ನಾಗಮಂಗಲ ಪಟ್ಟಣದ ತಾಲೂಕು ಆಡಳಿತ ಸೌಧದ ಒಳಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡರ 517ನೇ ಜಯಂತ್ಯುತ್ಸವ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರನ್ನು ಸನ್ಮಾನಿಸಲಾಯಿತು. ಬಿ.ಎಸ್.ಸತೀಶ್,ಪಿ ಬಿ.ಚಲುವರಾಜು ಇತರರಿದ್ದರು. 
ಮಂಡ್ಯ

ಬೆಂಗಳೂರು ವಿಶ್ವಕ್ಕೆ ಮಾದರಿ

ಪ್ರಜ್ವಲ್.ಎನ್

ಪ್ರಮುಖ ಮುಖ್ಯಾಂಶಗಳು

  • ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷ ಸಚಿನ್ ಚಲುವರಾಯಸ್ವಾಮಿ ಅಭಿಪ್ರಾಯ
ನಾಗಮಂಗಲ: ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ನಾಡಹಬ್ಬ ದಸರದಷ್ಟೇ ವಿಜೃಂಭಣೆಯಿಂದ ಆಚರಿಸುವಂತಾಗಬೇಕು ಎಂದು ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷ ಸಚಿನ್ ಚಲುವರಾಯಸ್ವಾಮಿ ಹೇಳಿದರು.
ಪಟ್ಟಣದ ತಾಲೂಕು ಆಡಳಿತ ಸೌಧದ ಒಳಾಂಗಣದಲ್ಲಿ ತಾಲೂಕು ಆಡಳಿತದಿಂದ ಶನಿವಾರ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡರ 517ನೇ ಜಯಂತ್ಯುತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ಸಮಾಜಮುಖಿ ಆಡಳಿತ ನೀಡುವ ಜತೆಗೆ ಜನಪರ ಸೇವೆ ಮಾಡುವ ಇಚ್ಛಾಸಕ್ತಿಯನ್ನು ಕೆಂಪೇಗೌಡರು ಹೊಂದಿದ್ದರಿಂದ ಒಳ್ಳೆಯ ನಾಡು ನಿರ್ಮಾಣ ಮಾಡಲು ಸಾಧ್ಯವಾಯಿತು. ಆದ್ದರಿಂದಲೇ ಇಂದಿಗೂ ಅವರನ್ನು ಪೂಜಿಸಲಾಗುತ್ತಿದೆ. ಆ ನಿಟ್ಟಿನಲ್ಲಿ ಕೆಂಪೇಗೌಡರ ಕಾಯಕ ಪ್ರಸ್ತುತ ಮತ್ತು ಭವಿಷ್ಯಕ್ಕೂ ಮಾರ್ಗದರ್ಶಿಯಾಗಿರಲಿದೆ. ಕೆಂಪೇಗೌಡರು ನಿರ್ಮಿಸಿದ ಬೆಂಗಳೂರು ಕೇವಲ ನಮ್ಮ ರಾಜ್ಯಕ್ಕೆ ಮಾತ್ರವಲ್ಲದೆ ಇಡೀ ವಿಶ್ವಕ್ಕೆ ಅನ್ನ ನೀಡುತ್ತಿದೆ. ಮೈಸೂರಿನ ದಸರಾ ಹಬ್ಬ ಎಷ್ಟು ಪ್ರಸಿದ್ಧಿ ಹೊಂದಿದೆಯೋ ಅಷ್ಟೇ ಪ್ರಸಿದ್ಧಿಯನ್ನು ಕೆಂಪೇಗೌಡರಿಗೂ ನೀಡುವ ಮೂಲಕ ಇವರ ಜಯಂತಿಯನ್ನು ನಾಡಹಬ್ಬದಷ್ಟೆ ವಿಜೃಂಭಣೆಯಿಂದ ಆಚರಿಸುವಂತಾಗಬೇಕು ಎಂದರು.
ತಹಸೀಲ್ದಾರ್ ಜಿ.ಆದರ್ಶ್ ಮಾತನಾಡಿ,ನಾಡಪ್ರಭು ಕೆಂಪೇಗೌಡರ ಕನಸು ಮತ್ತು ದೂರದೃಷ್ಟಿಯಿಂದಾಗಿ ಬೆಂಗಳೂರು ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುತ್ತಿದೆ. ಅವರು ಹಾಕಿಕೊಂಡಿದ್ದ ಅಡಿಪಾಯ, ಕೈಗೊಂಡಿದ್ದ ಯೋಜನೆಗಳಿಂದಾಗಿ ಎಲ್ಲ ವರ್ಗದ ಜನರಿಗೆ ಬಹಳಷ್ಟು ಅನುಕೂಲವಾಗುತ್ತಿದೆ. ಅವರು ಕೇವಲ ಆಡಳಿತಗಾರರಾಗಿರಲಿಲ್ಲ. ಜನಪರ ಆಡಳಿತ, ಪ್ರಜೆಗಳ ಹಿತಾಸಕ್ತಿಯನ್ನೇ ಮುಖ್ಯ ಗುರಿಯಾಗಿಸಿಕೊಂಡಿದ್ದರು. ನೀರಿನ ಸಂರಕ್ಷಣೆ, ಜಲ ಕಲ್ಯಾಣಕ್ಕಾಗಿ ಹಲವಾರು ಕೆರೆಗಳನ್ನು ನಿರ್ಮಿಸಿದ್ದರು. ಅಂತಹ ಕೆರೆಗಳನ್ನು ಇಂದು ಕಾಪಾಡಿಕೊಳ್ಳಲು ಸಾಧ್ಯವಾಗದಿರುವುದು ದುರದೃಷ್ಟಕರ ಎಂದರು.
ಐವರು ಸಾಧಕರಿಗೆ ಸನ್ಮಾನ: ಸಮಾರಂಭದ ವೇದಿಕೆಯಲ್ಲಿ ಕಳೆದ ಯುಪಿಎಸ್‌ಸಿ ಪರೀಕ್ಷೆಯಲ್ಲಿ 554ನೇ ರ‌್ಯಾಂಕ್ ಪಡೆದು ತೇರ್ಗಡೆ ಹೊಂದಿರುವ ತಾಲೂಕಿನ ಕರಡಹಳ್ಳಿ ಗ್ರಾಮದ ಆರ್.ದನಂಜಯ, ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಮಕ್ಕಳ ತಜ್ಞ ಡಾ.ಬಿ.ಸಿ. ಆದಿತ್ಯಕುಮಾರ್, ಯಕ್ಷಗಾನ ಕಲಾವಿದ ಶ್ರೀಧರ್, ನಿವೃತ್ತ ಶಿಕ್ಷಕ ರಾಮಸ್ವಾಮಿಗೌಡ, ಬಾಯ್ಲರ್ ಕೈಗಾರಿಕಾ ಘಟಕದ ನಿರ್ದೇಶಕ ಡಿ.ಸಿ.ಜಗದೀಶ್ ಹಾಗೂ ಪ್ರಗತಿಪರ ಯುವ ರೈತ ಪರಮೇಶ್ ಅವರನ್ನು ತಾಲೂಕು ಆಡಳಿತದ ವತಿಯಿಂದ ಸನ್ಮಾನಿಸಲಾಯಿತು.
ತಾಲೂಕಿನ ಕದಬಹಳ್ಳಿಯ ಕಿತ್ತೂರುರಾಣಿ ಚನ್ನಮ್ಮ ವಸತಿ ಶಾಲೆಯ ಪ್ರಾಂಶುಪಾಲೆ ಜಿ.ಬಿ.ಅನಿತ ಅವರು ನಾಡಪ್ರಭು ಕೆಂಪೇಗೌಡರ ಕುರಿತಾಗಿ ಮಾತನಾಡಿದರು. ಇದಕ್ಕೂ ಮುನ್ನ ನಾಡಪ್ರಭು ಕೆಂಪೇಗೌಡರ ಭಾವಚಿತ್ರವನ್ನು ತೆರೆದ ವಾಹನದಲ್ಲಿರಿಸಿ ಪಟ್ಟಣದ ಶ್ರೀ ಸೌಮ್ಯಕೇಶವಸ್ವಾಮಿ ದೇವಸ್ಥಾನದ ಮುಂಭಾಗದಿಂದ ಪೂರ್ಣಕುಂಭ ಹಾಗೂ ವಿವಿಧ ಜಾನಪದ ಕಲಾ ತಂಡಗಳೊಂದಿಗೆ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಲಾಯಿತು.
ತಾಪಂ ಇಒ ಬಿ.ಎಸ್.ಸತೀಶ್, ಡಿವೈಎಸ್ ಪಿ ಬಿ.ಚಲುವರಾಜು, ಪುರಸಭೆ ಮುಖ್ಯಾಧಿಕಾರಿ ವೀಣಾ, ಸಮಾಜ ಕಲ್ಯಾಣಾಧಿಕಾರಿ ರಾಘವೇಂದ್ರ, ಟಿಎಚ್‌ಒ ಡಾ.ನಾರಾಯಣ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜೆ.ವೈ.ಮಂಜುನಾಥ್, ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಸಿ.ಎನ್.ಮಂಜುನಾಥ್, ಟೌನ್ ಒಕ್ಕಲಿಗರ ಸಂಘದ ಅಧ್ಯಕ್ಷ ಎನ್.ಟಿ.ರಾಜು, ಟಿಎಪಿಸಿಎಂಎಸ್ ಅಧ್ಯಕ್ಷ ಬಿ.ಎಂ.ಪ್ರಕಾಶ್, ದಸಂಸ ಮುಖಂಡ ಎಂ.ನಾಗರಾಜಯ್ಯ, ಕನ್ನಡ ಸಂಘದ ಎನ್.ನಟರಾಜ್, ನಿವೃತ್ತ ದೈಹಿಕ ಶಿಕ್ಷಣಾಧಿಕಾರಿ ಶಿವಣ್ಣಗೌಡ, ವಿವಿಧ ಇಲಾಖೆಗಳ ಅಧಿಕಾರಿಗಳು, ಸಂಘ ಸಂಸ್ಥೆಗಳ ಮುಖ್ಯಸ್ಥರು ಸೇರಿದಂತೆ ಹಲವರು ಇದ್ದರು.