ಬಳ್ಳೇಕೆರೆ ಗ್ರಾಮದ ಕೆರೆ 
ಮಂಡ್ಯ

ಬಳ್ಳೇಕೆರೆ ಗ್ರಾಮ ನಿಸರ್ಗವಾಚಿ

ಪ್ರಮುಖ ಮುಖ್ಯಾಂಶಗಳು

  • ಬಾಳೆ ಬೆಳೆಗೆ ಪ್ರಸಿದ್ಧ
  • ಜೈನರು ವಾಸವಾಗಿದ್ದ ಪ್ರಾಚೀನ ಹಳ್ಳಿ
  • ಸಾಂಸ್ಕೃತಿಕ ಇತಿಹಾಸದ ಮೇಲೆ ಬೆಳಕು ಚೆಲ್ಲುವ ವೀರಗಲ್ಲು
ಕೆ.ಆರ್.ಪೇಟೆ: ತಾಲೂಕಿನ ಬೂಕನಕೆರೆ ಹೋಬಳಿ ಬಳ್ಳೇಕೆರೆ ಗ್ರಾಮ ಜೈನರು ವಾಸವಾಗಿದ್ದ ಪ್ರಾಚೀನ ಪ್ರಸಿದ್ಧ ಗ್ರಾಮ. ಹಲವು ವಿಶೇಷಗಳಿಗೆ ಹೆಸರುವಾಸಿಯಾಗಿದೆ.
ಬಳ್ಳೇಕೆರೆ ಎಂಬುದು ನಿಸರ್ಗವಾಚಿ, ಕೆರೆಯಂಚಿನಲ್ಲಿ ಬೆಳೆಯುವ ಬಳ್ಳೇಸೊಪ್ಪಿನ ಬಾಹುಳ್ಳದಿಂದಾಗಿ, ಹಿಂದೊಮ್ಮೆ ಈ ಊರು ಬಾಳೆ ಬೆಳೆಗೆ ಪ್ರಸಿದ್ಧಿಯಾಗಿದ್ದುದರಿಂದ, ಬಾಳೇಕೆರೆ ಎಂದಾಗಿ ತದನಂತರ ಬಳ್ಳೇಕೆರೆಯಾಯಿತೆಂದು ಜನಪದರ ಮಾತಿದೆ.
ಪಟ್ಟಣದಿಂದ ಐದು ಕಿ.ಮಿ. ದೂರದಲ್ಲಿ ಬಳ್ಳೇಕೆರೆ ಗ್ರಾಮವಿದೆ. ಸುಮಾರು ಏಳುನೂರು ವರುಷಗಳ ಪ್ರಾಚೀನತೆ ಹೊಂದಿದೆ. ದೊಡ್ಡಗ್ರಾಮವಾದರಿಂದ ಗ್ರಾಪಂ ಕೇಂದ್ರಸ್ಥಾನವಾಗಿದೆ. ಗ್ರಾಮ ಕೃಷಿ ಪ್ರಧಾನವಾಗಿದ್ದು ಭತ್ತ, ಕಬ್ಬು, ತೆಂಗು, ಅಡಿಕೆ, ರೇಷ್ಮೆ ಬಾಳೆ ಹಾಗೂ ತರಕಾರಿ ಪ್ರಮುಖವಾಗಿ ಬೆಳೆಯಲಾಗುತ್ತಿದೆ. ಹಿಂದೆ ಬಾಳೆ ಬೇಸಾಯಕ್ಕೆ ಬಳ್ಳೇಕೆರೆಯು ಪ್ರಖ್ಯಾತಿಯಾಗಿತ್ತು.
ಐತಿಹಾಸಿಕವಾಗಿ ಈ ಗ್ರಾಮಕ್ಕೆ ಒಂದು ವಿಶಿಷ್ಟ ಸ್ಥಾನವಿದೆ. ಇಲ್ಲಿನ ವಿಶಾಲವಾದ ಸುಂದರಕೆರೆ, ಕೆರೆಯಂಚಿನ ಪಾಳು ಬೀಳುತ್ತಿರುವ ಈಶ್ವರ ದೇವಾಲಯ, ಪತನಕೊಂಡಿರುವ ಕೋಟೆ ಅವಶೇಷಗಳು ಹಾಗೂ ಅನಾಥವಾಗಿ ಬಿದ್ದಿರುವ ಅಪಾರ ಸಂಖ್ಯೆಯ ವೀರಗಲ್ಲುಗಳು ಬಳ್ಳೇಕೆರೆಯ ಸಾಂಸ್ಕೃತಿಕ ಇತಿಹಾಸದ ಮೇಲೆ ಬೆಳಕು ಚೆಲ್ಲುವ ಜೀವಂತ ಪಳೆಯುಳಿಕೆಗಳಾಗಿವೆ.
ತಾಲೂಕಿನ ಬಹುದೊಡ್ಡ ಹಾಗೂ ಸುಂದರ ಕೆರೆಗಳಲ್ಲಿ ಬಳ್ಳೇಕೆರೆಯ ಕೆರೆಯೂ ಪ್ರಮುಖವೆನಿಸಿದೆ. ನಾಲ್ಕಾರು ಊರುಗಳ ನಡುವಣ ಸುತ್ತಳತೆಯಲ್ಲಿ ವಿಶಾಲವಾಗಿರುವ ಈ ಕೆರೆ ಒಂದು ಸುಂದರ ಸರೋವರದಂತಿದೆ. ಸುತ್ತಮತ್ತಲಿನ ಭೂ ಪ್ರದೇಶಕ್ಕೆ ನೀರಾವರಿಯ ಆಸರೆಯಾಗಿರುವ ಈ ಕೆರೆಗೆ ಹಾದನೂರು, ಮರಡಹಳ್ಳಿ, ಅಗಸರಹಳ್ಳಿ, ಹೊಸೂರು ಮೊದಲಾದ ಊರುಗಳ ತೊರೆಕೆರೆ ಕುಂಟೆ ಕಟ್ಟೆಹಳ್ಳಗಳಿಂದ ನೀರಿನ ಪೂರೈಕೆಯಾಗುತ್ತಿದೆ. ಬಳ್ಳೇಕೆರೆಯ ತುಂಬಿದ ಕೆರೆಯ ಕೋಡಿಯಿಂದ ಹರಿದ ನೀರು ಮುಂದೆ ಕಾವೇರಿ ಹೊಳೆಯಲ್ಲಿ ಸಂಗಮಗೊಳ್ಳುತ್ತದೆ. ಗ್ರಾಮದ ಜನರಿಗೆ ಜಲಮೂಲ ಕೆರೆಯಾಗಿದೆ. ಹೇಮಾವತಿ ನಾಲೆ ಗ್ರಾಮದಿಂದ ಆರು ಕಿ.ಮೀ ಅಂತರದಲ್ಲಿದೆ. ಆದರೂ ನಾಲೆ ನೀರಾವರಿ ಸೌಲಭ್ಯದಿಂದ ಗ್ರಾಮ ವಂಚಿತವಾಗಿದೆ. ಜಕ್ಕನಹಳ್ಳಿ, ಮುರುಕನಹಳ್ಳಿ, ಮೊಸಳೆಕಪ್ಪಲು, ಕಾಮನಹಳ್ಳಿ ತನಕ ನೀರಾವರಿ ಸೌಲಭ್ಯವಿದೆ. ಕಾಮನಹಳ್ಳಿ ಪಕ್ಕದಲ್ಲಿರುವ ಬಳ್ಳೇಕೆರೆ ಗ್ರಾಮಕ್ಕೆ ನಾಲೆ ನೀರಾವರಿ ಸೌಲಭ್ಯವಿಲ್ಲ. ಗ್ರಾಮದಲ್ಲಿ ಸುಮಾರು 90 ಎಕರೆ ದೊಡ್ಡಕೆರೆ ಇದೆ. ಕೆರೆಗೆ ನಾಲೆ ಮೂಲಕ ಹಾದನೂರು, ಅಗಸರಹಳ್ಳಿ, ಮೊಸಳೆಕೊಪ್ಪಲು ಗ್ರಾಮದ ಮೂಲಕ ನೀರು ತುಂಬಿಸಲಾಗುತ್ತದೆ. ಬೆಸಿಗೆ ಕಾಲದಲ್ಲಿ ಕೆರೆ ಖಾಲಿಯಾಗುತಿತ್ತು. ಇದ್ದರಿಂದ ಧೀರ್ಘ ಬೆಳೆ ಬೆಳೆಯಲಾಗುತ್ತಿರಲಿಲ್ಲ. ಹಿಂದಿನ ಸರ್ಕಾರದಲ್ಲಿ ಏತನೀರಾವರಿ ಯೋಜನೆ ಮೂಲಕ ಕೆರೆಗೆ ನೀರು ತುಂಬಿಸುವ ಕೆಲಸ ಮಾಡಿದ್ದರಿಂದ ವರ್ಷವಿಡಿ ಕೆರೆಯಲ್ಲಿ ನೀರು ಇದ್ದು, ವರ್ಷ ಪೂರ್ತಿ ನೀರಾವರಿ ಸೌಲಭ್ಯ ಸಿಕ್ಕಿದೆ. ಈ ಕೆರೆ ವ್ಯಾಪ್ತಿಯಲ್ಲಿ ಬಳ್ಳೇಕೆರೆ, ಹಳಿಯೂರು, ನಾಟನಹಳ್ಳಿ, ಹೆಮ್ಮಡಹಳ್ಳಿ ಗ್ರಾಮದವರ ಜಮೀನಿಗೆ ನೀರಾವರಿ ಸೌಲಭ್ಯವಿದೆ. ಕೆರೆ ಮೇಲ್ಬಾಗದಲ್ಲಿ ಭೂವನಹಳ್ಳಿ, ಮೋದೂರು, ಮೊಸಳೆಕೊಪ್ಪಲು, ಬಳ್ಳೇಕೆರೆ ಕೆರೆ ಪಂಪ್‌ಸೆಟ್ ಮೂಲಕ ನೀರಾವರಿ ಸೌಲಭ್ಯ ಮಾಡಿಕೊಂಡಿದ್ದಾರೆ. ಸುಮಾರು ಸಾವಿರ ಎಕೆರೆಗೆ ನೀರುಣಿಸುತ್ತಿದೆ. ಕೆರೆ ನೀರು ವಂಚಿತರು ಕೊಳವೆ ಬಾವಿ ಮೂಲಕ ನೀರಾವರಿ ಸೌಲಭ್ಯ ಮಾಡಿಕೊಂಡಿದ್ದಾರೆ.
ಸಾಂಸ್ಕೃತಿಕ ಇತಿಹಾಸದ ಕೇಂದ್ರ: ಬಳ್ಳೇಕೆರೆಯ ಸಾಂಸ್ಕೃತಿಕ ಇತಿಹಾಸದ ಕೇಂದ್ರ ಬಿಂದು ಶ್ರೀ ಮಲ್ಲೇಶ್ವರ ದೇವಾಲಯ. ಕೆರೆಯ ತಟದ ಸೊಬಗಿನ ತೋಟದ ನಡುವೆ ಇರುವ ಈ ದೇವಾಲಯ ಈಗ ಶಿಥಿಲಾವಸ್ಥೆಯಲ್ಲಿದೆ. ದಿನೇ ದಿನೆ ಕುಸಿಯುತ್ತಿರುವ ಈ ಶಿವ ದೇವಾಲಯದ ಹೊರಭಿತ್ತಿಯ ಆವರಣವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಹೊಯ್ಸಳರ ನಕ್ಷತ್ರಾಕಾರದ ದೇವಾಲಯಗಳ ನಿರ್ಮಾಣವಾಗಿರುವುದು ಕಂಡು ಬರುತ್ತದೆ.
ಆನೆ ಮುಖದ ಕಲ್ಲಿನ ಕೆತ್ತನೆ: ಈ ಗುಡಿಯ ಆವರಣದಲ್ಲಿರುವ ಪಾವಟಿಗೆಗಳ ಎಡಬಲದಲ್ಲಿರುವ ಮಾದರಿಯ ಸರಳತೆಯ ಹಾಗೂ ಅಚ್ಚುಕಟ್ಟಿನ ದೇವಾಲಯವಾಗಿದೆ. ಸುಮಾರು ಏಳುನೂರು ವಷಗಳ ಹಿಂದೆ ಸೂರ್ಯ ಚಂದ್ರರಿರುವ ಎರಡು ಆನೆಗಳಿಂದ ಅಲಂಕೃತವಾಗಿರುವ ದೇವರಿಲ್ಲದಕೆತ್ತನೆ, ಒಳಾಂಕಣದಲ್ಲಿರುವ ಗರ್ಭಗುಡಿಯ ಆನೆ ಮುಖದ ಕಲ್ಲಿನ ಕೆತ್ತನೆಗಳು, ದೀಪಸ್ತೂಪ, ಪೂರ್ವದಿಕ್ಕಿಗಿರುವ ದೇವಾಲಯ. ಪ್ರವೇಶಕ್ಕೆ ಇರುವ ಚಿಕ್ಕ ಬಾಗಿಲುವಾದದ ಲಿಂಗದ ಮೇಲೆ ವೈಭವದಿಂದ ಪ್ರಕಾಶಿಸಲ್ಪಡುತ್ತದೆಯೆಂದು ಗ್ರಾಮಸ್ಥರ ಭಾವನೆ.
ಊರಿನ ಹೆಬ್ಬಾಗಿಲು, ವೀರಗಲ್ಲುಗಳು: ಬಳ್ಳೇಕೆರೆ ಊರಿನ ಹೆಬ್ಬಾಗಿಲಿನ ಸ್ವರೂಪ ಹಿಂದೆ ಕೋಟೆಯೊಂದು ಇರಬಹುದೆಂಬುದಕ್ಕೆ ಕುರುಹುಗಳಿವೆ. ಈ ಹೆಬ್ಬಾಗಿಲಿನ ಕಂಬದಲ್ಲಿ ಗಣಪತಿಯ ಶಿಲ್ಪಚಿತ್ರವಿದೆ. ಇದನ್ನು ಊರಿನವರ ತಲೆಪಟ್ಟರಾಯ ಎಂದು ಕರೆಯುತ್ತಾರೆ. ಈ ಗಣಪತಿ ರಚನೆ ವಿಶಿಷ್ಟವಾದುದಾಗಿದೆ. ಕೀರಿಟಯುಕ್ತಗಣಪತಿಯ ಬಲಕೆನಲ್ಲಿ ಶಂಖ, ಎಡಗೈಯಲ್ಲಿ ಕಮಂಡಲು, ಕತ್ತಿನಲ್ಲಿ ಸರ್ಪದಹಾರ ವಾಹನ ಇಲಿಯ ಸುಂದರವಾದ ಕೆತ್ತನೆಯಿದೆ.
ಸಪ್ತಮಾತೃಕೆಯರ ವಿಗ್ರಹ: ಗ್ರಾಮದೇವತೆ ದೊಡ್ಡಕೆರೆಯಮ್ಮ ಗುಡಿಯಿದೆ. ಗುಡಿ ಸುತ್ತ ಬಿಳಿಯ ಕಣಗಿಲೆ ಹೂವಿನ ಮರಗಳಿವೆ. ಈ ಗುಡಿಯಲ್ಲಿ ಸಪ್ತಮಾತೃಕೆಯರ ವಿಗ್ರಹಗಳಿವೆ. ಈ ಗರ್ಭಗುಡಿಯ ಮುಂದೆ ಒಂಟಗಲ್ಲು (ಬಲಿಗಲ್ಲು) ಇದೆ. ಈ ಗ್ರಾಮ ದೇವತೆಗೆ ಭಕ್ತಿಗೌರವ ಪೂರ್ವಕವಾಗಿ ಹರಕೆ - ಹಬ್ಬ - ಆಚರಣೆಗಳು ಬಹುಹಿಂದಿನಿಂದಲೂ ನಿರಂತರವಾಗಿ ನಡೆದುಕೊಂಡು ಬಂದಿವೆ.
ರಂಗದ ಕುಣಿತ ವಿಶೇಷ: ಗ್ರಾಮದಲ್ಲಿ ಬೋರೇ ದೇವರು, ಮಾರಮ್ಮ, ಬ್ಯಾಟೆರಾಯಸ್ವಾಮಿ, ಶ್ರೀರಾಮ, ಸಿಂಗಮ್ಮ ಹಾಗೂ ದಂಡಿಯಮ್ಮ ದೇವತೆಗಳಿಗೆ ಹಬ್ಬ-ಹರಕೆ - ಆಚರಣೆ - ಉತ್ಸವಗಳು ಕಾಲಾನುಸಾರವಾಗಿ ನಡೆಯುತ್ತವೆ. ಈ ಊರಿನ ಬ್ಯಾಟೆರಾಯಸ್ವಾಮಿ ಉತ್ಸವ, ಬಂದಮ್ಮ - ಕನ್ನಂಬಾಡಮ್ಮ ಹಬ್ಬ, ರಂಗನಾಥಸ್ವಾಮಿ ಉತ್ಸವ, ಓಕಳಿ ಉತ್ಸವ ಹಾಗೂ ರಂಗದ ಕುಣಿತ ವಿಶೇಷ.