ಮಂಡ್ಯದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಬಸವೇಶ್ವರ ಕೇಂದ್ರದ ತಾಲೂಕು ಅಧ್ಯಕ್ಷ ಚನ್ನಪ್ಪ ಮಾತನಾಡಿದರು. 
ಮಂಡ್ಯ

ಮೇ 1ರಂದು ಮಂಗಳ ಮಂಟಪ ಉದ್ಘಾಟನೆ: ಬಸವೇಶ್ವರ ಕೇಂದ್ರದ ತಾಲೂಕು ಅಧ್ಯಕ್ಷ ಚನ್ನಪ್ಪ ಹೇಳಿಕೆ

ಪ್ರಮುಖ ಮುಖ್ಯಾಂಶಗಳು

  • ಮಳವಳ್ಳಿ ತಾಲೂಕಿನ ಡಿ.ಹಲಸಹಳ್ಳಿ ಗ್ರಾಮದಲ್ಲಿ ಆಯೋಜನೆ
  • 40 ಸಾವಿರಕ್ಕೂ ಹೆಚ್ಚು ಭಕ್ತರು ಭಾಗವಹಿಸುವ ನಿರೀಕ್ಷೆ
ಮಂಡ್ಯ: ಮಳವಳ್ಳಿ ತಾಲೂಕಿನ ಡಿ.ಹಲಸಹಳ್ಳಿ ಗ್ರಾಮದಲ್ಲಿ ಮೇ 1ರಂದು ಷಡಕ್ಷರಿ ಮಠ, ದಾಸೋಹ ಮಠ, ಮಹಾಕವಿ ಷಡಕ್ಷರದೇವ ಮಂಗಳ ಮಂಟಪದ ನೂತನ ಕಟ್ಟಡಗಳ ಉದ್ಘಾಟನೆ ಹಾಗೂ ರಾಜಗೋಪುರ ಮತ್ತು ಬಸವ ಮಹಾದ್ವಾರ ಲೋಕಾರ್ಪಣೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಬಸವೇಶ್ವರ ಕೇಂದ್ರದ ತಾಲೂಕು ಅಧ್ಯಕ್ಷ ಚನ್ನಪ್ಪ ತಿಳಿಸಿದರು.
ಕನಕಪುರ ಶ್ರೀ ದೇಗುಲ ಮಠಾಧ್ಯಕ್ಷ ಡಾ.ಮುಮ್ಮಡಿ ನಿರ್ವಾಣ ಸ್ವಾಮೀಜಿ ಹಾಗೂ ಡಾ.ಚನ್ನಬಸವ ಸ್ವಾಮೀಜಿ ನೇತೃತ್ವದಲ್ಲಿ ಏ.27ರಿಂದ 29ರವರೆಗೆ ಮಠದಲ್ಲಿ ಧಾರ್ಮಿಕ ಪೂಜಾ ವಿಧಿ ವಿಧಾನ ನಡೆಯಲಿದೆ. 29ರಂದು ವಿಮಾನಗೋಪುರ ಕಳಶಾರೋಹಣ ಹಾಗೂ ಕುಂಭಾಭಿಷೇಕ ಆಯೋಜಿಸಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಮೇ 1ರಂದು ಧಾರ್ಮಿಕ ಕಾರ್ಯಕ್ರಮದಲ್ಲಿ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಆದಿಚುಂನಗಿರಿ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ದೇಗುಲ ಮಠದ ಡಾ.ಮುಮ್ಮಡಿ ನಿರ್ವಾಣ ಸ್ವಾಮೀಜಿ, ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ, ಗುರುಸಿದ್ದೇಶ್ವರ ಮಠದ ಗವಿಸಿದ್ದೇಶ್ವರ ಸ್ವಾಮೀಜಿ, ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಮಠದ ಡಾ.ನಿಶ್ಚಲಾನಂದನಾಥ ಸ್ವಾಮೀಜಿ, ಡಾ.ಚನ್ನಬಸವ ಸ್ವಾಮೀಜಿ ಸಾನಿಧ್ಯ ವಹಿಸುವರು. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಧಾರ್ಮಿಕ ಸಭೆ ಉದ್ಘಾಟಿಸುವರು, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ರಾಜಗೋಪುರವನ್ನು ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಷಡಕ್ಷರದೇವ ಮಂಗಳ ಮಂಟಪವನ್ನು, ಶಾಸಕ ಎಂ.ಕೃಷ್ಣಪ್ಪ ದಾಸೋಹ ಭವನವನ್ನು, ಶಾಸಕ ಪ್ರಿಯಾಕೃಷ್ಣ ಷಡಕ್ಷರಿ ಗವಿಮಠವನ್ನು ಉದ್ಘಾಟಿಸುವರು. ಅರಣ್ಯ ಸಚಿವ ಈಶ್ವರ ಬಿ.ಖಂಡ್ರೆ ಮಠದ ಕಿರು ಸಂಚಿಕೆ ಬಿಡುಗಡೆ ಮಾಡುವರು. ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಪುಷ್ಪ ನಮನ ಸಲ್ಲಿಸುವರು. ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅಧ್ಯಕ್ಷತೆ ವಹಿಸುವರು ಎಂದರು.
ಅಂದಿನ ಕಾರ್ಯಕ್ರಮಕ್ಕೆ 40 ಸಾವಿರಕ್ಕೂ ಹೆಚ್ಚು ಭಕ್ತರು ಭಾಗವಹಿಸುವ ನಿರೀಕ್ಷೆಯಿದೆ. ಆದ್ದರಿಂದ 50 ಸಾವಿರ ಜನರಿಗೆ ದಾಸೋಹದ ವ್ಯವಸ್ಥೆ ಮಾಡಲಾಗಿದೆ. ಈ ಎಲ್ಲ ಕಟ್ಟಡಗಳ ನಿರ್ಮಾಣಕ್ಕೆ 3 ಕೋಟಿ ರೂ.ಗಳನ್ನು ವ್ಯಯಿಸಲಾಗಿದ್ದು, ರಾಜ್ಯ ಸರ್ಕಾರದಿಂದ 25 ಲಕ್ಷ ರೂ ಅನುದಾನ ನೀಡಲಾಗಿದೆ ಎಂದು ವಿವರಿಸಿದರು.
ಎಚ್.ಅಶೋಕ್, ಎಂ.ಪಿ.ಬಸವರಾಜು, ನಾಗರಾಜು, ಕುಮಾರ್, ಅಶೋಕ್ ಇದ್ದರು.