ಕಿಕ್ಕೇರಿಯಲ್ಲಿ ಬಂದಮ್ಮ ದೇವಿಯ ಹಬ್ಬವನ್ನು ತಂಬಿಟ್ಟಿನ ಅರತಿ ಮೆರವಣಿಗೆ ಮೂಲಕ ಸಡಗರದಿಂದ ಆಚರಿಸಿದರು.
ಕಿಕ್ಕೇರಿ: ಇಲ್ಲಿನ ಕೋಟೆ ಆಂಜನೇಯ ಗಣಪತಿ ದೇಗುಲದಲ್ಲಿ ಇತ್ತೀಚೆಗೆ ಬಂದಮ್ಮನ ಹಬ್ಬವಿಜೃಂಭಣೆಯಿಂದ ನಡೆಯಿತು.
ಕೋಟೆ ಗಣಪತಿ, ಆಂಜನೇಯ, ಉಪ್ಪರಿಗೆ ಬಸವೇಶ್ವರನಿಗೆ ಪೂಜೆ ಸಲ್ಲಿಸಿ ಹಬ್ಬದ ಮೆರವಣಿಗೆ ಆರಂಭವಾಯಿತು. ಮಹಿಳೆಯರು ಶ್ರದ್ಧಾಭಕ್ತಿಯಿಂದ ಪೂಜೆ ಸಲ್ಲಿಸಿದರು. ತಂಬಿಟ್ಟಿನ ರಾಗಿದೀವಿಗೆ ಆರತಿಯನ್ನು ತಯಾರಿಸಿ, ತಲೆಯ ಮೇಲೆ ತಂಬಿಟ್ಟು ಹೊತ್ತುಕೊಂಡು ಗ್ರಾಮ ಮುಖಂಡರೊಂದಿಗೆ ಮೆರವಣಿಗೆಯಲ್ಲಿ ಸಾಗಿದರು.
ಮೆರವಣಿಗೆ ಮುಂದೆ ತಮಟೆ ವಾದ್ಯ, ಪಂಜಿನ ಆರತಿ ಸಾಗಿತು. ಗ್ರಾಮದ ಹೊರವಲಯದಲ್ಲಿ ಬಂದಮ್ಮ ದೇವಿ ಗದ್ದುಗೆ ತಯಾರಿಸಲಾಯಿತು. ಗುಮಚಿಕಲ್ಲಿನ ದೇವಿ ಗದ್ದುಗೆಗೆ ಅರಿಶಿಣ, ಕುಂಕುಮ, ಪುಷ್ಪಗಳಿಂದ ಅಲಂಕರಿಸಲಾಯಿತು. ದೂಪ ದೀಪದ ಆರತಿ ಬೆಳಗಲಾಯಿತು. ಹಣ್ಣು ಕಾಯಿ ಇಟ್ಟು, ತಂಬಿಟ್ಟು, ಚಿಗಣಿ ನೈವೇದ್ಯ ಅರ್ಪಿಸಲಾಯಿತು. ಭಕ್ತಾದಿಗಳಿಗೆ ಚಿಗಣಿ ಪ್ರಸಾದ ವಿತರಿಸಲಾಯಿತು.
ಇದಕ್ಕೂ ಮುನ್ನ ಅರಳಿಕಟ್ಟೆ ಬಳಿಯ ಬಂದಮ್ಮ ಗುಡಿಗೆ ಗ್ರಾಮದ ಹಿರಿಯರು ತೆರಳಿ ಮಾಂಸದ ಅಡುಗೆ ನೈವೇದ್ಯ ಅರ್ಪಿಸಿದರು. ಮಳೆ, ಬೆಳೆ ಸಮೃದ್ಧಿಗಾಗಿ ದೇವಿಯಲ್ಲಿ ಪ್ರಾರ್ಥಿಸಲಾಯಿತು.