ಮಂಡ್ಯ ನಗರದಲ್ಲಿ ಕರ್ನಾಟಕ ಗ್ರಾಮೀಣ ಬ್ಯಾಂಕ್ ನೌಕರರು ಪ್ರತಿಭಟನೆ ನಡೆಸಿದರು.
- ಎಲ್ಲ ಶನಿವಾರವೂ ರಜೆ ಘೋಷಣೆಗೆ ಒತ್ತಾಯ
- ಬ್ಯಾಂಕ್ ನೌಕರರಿಂದ ಪ್ರತಿಭಟನೆ
- ಕೇಂದ್ರ ಸರ್ಕಾರಕ್ಕೆ ಮನವಿ
ಮಂಡ್ಯ: ವಾರದಲ್ಲಿ ಐದು ದಿನವಷ್ಟೇ ಕೆಲಸ ಮಾಡಬೇಕೆಂಬ ನಿಯಮ ಜಾರಿಗೆ ಒತ್ತಾಯಿಸಿ ಕರ್ನಾಟಕ ಗ್ರಾಮೀಣ ಬ್ಯಾಂಕ್ ನೌಕರರು ಮಂಗಳವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ಬ್ಯಾಂಕ್ ಎದುರು ಜಮಾಯಿಸಿದ ನೌಕರರು, ತಮ್ಮ ನ್ಯಾಯಯುತ ಬೇಡಿಕೆ ಈಡೇರಿಸಬೇಕೆಂದು ಆಗ್ರಹಿಸಿ ಘೋಷಣೆ ಕೂಗಿದರು. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಐದು ದಿನಗಳ ಕೆಲಸದ ವಾರವನ್ನು ಜಾರಿಗೊಳಿಸುವಂತೆ ಸರ್ಕಾರದಿಂದ ಅನುಮೋದನೆ ಪಡೆಯಲು ಮುಷ್ಕರ ನಡೆಯುತ್ತಿದೆ. ಇದನ್ನು ಬೆಂಬಲಿಸಿ ಪ್ರತಿಭಟನೆ ಮಾಡಲಾಗುತ್ತಿದೆ ಎಂದರು.
ಭಾರತೀಯ ಬ್ಯಾಂಕ್‌ಗಳ ಸಂಘ ಮತ್ತು ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ ನಡುವೆ 2023 ಡಿ.7ರಂದು ಸಹಿ ಮಾಡಲಾದ ಒಪ್ಪಂದ ಪತ್ರ ಹಾಗೂ 2024 ಮಾ.8ರಂದು ಹೊರಡಿಸಲಾದ ಜಂಟಿ ಟಿಪ್ಪಣಿಯಂತೆ ಎಲ್ಲ ಶನಿವಾರಗಳನ್ನು ಬ್ಯಾಂಕ್ ರಜಾದಿನಗಳಾಗಿ ಘೋಷಿಸುವಂತೆ ಶಿಫಾರಸು ಮಾಡಲಾಗಿದೆ. ಹಣಕಾಸು ಕ್ಷೇತ್ರದಲ್ಲಿ ಈಗಾಗಲೇ ಆರ್‌ಬಿಐ, ಎಲ್‌ಐಸಿ ಹಾಗೂ ಜಿಐಸಿ ಸಂಸ್ಥೆಗಳು ಕೇಂದ್ರ ಸರ್ಕಾರ ಹಾಗೂ ಬಹುತೇಕ ರಾಜ್ಯ ಸರ್ಕಾರಗಳಂತೆ ದೀರ್ಘಕಾಲದಿಂದಲೇ ಐದು ದಿನಗಳ ಕೆಲಸದ ವಾರವನ್ನು ಅನುಸರಿಸುತ್ತಿವೆ. ಅವರೆಲ್ಲ ಕಚೇರಿ ಸೋಮವಾರದಿಂದ ಶುಕ್ರವಾರದವರೆಗೆ ಮಾತ್ರ ಕಾರ್ಯನಿರ್ವಹಿಸುತ್ತಿವೆ. ಷೇರು ಮಾರುಕಟ್ಟೆಗಳು ಇದೇ ಮಾದರಿ ಅನುಸರಿಸುತ್ತಿವೆ. ಹಣದ ಮಾರುಕಟ್ಟೆ, ವಿದೇಶಿ ವಿನಿಮಯ ವ್ಯವಹಾರಗಳು ಶನಿವಾರ ಮತ್ತು ಭಾನುವಾರ ಮುಚ್ಚಿರುತ್ತವೆ ಎಂದು ವಿವರಿಸಿದರು.
ಈ ಹಿನ್ನೆಲೆಯಲ್ಲಿ ಬ್ಯಾಂಕ್ ಉದ್ಯೋಗಿಗಳು ತಮಗೆ ಮಾತ್ರ ತಾರತಮ್ಯ ಮಾಡಲಾಗುತ್ತಿದೆಂಬ ಭಾವನೆ ಹೊಂದಿದ್ದಾರೆ. ಬ್ಯಾಂಕ್‌ಗಳಲ್ಲಿ ಕೆಲಸ ಮಾಡುವುದು ಅತ್ಯಂತ ಒತ್ತಡದಾಯಕವಾಗಿದ್ದು, ಸಿಬ್ಬಂದಿಯ ತೀವ್ರ ಕೊರತೆ ಹಾಗೂ ಅನೇಕ ಒತ್ತಡಗಳ ಕಾರಣದಿಂದ ದೈಹಿಕ ಮತ್ತು ಮಾನಸಿಕ ಒತ್ತಡದ ನಡುವೆ ಕೆಲಸ ಮಾಡುತ್ತಿದ್ದಾರೆ ಎಂಬುದು ಸರ್ಕಾರಕ್ಕೆ ತಿಳಿದಿರುವ ವಿಷಯವೇ ಆಗಿದೆ. ಆದ್ದರಿಂದ, ಎಲ್ಲ ಶನಿವಾರಗಳನ್ನು ರಜಾದಿನಗಳಾಗಿ ಘೋಷಿಸುವ ನಮ್ಮ ಬೇಡಿಕೆ ಸಂಪೂರ್ಣವಾಗಿ ನ್ಯಾಯಸಮ್ಮತವಾಗಿದೆ. ಈ ಕುರಿತು ಭಾರತ ಸರ್ಕಾರವು ತಕ್ಷಣ ಅನುಮೋದನೆ ನೀಡಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ನೌಕರರಾದ ನಾಗೇಶ್, ಪ್ರದೀಪ್, ವಿಜಯ್, ನಿತಿನ್, ಪುಟ್ಟಸ್ವಾಮಿ ಇತರರಿದ್ದರು.