ಪಾಂಡವಪುರ ಪಟ್ಟಣದಲ್ಲಿ ಏರ್ಪಡಿಸಿದ್ದ ನಾಡುಪ್ರಭು ಕೆಂಪೇಗೌಡರ ಜಯಂತಿ ಕಾರ್ಯಕ್ರಮವನ್ನು ಶಾಸಕ ದರ್ಶನ್ ಪುಟ್ಟಣ್ಣಯ್ಯ, ಎಸಿ ಶ್ರೀನಿವಾಸ್ ಉದ್ಘಾಟಿಸಿದರು. ಅಂಕೇಗೌಡ, ಪ್ರಭಾ, ವೀಣಾ, ಯೋಗೇಶ್ ಇತರರು ಇದ್ದರು.
ಪಾಂಡವಪುರ: ನಾಡಪ್ರಭ ಕೆಂಪೇಗೌಡರು ನಿರ್ಮಿಸಿರುವ ಬೆಂಗಳೂರು ನಗರವು ದೇಶದಲ್ಲಿಯೇ ಅತ್ಯಂತ ಸುರಕ್ಷಿತವಾದ ನಗರವಾಗಿದೆ ಎಂದು ಉಪವಿಭಾಗಾಧಿಕಾರಿ ಶ್ರೀನಿವಾಸ್ ಹೇಳಿದರು.
ಪಟ್ಟಣದ ತಾಲೂಕು ಕಚೇರಿಯ ಆವರಣದಲ್ಲಿ ತಾಲೂಕು ಆಡಳಿತ, ಒಕ್ಕಲಿಗರ ಸಂಘದ ವತಿಯಿಂದ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದರು.
ಕೆಂಪೇಗೌಡರು ದೂರದೃಷ್ಟಿ ಇಟ್ಟುಕೊಂಡು ಬೆಂಗಳೂರು ನಗರವನ್ನು ನಿರ್ಮಾಣ ಮಾಡಿದ್ದಾರೆ. ಎಲ್ಲ ವರ್ಗದ ಜನರು, ಶ್ರಮಿಕರು ಉತ್ಪಾದಿಸುವ ವಸ್ತುಗಳ ವ್ಯಾಪಾರಕ್ಕೆ ಅನುಕೂಲವಾಗಲು ಪೇಟೆಗಳನ್ನು ನಿರ್ಮಾಣ ಮಾಡಿದರು ಎಂದು ತಿಳಿಸಿದರು.
ಕುಡಿಯುವ ನೀರು, ವ್ಯವಸಾಯಕ್ಕೆ ಪೂರಕವಾಗಿ ನೂರಾರು ಕೆರೆಗಳನ್ನು ನಿರ್ಮಾಣ ಮಾಡಿದರು. ಜನರ ಭಕ್ತಿ, ನೆಮ್ಮದಿಗಾಗಿ ದೇವಾಯಲಗಳನ್ನು ಕಟ್ಟಿಸಿದರು. ಎಲ್ಲ್ಲ ವರ್ಗದ ಜನರು ತಮ್ಮ ದುಡಿಮೆಗೆ ತಕ್ಕ ಪ್ರತಿಲ ಸಿಗುವಂತಹ ನಗರವನ್ನು ಕಟ್ಟಿ ಕೆಂಪೇಗೌಡರು ಮಾದರಿಯಾಗಿದ್ದಾರೆ ಎಂದರು.
ಕೆಂಪೇಗೌಡರು ಕಟ್ಟಿದಂತಹ ಬೆಂಗಳೂರು ಪ್ರಸ್ತುತ ಬೃಹತ್ ಪ್ರಮಾಣದಲ್ಲಿ ಬೆಳೆದಿದೆ. ಎಲ್ಲ ಕ್ಷೇತ್ರಗಳಲ್ಲೂ ವೇಗವಾಗಿ ಮುಂದೆ ಸಾಗುತ್ತಿದೆ. ಐಟಿ, ಬಿಟಿ ಕ್ಷೇತ್ರದ ಪ್ರಮುಖ ಕೇಂದ್ರವಾಗಿದೆ. ಇದಕ್ಕೆಲ್ಲ ಭದ್ರ ಅಡಿಪಾಯ ಹಾಕಿದ ಕೆಂಪೇಗೌಡರ ಹೆಸರು ಚಿರಸ್ಥಾಯಿಯಾಗಿ ಉಳಿಯಲಿದೆ ಎಂದರು.
ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾತನಾಡಿ, ನಾಡಪ್ರಭು ಕೆಂಪೇಗೌಡರು ಎಲ್ಲರಿಗೂ ಆದರ್ಶವಾಗಿದ್ದು, ಅವರು ದೂರದೃಷ್ಟಿ ಇಟ್ಟುಕೊಂಡಿದ್ದರು. ಅವರು ಹಾಕಿಕೊಟ್ಟಂತಹ ಮಾರ್ಗದರ್ಶನದಲ್ಲಿ ನಾವೆಲ್ಲ ಮುನ್ನಡೆಯಬೇಕು ಎಂದರು.
ನಾವು ಕೆರೆಕಟ್ಟೆಗಳನ್ನು ಸಂರಕ್ಷಣೆ ಮಾಡುವ ಜತೆಗೆ ನೀರು ಸದ್ಬಳಕೆಯ ಕಡೆಗೂ ಗಮನ ನೀಡಬೇಕು. 1927ರಲ್ಲಿ ಬ್ರಿಟಿಷರು ಕೆರೆಕಟ್ಟೆಗಳು, ನಾಲೆಗಳನ್ನೆಲ್ಲ ಮ್ಯಾಪ್ ಮಾಡಿ ಇಟ್ಟಿದ್ದರು. ಆದರೀಗ ಹಲವು ನಾಲೆಗಳು ಕಣ್ಮರೆಯಾಗಿವೆ. ಮಳೆಯಿಂದ ಉಂಟಾಗುವ ಹಾನಿಗೆ ಪರಿಹಾರ ಕಂಡುಕೊಳ್ಳಬೇಕು ಎಂದರೆ ನಾಲೆಗಳು, ರಾಜಕಾಲುವೆಗಳ ಸರಿಯಾದ ನಿರ್ವಹಣೆ ಆಗಬೇಕು ಎಂದರು.
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಪುಸ್ತಕ ಪ್ರೇಮಿ ಅಂಕೇಗೌಡ, ತಹಸೀಲ್ದಾರ್ ಪ್ರಭಾ, ಇಒ ವೀಣಾ, ಒಕ್ಕಲಿಗರ ಸಂಘದ ತಾಲೂಕು ಅಧ್ಯಕ್ಷ ಯೋಗೇಶ್, ಸಿ.ಆರ್.ರಮೇಶ್, ದಯಾನಂದ್, ದೀಪು, ರಾಮಚಂದ್ರು, ಮನು, ಟಿಎಚ್‌ಒ ಅರವಿಂದ್, ಬಿ.ಜೆ.ಸ್ವಾಮಿ, ಕಣಿವೆ ರಾಮು, ಟಿಎಪಿಸಿಎಂಎಸ್ ನಿರ್ದೇಶಕ ಆದರ್ಶ, ಅಂಕಯ್ಯ, ಸಬ್ ಇನ್ಸ್‌ಪೆಕ್ಟರ್ ಉಮೇಶ್ ಸೇರಿದಂತೆ ಹಲವರು ಇದ್ದರು.