ಮಳವಳ್ಳಿ ತಾಲೂಕು ಚಿಕ್ಕಮುಲಗೂಡು ಗ್ರಾಮದಲ್ಲಿ ಆಯೋಜಿಸಿದ್ದ ಬಸವಜ್ಯೋತಿ ಕಾರ್ಯಕ್ರಮವನ್ನು ಷಡಕ್ಷರಿ ದೇಶಿಕೇಂದ್ರ ಸ್ವಾಮೀಜಿ ಉದ್ಘಾಟಿಸಿದರು.
- ಚಿಕ್ಕಮುಲಗೂಡು ಗ್ರಾಮದಲ್ಲಿ ಮನೆ ಮನೆಗೆ ಸೌಹಾರ್ದ ಬಸವಜ್ಯೋತಿ ಕಾರ್ಯಕ್ರಮ
- ಜಗಜ್ಯೋತಿ ಬಸವೇಶ್ವರ ಪತ್ತಿನ ಸೌಹಾರ್ದ ಸಹಕಾರಿ ನಿಯಮಿತದಿಂದ ಆಯೋಜನೆ
ಮಳವಳ್ಳಿ: ಬಸವಣ್ಣ ಹಾಗೂ ಶರಣರು ನೀಡಿರುವ ತತ್ವ, ಆದರ್ಶವನ್ನು ಪಾಲಿಸುವ ಮೂಲಕ ಮಾದರಿ ಬದುಕು ನಡೆಸೋಣ ಎಂದು ಜಗಜ್ಯೋತಿ ಬಸವೇಶ್ವರ ಪತ್ತಿನ ಸೌಹಾರ್ದ ಸಹಕಾರಿ ನಿಯಮಿತ ಜಿಲ್ಲಾಧ್ಯಕ್ಷ ಎಸ್.ನಾಗರಾಜು ಹೇಳಿದರು.
ತಾಲೂಕಿನ ಚಿಕ್ಕಮುಲಗೂಡು ಗ್ರಾಮದಲ್ಲಿ ಜಗಜ್ಯೋತಿ ಬಸವೇಶ್ವರ ಪತ್ತಿನ ಸೌಹಾರ್ದ ಸಹಕಾರಿ ನಿಯಮಿತದಿಂದ ಆಯೋಜಿಸಿದ್ದ ಮನೆ ಮನೆಗೆ ಸೌಹಾರ್ದ ಬಸವಜ್ಯೋತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬಸವಣ್ಣನವರು 12ನೇ ಶತಮಾನದಲ್ಲಿಯೇ ಜನಸಾಮಾನ್ಯರ ಜೀವನ ಹೇಗೆ ನಡೆಸಬೇಕು, ಆಧ್ಯಾತ್ಮಕತೆ ಇರಬೇಕು, ಧಾರ್ಮಿಕತೆ ಇರಬೇಕು ಹಾಗೂ ದ್ವೇಷರಹಿತ, ನೆಮ್ಮದಿಯಾಗಿ ಬದುಕುವ ಸಂಬಂಧ ಬಸವ ತತ್ವ ನೀಡಿದ್ದಾರೆ. ಈ ಸಂಬಂಧ ಅಂದು ಪ್ರತಿದಿನವೂ ಅನುಭವ ಮಂಟಪದಲ್ಲಿ ಚರ್ಚೆ ನಡೆಯುತ್ತಿತ್ತು ಎಂದರು.
ಮನುಷ್ಯನಿಗೆ ನೀರು, ಗಾಳಿ, ಬೆಳಕು, ಮಣ್ಣು, ಮಾತು, ಪಾಲಕರು ಜತೆಗಿದ್ದರೆ ಅದೇ ದೊಡ್ಡ ಸಂಪತ್ತು ಎನ್ನುವ ತತ್ವವನ್ನು ಹೇಳಿದ್ದಾರೆ. ಆದರೆ ಇಂದು ಜನರನ್ನು ಕೇಳಿ, ನಾನು ಚೆನ್ನಾಗಿದ್ದೇನೆಂದು ಹೇಳಲ್ಲ. ಕಾರಣ ತನ್ನ ಬಳಿ ಕಾರು, ಬಂಗಲೆ, ಚಿನ್ನ, ವಜ್ರವಿಲ್ಲವೆನ್ನುತ್ತಾರೆ. ವಾಸ್ತವವಾಗಿ ಆಪತ್ತು ತರುವ ಈ ಸಂಪತ್ತು ಮುಖ್ಯವಲ್ಲ ಎಂದು ಹೇಳಿದರು.
ಮುಡುಕನಪುರ ಗ್ರಾಮದ ಮಠದ ಷಡಕ್ಷರಿ ದೇಶಿಕೇಂದ್ರ ಸ್ವಾಮೀಜಿ ಸಾನಿಧ್ಯ ವಹಿಸಿ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದರು. ಚಿಕ್ಕಮುಲಗೂಡು ಗ್ರಾಮದ ಮಾಜಿ ಉಪಪ್ರಧಾನ ಸಿ.ಕೆ.ರಾಜಶೇಖರ್, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಸಿ.ಕೆ.ಮಹದೇವಸ್ವಾಮಿ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಶಿವನಾಗಪ್ಪ, ವಕೀಲ ಕೆ.ಸತೀಶ್‌ಕುಮಾರ್, ಸಂಘದ ಉಪಾಧ್ಯಕ್ಷ ಡಿ.ದ್ಯಾವಣ್ಣ, ನಿರ್ದೇಶಕರಾದ ಶಿವಕುಮಾರ್, ಮಹಾದೇವಸ್ವಾಮಿ, ಮುಖಂಡರಾದ ದೇವನೂರು ಜಗದೀಶ್, ಮಧುಸೂದನ್, ಮಹೇಶ್, ಗ್ರಾಮದ ಯಜಮಾನರಾದ ಸಿ.ಎಂ.ಪುಟ್ಟಬುದ್ದಿ, ರುದ್ರಸ್ವಾಮಿ, ಕೆಂಪಯ್ಯ, ಸಿ.ಕೆ.ಶಿವಣ್ಣ, ಪಟೇಲ್ ದೇವರಾಜು, ರಾಚಪ್ಪ, ಬೆಣ್ಣೆ ಕೆಂಪಣ್ಣ ಇತರರಿದ್ದರು. ಕಾರ್ಯಕ್ರಮದ ನಂತರ ಅನ್ನದಾಸೋಹ ಆಯೋಜಿಸಲಾಗಿತ್ತು.