ಮಂಡ್ಯದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್.ನಂದಿನಿ ಮಾತನಾಡಿದರು.
- ಬಾಲ ವಿಕಾಸ ನಡಿಗೆ ಪಾಲಕರ ಕಡೆಗೆ ಕಾರ್ಯಕ್ರಮ
ಮಂಡ್ಯ: ಅಗತ್ಯವಿರುವ ಹಾಗೂ ವಿಶೇಷ ಕಾಳಜಿ ಬೇಕಿರುವ ಮಕ್ಕಳನ್ನು ಗುರುತಿಸಿ, ಅವರ ಸಮಗ್ರ ಅಭಿವೃದ್ಧಿಗೆ ಪೂರಕವಾಗುವಂತೆ ಬಾಲ ವಿಕಾಸ ನಡಿಗೆ ಪಾಲಕರ ಕಡೆಗೆ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಂತೆ ಅಧಿಕಾರಿಗಳಿಗೆ ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್.ನಂದಿನಿ ಸೂಚಿಸಿದರು.
ನಗರದ ಜಿಪಂ ಕಚೇರಿಯ ಮಿನಿ ಸಭಾಂಗಣದಲ್ಲಿ ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಾರ್ಯಕ್ರಮದ ಲಾಭ ನಿಜವಾಗಿಯೂ ಅಗತ್ಯವಿರುವ ಮಕ್ಕಳಿಗೆ ಹಾಗೂ ಅವರ ಪಾಲಕರಿಗೆ ತಲುಪುವಂತೆ ಫಲಾನುಭವಿಗಳ ಆಯ್ಕೆ ಮಾಡಬೇಕು. ಮಳವಳ್ಳಿ, ಕೆ.ಆರ್.ಪೇಟೆ, ಪಾಂಡವಪುರ ಹಾಗೂ ಮಂಡ್ಯ ತಾಲೂಕಲ್ಲಿ ಕಾರ್ಯಕ್ರಮ ಆಯೋಜಿಸುವ ಕುರಿತು ಅಧಿಕಾರಿಗಳು ಚರ್ಚಿಸಿ. ಸಾಮಾಜಿಕ ಹಾಗೂ ಕೌಟುಂಬಿಕ ಸವಾಲುಗಳನ್ನು ಎದುರಿಸುತ್ತಿರುವ ಮಕ್ಕಳು, ಮಕ್ಕಳ ಆರೈಕೆ ಸಂಸ್ಥೆಗಳಲ್ಲಿ ವಾಸಿಸುತ್ತಿರುವ ಮಕ್ಕಳು ಹಾಗೂ ವಿಶೇಷ ಕಾಳಜಿ ಅಗತ್ಯವಿರುವ ಮಕ್ಕಳಿಗೆ ಆದ್ಯತೆ ನೀಡುವಂತೆ ತಿಳಿಸಿದರು.
ಮಕ್ಕಳ ಮನೋವಿಕಾಸದ ಅರಿವು, ಸಕಾರಾತ್ಮಕ ಪೋಷಣೆ ಮತ್ತು ಶಿಸ್ತು, ಪಾಲಕರು-ಮಗು ಸಂವಹನ ಕೌಶಲ, ಮಕ್ಕಳ ಸುರಕ್ಷತೆ, ಮಕ್ಕಳ ಹಕ್ಕುಗಳು ಹಾಗೂ ಪಾಲಕರ ಜವಾಬ್ದಾರಿ ಕುರಿತಂತೆ ಜಾಗೃತಿ ಮೂಡಿಸಬೇಕು. ಕಾರ್ಯಕ್ರಮವು ಕೇವಲ ಔಪಚಾರಿಕವಾಗಿರದೆ, ಮಕ್ಕಳ ಹಾಗೂ ಪೋಷಕರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆ ತರಬಲ್ಲ ರೀತಿಯಲ್ಲಿ ರೂಪುಗೊಳ್ಳಬೇಕು. ಮಕ್ಕಳ ಮನೋವಿಜ್ಞಾನ, ಕೌನ್ಸೆಲಿಂಗ್, ಪೋಷಕತ್ವ, ಆರೋಗ್ಯ ಹಾಗೂ ಶಿಕ್ಷಣ ಕ್ಷೇತ್ರಗಳಲ್ಲಿ ಪರಿಣತಿ ಹೊಂದಿರುವ ತಜ್ಞರನ್ನು ಸಂಪನ್ಮೂಲ ವ್ಯಕ್ತಿಗಳಾಗಿ ಆಹ್ವಾನಿಸಿ ಗುಣಮಟ್ಟದ ಮಾರ್ಗದರ್ಶನ ಒದಗಿಸುವಂತೆ ಸೂಚಿಸಿದರು. ಅಗತ್ಯತೆ ಆಧಾರಿತವಾಗಿ ಫಲಾನುಭವಿಗಳನ್ನು ಆಯ್ಕೆ ಮಾಡುವ ಮೂಲಕ ಹೆಚ್ಚು ನೆರವಿನ ಅಗತ್ಯವಿರುವ ಮಕ್ಕಳಿಗೆ ಕಾರ್ಯಕ್ರಮದ ಪ್ರಯೋಜನ ತಲುಪಿಸಬೇಕು. ಮಕ್ಕಳ ಆರೋಗ್ಯ, ಪೌಷ್ಟಿಕ ಆಹಾರ, ಮಾನಸಿಕ ಆರೋಗ್ಯ ಹಾಗೂ ಸುರಕ್ಷಿತ ಬೆಳವಣಿಗೆಗೆ ಸಂಬಂಧಿಸಿದ ವಿಷಯಗಳನ್ನೂ ಅಳವಡಿಸಿಕೊಳ್ಳುವಂತೆ ಸಲಹೆ ನೀಡಿದರು.
ಸಭೆಯಲ್ಲಿ ಜಿಪಂ ಉಪ ಕಾರ್ಯದರ್ಶಿ ಲಕ್ಷ್ಮೀ, ಸಹಾಯಕ ಯೋಜನಾಧಿಕಾರಿ ಶ್ರೀಹರ್ಷ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಗೀತಾಲಕ್ಷ್ಮೀ, ಡಯಟ್ ಪ್ರಾಂಶುಪಾಲ ಯೋಗೇಶ್ ಇತರರಿದ್ದರು.