ಪಾಂಡವಪುರ ಪಟ್ಟಣದ ಸಗಟು ಮತ್ತು ಚಿಲ್ಲರೆ ಅಂಗಡಿಗಳ ದಾಳಿ ನಡೆಸಿದ ಪುರಸಭೆ ಅಧಿಕಾರಿಗಳು ನಿಷೇಧಿತ ಪ್ಲಾಸ್ಟಿಕ್ ಕವರ್, ಗ್ಲಾಸ್‌ಗಳನ್ನು ವಶಕ್ಕೆ ಪಡೆದರು. 
ಮಂಡ್ಯ

ನಿಷೇಧಿತ ಪ್ಲಾಸ್ಟಿಕ್‌ಗಳು ವಶ

ಲಲಾಟಾಕ್ಷ ಎಸ್
ಪಾಂಡವಪುರ: ನಿಷೇಧಿತ ಪ್ಲಾಸ್ಟಿಕ್ ಚೀಲ ಮತ್ತಿತ್ತರ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಸಗಟು ಮತ್ತು ಚಿಲ್ಲರೆ ಅಂಗಡಿಗಳ ಮೇಲೆ ಪುರಸಭೆ ಮುಖ್ಯಾಧಿಕಾರಿ ಸತೀಶ್‌ಕುಮಾರ್ ನೇತೃತ್ವದ ಅಧಿಕಾರಿಗಳ ತಂಡ ಗುರುವಾರ ದಾಳಿ ನಡೆಸಿ ನಿಷೇಧಿತ ಪ್ಲಾಸ್ಟಿಕ್‌ಗಳನ್ನು ವಶಕ್ಕೆ ಪಡೆಯಿತು.
ಪಟ್ಟಣದ ಹಳೇ ಬಸ್ ನಿಲ್ದಾಣ, ನಾಗಮಂಗಲ ರಸ್ತೆ ಹಾಗೂ ಸಿದ್ದಿಮಂಟಪದಲ್ಲಿರುವ ಸಗಟು ಮತ್ತು ಚಿಲ್ಲರೆ ಅಂಗಡಿಗಳ ಮೇಲೆ ದಾಳಿ ನಡೆಸಿದ ಅಧಿಕಾರಿಗಳು ಅಂಗಡಿಯಲ್ಲಿದ್ದ ನಿಷೇಧಿತ ಪ್ಲಾಸ್ಟಿಕ್ ಕವರ್‌ಗಳು, ಪ್ಲಾಸ್ಟಿಕ್ ಲೋಟ, ಚಮಚ ಸೇರಿದಂತೆ ಮಣ್ಣಿನಲ್ಲಿ ಕೊಳೆಯದ ಮತ್ತು ಪರಿಸರಕ್ಕೆ ಹಾನಿ ಮಾಡುವ ವಸ್ತುಗಳನ್ನು ವಶಕ್ಕೆ ಪಡೆದು ಅಂಗಡಿಗಳ ಮಾಲೀಕರಿಗೆ ದಂಡ ವಿಧಿಸಿದರು.
ಚಿಲ್ಲರೆ, ಸಗಟು, ಬೀದಿ ಬದಿ ಹಾಗೂ ಹೂವಿನ ಅಂಗಡಿಗಳ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ಕೆಲ ಅಂಗಡಿಗಳ ಮಾಲೀಕರು ಪುರಸಭೆ ಅಧಿಕಾರಿಗಳ ಜತೆ ಮಾತಿನಚಕಮಕಿ ನಡೆಸಿದರು. ಪ್ಲಾಸ್ಟಿಕ್ ಇಲ್ಲವಾದರೆ ಗ್ರಾಹಕರು ನಮಗೆ ಸಹಕರಿಸುವುದಿಲ್ಲ. ಇದರಿಂದ ವ್ಯಾಪಾರದ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ನಾವು ಪ್ಲಾಸ್ಟಿಕ್ ಕವರ್‌ಗಳನ್ನು ಬಳಸುತ್ತಿದ್ದೇವೆ. ಸರ್ಕಾರದ ಆದೇಶ ನಮಗೆ ತಿಳಿದಿಲ್ಲ ಎಂದು ವಾಗ್ವಾದ ನಡೆಸಿದರು.
ಅಂಗಡಿ ಮಾಲೀಕರಿಗೆ ತಿಳಿ ಹೇಳಿದ ಪುರಸಭೆ ಮುಖ್ಯಾಧಿಕಾರಿ ಸತೀಶ್‌ಕುಮಾರ್, ನಿಷೇಧಿತ ಪ್ಲಾಸ್ಟಿಕ್‌ಗಳನ್ನು ಮಾರಾಟ ಮಾಡದಂತೆ ಸರ್ಕಾರ ಈ ಹಿಂದೆಯೇ ಆದೇಶ ಹೊರಡಿಸಿದೆ. ಅದರಂತೆ ನಾವು ಕ್ರಮ ಕೈಗೊಳ್ಳುತ್ತಿದ್ದೇವೆ. ನಿಯಮಗಳನ್ನು ಪಾಲಿಸದಿದ್ದರೆ ಅಂಗಡಿಗಳಿಗೆ ನೀಡಿರುವ ಪರವಾನಗಿ ರದ್ದುಪಡಿಸಲಾಗುವುದು. ಪ್ಲಾಸ್ಟಿಕ್ ಬಳಕೆ ವಿಚಾರದಲ್ಲಿ ಮರು ಬಳಕೆಗೆ ಪೂರಕಾದ ಪ್ಲಾಸ್ಟಿಕ್‌ಗಳನ್ನು ಮಾತ್ರ ಬಳಸಬೇಕು. ಇಲ್ಲವಾದರೆ ದಂಡದ ಜತೆಗೆ ಕಾನೂನು ಕ್ರಮ ವಹಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪುರಸಭೆ ಮುಖ್ಯಾಧಿಕಾರಿ ಸತೀಶ್ ಮಾತನಾಡಿ, ಪ್ಲಾಸ್ಟಿಕ್ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಸರ್ಕಾರ ಪ್ಲಾಸ್ಟಿಕ್ ನಿಷೇಧಿಸಿದ್ದರೂ ಕೆಲ ಅಂಗಡಿ ಮಾಲೀಕರು ಮಾರಾಟ ಮಾಡುತ್ತಿದ್ದ ಹಿನ್ನೆಲೆಯಲ್ಲಿ ನಿಷೇಧಿತ ವಸ್ತುಗಳನ್ನು ವಶಪಡಿಸಿಕೊಂಡು ಅಂಗಡಿ ಮಾಲೀಕರಿಗೆ ದಂಡ ವಿಧಿಸಿ ತಿಳಿವಳಿಕೆ ನೀಡಲಾಗಿದೆ. ಇದರ ಹೊರತಾಗಿಯೂ ಮಾರಾಟ ಮಾಡಿದರೆ ಅಂಗಡಿ ಪರವಾನಗಿ ರದ್ದು ಮಾಡಿ ಬಾಗಿಲು ಮುಚ್ಚಿಸಬೇಕಾಗುತ್ತದೆ ಎಂದರು.
ದಾಳಿ ವೇಳೆ ಪುರಸಭೆ ಆರೋಗ್ಯಾಧಿಕಾರಿ ಮಂಜುನಾಥ್, ಪರಿಸರ ಇಂಜಿನಿಯರ್ ಎಂ.ಸಿ.ಸಹನಾಗೌಡ, ಅಧಿಕಾರಿಗಳಾದ ಮಹೇಶ್, ಪೌರಕಾರ್ಮಿಕರಾದ ಗಣೇಶ್, ಕೃಷ್ಣ ಇದ್ದರು.