪರ್ಕ, ಸಾರ್ವಜನಿಕ ಸಾರಿಗೆ ಸಂಚಾರಕ್ಕೆ ಸಮಸ್ಯೆ ಇಲ್ಲವಾಗಿದೆ.
ಗ್ರಾಮ ಶಿವಮೊಗ್ಗ-ಮೈಸೂರು ರಾಜ್ಯಹೆದ್ದಾರಿಯಲ್ಲಿದೆ. ಲಕ್ಷ್ಮೀಪುರ ಗ್ರಾಮ ಪಂಚಾಯಿತಿಗೆ ಗ್ರಾಮ ಸೇರಿದೆ. ಸುಮಾರು 45 ಮನೆಗಳಿದ್ದು 490 ಜನಸಂಖ್ಯೆ ಇದೆ. ಹಾಲುಮತಸ್ಥ, ಕಮ್ಮಾರ(ಗೆಜ್ಜಗಾರ), ಅನುಸೂಚಿತ ವರ್ಗ, ಮುಸ್ಲಿಂ ಸಮುದಾಯದವರು ವಾಸಿಸುತ್ತಿದ್ದಾರೆ. ಗ್ರಾಮ ದೇವರಾಗಿ ದಂಡಿನ ಮಾರಮ್ಮ, ಬಿಳಿಗಿರಿರಂಗನಾಥ ಸ್ವಾಮಿ ದೇವರಿದ್ದು, ಇಡೀ ಗ್ರಾಮದವರು ದೇವರನ್ನು ಸಾಮರಸ್ಯದಿಂದ ಶ್ರದ್ಧಾ ಭಕ್ತಿಯಿಂದ ಪೂಜಿಸುತ್ತಾರೆ. ಗ್ರಾಮದಲ್ಲಿ ಭೈರವನ ಒಕ್ಕಲು, ಬಿಳಿಗಿರಿರಂಗನ ಒಕ್ಕಲು, ಮಾರಮ್ಮನ ಒಕ್ಕಲು ಎಂಬ ಪಂಗಡಗಳಿವೆ. ಎಲ್ಲ ಪಂಗಡಗಳ ಆಚರಣೆ ಒಂದಾಗಿದೆ. ಗ್ರಾಮದಲ್ಲಿ ಮೊದಲು ಗ್ರಾಮದೇವರಿಗೆ ಪೂಜಿಸಿ ಹೊಲ, ಗದ್ದೆಗಳಿಗೆ ತೆರಳುವುದು, ಪರಸ್ಥಳಕ್ಕೆ ಸಂಚರಿಸುವುದು ವಾಡಿಕೆಯಾಗಿದೆ.
ಗ್ರಾಮದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆ, ಹಾಲು ಉತ್ಪಾದಕರ ಸಹಕಾರ ಸಂಘ, ಅಂಗನವಾಡಿ ಕೇಂದ್ರ ಇದೆ. ಗ್ರಾಮದಲ್ಲಿ ಸಮೃದ್ಧವಾಗಿ ತೆಂಗು ಬೆಳೆ ಇದೆ. ಸಾಕಷ್ಟು ಬಾಳೆ, ಕಬ್ಬು, ಭತ್ತ, ಜೋಳ, ಹುರುಳಿ ಬೆಳೆಯುತ್ತಾರೆ. ಈಗ ಶುಂಠಿ ಬೆಳೆ ಬೆಳೆಯುತ್ತಿದ್ದಾರೆ. ಇಲ್ಲಿ ಇಟ್ಟಿಗೆ ಕಾರ್ಖಾನೆ ಕೂಡ ಇದ್ದು ಬಲು ಬೇಡಿಕೆ ಕೂಡ ಇದೆ. ಬಲು ಹಿಂದೆ ಗ್ರಾಮದಲ್ಲಿ ಯಾವುದೇ ಶಾಲೆಗಳಿಲ್ಲದೆ ಅಕ್ಷರಸ್ಥರ ಕೊರತೆ ಇತ್ತು. ಗ್ರಾಮ ರಾಜ್ಯ ಹೆದ್ದಾರಿ ಬಳಿಗೆ ಸ್ಥಳಾಂತರವಾದ ತರುವಾಯ ಸುಶಿಕ್ಷಿತರು, ಅಕ್ಷರಸ್ಥರು ಹೆಚ್ಚಿದ್ದಾರೆ. ಗ್ರಾಮದಲ್ಲಿ ಹೇಮಾವತಿ ನಾಲೆ ನೀರು ಹರಿಯುತ್ತಿದೆ. ಬಲು ಹಳ್ಳದಲ್ಲಿ ನಾಲೆ ನೀರು ಹರಿಯುವುದರಿಂದ ಗ್ರಾಮಕ್ಕೆ ಹೇಮಾವತಿ ನಾಲೆ ನೀರಿನ ಭಾಗ್ಯ ಇಲ್ಲವಾಗಿದೆ.
ಮಹಾ ಶಿವರಾತ್ರಿ ಪ್ರಮುಖ ಆಚರಣೆ
ಗ್ರಾಮದಲ್ಲಿ ಪ್ರಧಾನವಾಗಿ ಶಿವರಾತ್ರಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ. ಈ ಹಬ್ಬವೇ ಗ್ರಾಮಕ್ಕೆ ದೊಡ್ಡ ಹಬ್ಬವಾಗಿದ್ದು ಜಾತ್ರೆ ಕೂಡ ಆಗಿದೆ. ಶಿವರಾತ್ರಿ ಹಬ್ಬದಂದು ಮಂದಗೆರೆ ಬಳಿಯ ಹೇಮಾವತಿ ನದಿಗೆ ಗ್ರಾಮದೇವರು ಬಿಳಿಗಿರರಂಗನಾಥ ಉತ್ಸವ ಮೂರ್ತಿ ತೆಗೆದುಕೊಂಡು ಹೋಗಿ ಪುಣ್ಯಸ್ನಾನ ಮಾಡಿಸಲಾಗುತ್ತದೆ. ವಿವಿಧ ಆಭರಣ, ವಸ್ತ್ರ, ಪುಷ್ಪಮಾಲೆಗಳಿಂದ ಅಲಂಕರಿಸಿ ನದಿಯ ದಂಡೆಯಲ್ಲಿ ಪೂಜಿಸುತ್ತಾರೆ. ಅಲ್ಲಿಂದ ಗ್ರಾಮಕ್ಕೆ ಮೆರವಣಿಗೆ ಮೂಲಕ ತರಲಾಗುತ್ತದೆ. ಗ್ರಾಮದ ಮಧ್ಯ ಸಿಗುವ ಹಳ್ಳಿಗಳಲ್ಲಿ ಭಕ್ತರು ಪೂಜೆ ಸಲ್ಲಿಸುತ್ತಾರೆ. ತಮಟೆ ಮದ್ದಳೆ, ಪಂಜಿನ ಆರತಿಯೊಂದಿಗೆ ದೇವರು ಅಂತಿಮವಾಗಿ ಗ್ರಾಮಕ್ಕೆ ತರಲಾಗುತ್ತದೆ. ಇಡೀ ಗ್ರಾಮಸ್ಥರು ದೇಗುಲ ಪ್ರಾಂಗಣದಲ್ಲಿ ಜಮಾಯಿಸುತ್ತಾರೆ. ದೇವರಿಗೆ ವಿವಿಧ ಬಗೆಯ ನೈವೇದ್ಯ ಅರ್ಪಿಸಿ, ಪೂಜಿಸಿ ಸಾಮೂಹಿಕವಾಗಿ ಅನ್ನಪ್ರಸಾದ ಸ್ವೀಕರಿಸುತ್ತಾರೆ.
ಆದ್ರಿ ಮಳೆ ಆರಂಭದ ಮುನ್ನ ಇಡೀ ಗ್ರಾಮದವರು ಒಂದೆಡೆ ಸೇರಿ ಹಬ್ಬದ ಲೆಕ್ಕಾಚಾರ ಹಾಕುತ್ತಾರೆ. ಕನ್ನಂಬಾಡಿ ದೇಗುಲಕ್ಕೆ ತೆರಳಲು ಮುಡಿಪು ಕಾಣಿಕೆ ಸಂಗ್ರಹಿಸುವರು. ದೇಗುಲಕ್ಕೆ ತೆರಳಿ ದೇವಿಗೆ ಬಾಗಿನ, ಅಷ್ಟದ್ರವ್ಯಗಳನ್ನು ಅರ್ಪಿಸಿ ದೇವಿಗೆ ಮಡಿಲು ತುಂಬುತ್ತಾರೆ. ದೇವಿ ಪ್ರಸಾದವನ್ನು ಮುಡಿಪು ಕಟ್ಟಿಕೊಂಡು ಗ್ರಾಮಕ್ಕೆ ತಂದು ಗ್ರಾಮದ ಹೊರವಲಯದಲ್ಲಿ ದೇವಿಯ ಗದ್ದುಗೆ ನಿರ್ಮಿಸಿ ಪೂಜಿಸುತ್ತಾರೆ.
ದಂಡಿನ ಮಾರಮ್ಮನಿಗೆ ಮಾರಿಹಬ್ಬವನ್ನು ಆಚರಿಸಿ, ದೇವಿಗೆ ಪ್ರಿಯವಾದ ತಂಬಿಟ್ಟು, ಅವರೆಕಾಳು, ಮೊಸರನ್ನ ನೈವೇದ್ಯ ಅರ್ಪಿಸುತ್ತಾರೆ. ದೇವಿಗೆ ಎಣ್ಣೆ, ಅರಿಶಿಣ, ಬೇವಿನ ಸೊಪ್ಪಿನ ತನಿ ಎರೆದು ತಂಪು ಮಾಡಲಾಗುತ್ತದೆ. ಗ್ರಾಮಕ್ಕೆ ಯಾವುದೇ ಸಿಡುಬು, ದಡಾರದಂತಹ ರೋಗ ಬಾರದಂತೆ ಪ್ರಾರ್ಥಿಸುತ್ತಾರೆ.
ರೈತರು ತಮ್ಮ ಜಮೀನುಗಳಿಗೆ ದುಷ್ಟ ಶಕ್ತಿ ಸಂಚಾರ ಕಾಡದಂತೆ ಮುನೇಶ್ವರನನ್ನು ಪೂಜಿಸುತ್ತಾರೆ. ಹೊಲಗದ್ದೆಗಳಲ್ಲಿ ಗದ್ದುಗೆ ನಿರ್ಮಿಸಿ ಹಸಿರು ಚಪ್ಪರ ಹಾಕಿ ಪೂಜೆ ಸಲ್ಲಿಸುತ್ತಾರೆ. ಎಲ್ಲ ರೀತಿಯ ಧಾರ್ಮಿಕ ಆಚರಣೆಗಳು ನಡೆಯುತ್ತವೆ. ಗ್ರಾಮಕ್ಕೆ ಕಾಂಕ್ರೀಟ್ ರಸ್ತೆ, ಒಳಚರಂಡಿ ಆಗಬೇಕಿದೆ ಎನ್ನುತ್ತಾರೆ ಗ್ರಾಮಸ್ಥರು.
ಗ್ರಾಮದ ಹಳೆಯ ಊರಿನಲ್ಲಿ ದಂಡಿನಮಾರಮ್ಮ ಗುಡಿ ಇದ್ದರೆ, ಹೊಸ ಊರಿನಲ್ಲಿ ಬಿಳಿಗಿರಿರಂಗನಾಥನ ಗುಡಿ ಇದೆ. ಇಲ್ಲಿನ ಕಮ್ಮಾರರು ತಯಾರಿಸುವ ಕುಡುಗೋಲು, ಲಾಳ, ಪಿಕಾಸಿ, ಗುದ್ದಲಿಯಂತ ಕೃಷಿ ಪರಿಕರಗಳಿಗೆ ಹೆಚ್ಚು ಬೇಡಿಕೆ ಇದೆ.
ಗ್ರಾಮದಲ್ಲಿ ಸಾಮರಸ್ಯವಿದೆ. ನಮ್ಮ ಹಿರಿಯರು ಮಾಡುತ್ತಿದ್ದ ಕಟ್ಟೆಮನೆ ನ್ಯಾಯ ಪಂಚಾಯಿತಿ ಬಲು ಹೆಸರುವಾಸಿಯಾಗಿತ್ತು. ಹಿರಿಯರು ಹಾಕಿಕೊಟ್ಟ ಆದರ್ಶಗಳು ಇಂದಿನನ ಪೀಳಿಗೆಗೆ ದಾರಿ ದೀಪವಾಗಬೇಕಿದೆ. ಕೃಷ್ಣ, ಗ್ರಾಮದ ಕ್ಷಿುುಖಂಡ