ಮಂಡ್ಯ ನಗರದ ರೈಲ್ವೆ ನಿಲ್ದಾಣದಲ್ಲಿ ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಆರ್‌ಪಿಎ್ ಸಹಾಯಕ ಇನ್ಸ್‌ಪೆಕ್ಟರ್ ಬಸವರಾಜ ವಠಾರ ಮಾತನಾಡಿದರು.
- ರೈಲ್ವೆ ಪ್ರಯಾಣಿಕರಿಗೆ ಜಾಗೃತಿ ಕಾರ್ಯಕ್ರಮ
- ಎಚ್ಚರಿಕೆ ವಹಿಸಲು ಅಧಿಕಾರಿಗಳ ಮನವಿ
ಮಂಡ್ಯ: ಪ್ರಯಾಣಿಕರ ಸುರಕ್ಷತೆಯೇ ನಮ್ಮ ಆದ್ಯತೆ. ಈ ಹಿನ್ನೆಲೆಯಲ್ಲಿ ಸರ್ಕಾರದ ಡಿಜಿಟಲ್ ಸೇವೆಗಳನ್ನು ಬಳಸಿಕೊಳ್ಳುವುದು ಪ್ರತಿ ನಾಗರಿಕನ ಜವಾಬ್ದಾರಿ ಎಂದು ಆರ್‌ಪಿಎ್ ಸಹಾಯಕ ಇನ್ಸ್‌ಪೆಕ್ಟರ್ ಬಸವರಾಜ ವಠಾರ ಹೇಳಿದರು.
ನಗರದ ರೈಲ್ವೆ ನಿಲ್ದಾಣ ಮತ್ತು ರೈಲ್ವೆ ಗೇಟ್ ಆವರಣದಲ್ಲಿ ಆಯೋಜಿಸಿದ್ದ ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರೈಲಿನಲ್ಲಿ ಪ್ರಯಾಣಿಸುವಾಗ ಅಪರಿಚಿತರು ನೀಡುವ ಬಿಸ್ಕತ್, ಚಾಕೊಲೇಟ್ ಅಥವಾ ಪಾನೀಯಗಳನ್ನು ಎಂದಿಗೂ ಸೇವಿಸಬೇಡಿ. ಅವುಗಳಲ್ಲಿ ಮಾದಕ ದ್ರವ್ಯ ಬೆರೆಸಿ ನಿಮ್ಮನ್ನು ಪ್ರಜ್ಞೆ ತಪ್ಪಿಸಿ ಲೂಟಿ ಮಾಡುವ ಸಾಧ್ಯತೆ ಇರುತ್ತದೆ. ನಿಮ್ಮ ಲಗೇಜ್‌ಗಳನ್ನು ಸೀಟಿನ ಕೆಳಗೆ ಇಟ್ಟು ಸರಪಳಿ ಹಾಕಿ ಬೀಗ ಹಾಕಿರಿ. ಕಿಟಕಿ ಪಕ್ಕ ಕುಳಿತು ಫೋನ್ ಬಳಸುವಾಗ ಮೊಬೈಲ್ ಕಳ್ಳರ ಬಗ್ಗೆ ಎಚ್ಚರವಿರಲಿ ಎಂದು ಸಲಹೆ ನೀಡಿದರು.
ಭಾರತೀಯ ರೈಲ್ವೆ ಇಲಾಖೆ ರೈಲುಗಳ ನಡುವಿನ ಮುಖಾಮುಖಿ ಡಿಕ್ಕಿ ತಡೆಯಲು ಕವಚ್ ಎಂಬ ತಂತ್ರಜ್ಞಾನ ಜಾರಿಗೆ ತರುತ್ತಿದೆ. ಇದು ತಾಂತ್ರಿಕವಾಗಿ ಪ್ರಯಾಣಿಕರ ಸುರಕ್ಷತೆಯನ್ನು ಹೆಚ್ಚಿಸುತ್ತದೆ. ಈಗ ಬಹುತೇಕ ರೈಲು ನಿಲ್ದಾಣ ಮತ್ತು ಪ್ರಮುಖ ರೈಲುಗಳ ಬೋಗಿಗಳಲ್ಲಿ ಸಿ.ಸಿ ಕ್ಯಾಮೆರಾ ಅಳವಡಿಸಲಾಗಿದ್ದು, ಸದಾ ನಿಗಾ ಇಡಲಾಗುತ್ತದೆ. ಆದರೂ ಸಹ ಪ್ರಯಾಣಿಕರು ಜಾಗರೂಕರಾಗಿದ್ದರೆ ಅಪರಾಧಗಳನ್ನು ಶೂನ್ಯಕ್ಕೆ ಇಳಿಸಬಹುದು ಎಂದು ತಿಳಿಸಿದರು.
ಎಎಸ್‌ಐ ಇ.ಕೃಷ್ಣ, ಯಶವಂತಪುರ ಮಹಿಳಾ ಮುಖ್ಯಪೇದೆ ನವ್ಯಾ ಕೆ.ಎಲ್.ಗೌಡ ಇತರರಿದ್ದರು.