ಮಂಡ್ಯ ನಗರದಲ್ಲಿ ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮವನ್ನು ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ಆನಂದ್ ಉದ್ಘಾಟಿಸಿದರು.
- ನಗರದಲ್ಲಿ ಜಾಗೃತಿ ಕಾರ್ಯಕ್ರಮ
- ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ಆಯೋಜನೆ
ಮಂಡ್ಯ: ಬಾಲ್ಯವಿವಾಹ, ಪೋಕ್ಸೋ ಕಾಯ್ದೆ, ಬಾಲಕಾರ್ಮಿಕ ಪದ್ಧತಿ ಹಾಗೂ ಮಾದಕ ವ್ಯಸನದಂತಹ ಪಿಡುಗನ್ನು ಸಮಾಜದಿಂದ ಬೇರು ಸಹಿತ ಕಿತ್ತೊಗೆಯಲು ಪ್ರತಿಯೊಬ್ಬರೂ ಕೈ ಜೋಡಿಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ಆನಂದ್ ಕರೆ ನೀಡಿದರು.
ನಗರದ ಎಸ್‌ಬಿ ಸಮುದಾಯ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ಬಾಲ್ಯವಿವಾಹ, ಪೋಕ್ಸೋ ಕಾಯ್ದೆ, ಬಾಲಕಾರ್ಮಿಕ ಮತ್ತು ಮಕ್ಕಳ ಸುರಕ್ಷತೆ ಕುರಿತ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಕ್ಷಣಿಕ ಆಕರ್ಷಣೆಗೆ ಒಳಗಾಗದೆ ಉಜ್ವಲ ಭವಿಷ್ಯ ನಿರ್ಮಿಸಿಕೊಳ್ಳುವತ್ತ ಗಮನ ಹರಿಸಬೇಕು. ಬಾಲ್ಯವಿವಾಹ ಮಾಡುವುದು ಕಾನೂನು ರೀತ್ಯಾ ಅಕ್ಷಮ್ಯ ಅಪರಾಧ. ಇದರಲ್ಲಿ ಭಾಗಿಯಾಗುವ ಪಾಲಕರು, ಪುರೋಹಿತರು, ಅಡುಗೆಯವರು ಹಾಗೂ ಕಲ್ಯಾಣ ಮಂಟಪದ ಮಾಲೀಕರ ಮೇಲೂ ಪ್ರಕರಣ ದಾಖಲಿಸಲಾಗುತ್ತದೆ. ನಿಮ್ಮ ಸುತ್ತಮುತ್ತ ಬಾಲ್ಯವಿವಾಹ ನಡೆಯುತ್ತಿದ್ದರೆ ನಿರ್ಭೀತಿಯಿಂದ ಮಕ್ಕಳ ಸಹಾಯವಾಣಿ 1098 ಅಥವಾ ಪೊಲೀಸ್ ಸಹಾಯವಾಣಿ 112ಗೆ ಕರೆ ಮಾಡಿ ಮಾಹಿತಿ ನೀಡಿ. ಮಾಹಿತಿ ನೀಡಿದವರ ಹೆಸರನ್ನು ಸಂಪೂರ್ಣ ಗೌಪ್ಯವಾಗಿಡಲಾಗುವುದು ಎಂದರು.
ಪ್ರತಿ ಮಗುವಿಗೂ ಬದುಕುವ ಮತ್ತು ಶಿಕ್ಷಣ ಪಡೆಯುವ ಹಕ್ಕನ್ನು ಸಂವಿಧಾನ ನೀಡಿದೆ. ಡಾ.ಬಿ.ಆರ್.ಅಂಬೇಡ್ಕರ್ ಅವರ ಆಶಯದಂತೆ ಶಿಕ್ಷಣದಿಂದ ಮಾತ್ರ ಮನುಷ್ಯ ಸ್ವಾಭಿಮಾನದಿಂದ ತಲೆ ಎತ್ತಿ ನಿಲ್ಲಲು ಸಾಧ್ಯ. ಈ ನಿಟ್ಟಿನಲ್ಲಿ ಸಿಕ್ಕ ಅವಕಾಶವನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿ.ಜೆ.ಶೋಭಾರಾಣಿ ಮಾತನಾಡಿ, ಹದಿಹರೆಯದಲ್ಲಿ ದೈಹಿಕ ಆಕರ್ಷಣೆ ಸಹಜ. ಆದರೆ, ಕ್ಷಣಿಕ ಸುಖಕ್ಕೆ ಮರುಳಾಗಿ ತಪ್ಪು ನಿರ್ಧಾರ ಕೈಗೊಳ್ಳಬಾರದು. 18 ವರ್ಷ ತುಂಬುವ ಮುನ್ನ ತೆಗೆದುಕೊಳ್ಳುವ ಒಂದು ತಪ್ಪು ಹೆಜ್ಜೆ ಇಡೀ ಜೀವನವನ್ನೇ ಬಲಿಪಡೆಯುತ್ತದೆ. ವಿದ್ಯಾರ್ಥಿಗಳು ದುರಭ್ಯಾಸಗಳ ಪ್ರಚೋದನೆಗೆ ಒಳಗಾಗದೆ ಕೇವಲ ಶಿಕ್ಷಣದ ಕಡೆಗೆ ಮಾತ್ರ ಗಮನ ಹರಿಸಬೇಕು ಎಂದು ಎಚ್ಚರಿಸಿದರು.
ಅಧ್ಯಕ್ಷತೆ ವಹಿಸಿದ್ದ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಸಭಾಧ್ಯಕ್ಷೆ ಡಾ.ಮೀರಾ ಶಿವಲಿಂಗಯ್ಯ ಮಾತನಾಡಿ, ಸೋಲು-ಗೆಲುವುಗಳು ಬದುಕಿನ ಸಹಜ ಪ್ರಕ್ರಿಯೆ. ಸೋಲನ್ನೇ ಜೀವನದ ಅಂತ್ಯ ಎಂದು ಭಾವಿಸಿ ಧೃತಿಗೆಡಬಾರದು. ಇಂದಿನ ದಿನಗಳಲ್ಲಿ ಹೆಣ್ಣು ಮಕ್ಕಳ ರಕ್ಷಣೆ ಕೇವಲ ಮನೆಯ ಜವಾಬ್ದಾರಿಯಲ್ಲ, ಅದು ಇಡೀ ಸಮಾಜದ ಹೊಣೆಗಾರಿಕೆಯಾಗಿದೆ. ಜಿಂಕೆ, ಮೀನು, ಆನೆ, ದುಂಬಿ ಮತ್ತು ಪತಂಗಗಳು ತಮ್ಮ ಒಂದೊಂದು ಇಂದ್ರಿಯಗಳ ಆಕರ್ಷಣೆಗೆ ಬಲಿಯಾಗಿ ಪ್ರಾಣ ಕಳೆದುಕೊಳ್ಳುತ್ತವೆ. ಐದೂ ಇಂದ್ರಿಯಗಳಿರುವ ಮನುಷ್ಯ ಇನ್ನೆಷ್ಟು ಜಾಗರೂಕನಾಗಿರಬೇಕು?. ಇಂದ್ರಿಯಗಳನ್ನು ಹತೋಟಿಯಲ್ಲಿಟ್ಟುಕೊಳ್ಳಲು ಧ್ಯಾನ ಹಾಗೂ ಗೀತಾ ಪಠಣದಂತಹ ಸತ್ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ.ಬೆಟ್ಟಸ್ವಾಮಿ, ಯೋಗೇಶ್, ಸುಮಿತ್ರಾ, ಗೀತಾಲಕ್ಷ್ಮೀ ಇತರರಿದ್ದರು. ಶಾಲಾ-ಕಾಲೇಜು ವಿದ್ಯಾರ್ಥಿಗಳು ಪ್ರತಿಜ್ಞಾವಿಧಿ ಸ್ವೀಕರಿಸಿದರು.