ಮಂಡ್ಯ ನಗರದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿ(ಕಲ್ಲುಕಟ್ಟಡ)ನ ಪ್ರಾರಂಭೋತ್ಸವದ ಅಂಗವಾಗಿ ಪ್ಲಾಸ್ಟಿಕ್ ದುಷ್ಪರಿಣಾಮದ ಬಗ್ಗೆ ಜಾಗೃತಿ ಮೂಡಿಸಲಾಯಿತು.
- ಬಾಲಕಿಯರ ಪದವಿ ಪೂರ್ವ ಕಾಲೇಜಿ(ಕಲ್ಲುಕಟ್ಟಡ)ನ ಪ್ರಾರಂಭೋತ್ಸವ
- ಪ್ಲಾಸ್ಟಿಕ್ ಬಳಕೆ ದುಷ್ಪರಿಣಾಮದ ಕುರಿತು ಜಾಗೃತಿ
ಮಂಡ್ಯ: ಜೀವಸಂಕುಲಗಳ ಉಳಿಸುವ ನಿಟ್ಟಿನಲ್ಲಿ ಪ್ಲಾಸ್ಟಿಕ್ ಬಳಕೆ ತಡೆಗಟ್ಟಿ ಪರಿಸರ ಸ್ನೇಹಿ ವಸ್ತುಗಳ ಬಳಕೆ ಹೆಚ್ಚಾಗಬೇಕು ಎಂದು ಪ್ಲಾಸ್ಟಿಕ್ ವಿರೋಧಿ ಪರಿಸರ ಮಿತ್ರ, ನಿವೃತ್ತ ಉಪನ್ಯಾಸಕ ಜಿ.ಸಿ.ಜಯಶಂಕರ್ ಸಲಹೆ ನೀಡಿದರು.
ನಗರದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿ(ಕಲ್ಲುಕಟ್ಟಡ)ನ ಪ್ರಾರಂಭೋತ್ಸವದ ಅಂಗವಾಗಿ ಆಯೋಜಿಸಿದ್ದ ಸಮಾರಂಭದಲ್ಲಿ ಪ್ಲಾಸ್ಟಿಕ್ ಬಳಕೆ ದುಷ್ಪರಿಣಾಮದ ಕುರಿತು ಜಾಗೃತಿ ಮೂಡಿಸಿದ ಅವರು, ಸಸ್ಯ, ಪಕ್ಷಿ ಮತ್ತು ಮಾನವ ಸಂಕುಲಗಳು ಮುಂದಿನ ತಲೆಮಾರಿಗೆ ಉಳಿಯಲು ಸ್ವಾಭಾವಿಕ ಸಂಪನ್ಮೂಲಗಳ ರಕ್ಷಣೆಯನ್ನು ಯುವಜನರು ಮಾಡಬೇಕಿದೆ. ಅದರಂತೆ ಅನ್ವೇಷಣಾ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಪ್ರತಿಯೊಬ್ಬರು ಜೀವನಮಟ್ಟ ಸುಧಾರಣೆಯ ಜತೆಗೆ ಸಮುದಾಯದ ಅಭಿವೃದ್ಧಿಪರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕಾಗಿದೆ ಎಂದರು.
ಕಾಲೇಜಿನ ಪ್ರಾಂಶುಪಾಲ ಎಚ್.ಪಿ.ತಮ್ಮೇಗೌಡ, ಹಿರಿಯ ಉಪನ್ಯಾಸಕಿಯರಾದ ಬಿ.ಎಸ್.ಮಮತಾ, ಎಂ.ಎಚ್.ಕುಸುಮಾ ಇತರರಿದ್ದರು.