ಮಂಡ್ಯ ನಗರದ ಕರ್ನಾಟಕ ಸಂಘದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಹಿರಿಯ ಸಹಕಾರಿ ಲಲಿತಾ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
- ಹಿರಿಯ ಸಹಕಾರಿ ಜಿ.ಎಸ್.ಬೊಮ್ಮೇಗೌಡ ಸಹಕಾರ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ
- ಕರ್ನಾಟಕ ಸಂಘದ ಕೆ.ವಿ. ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಆಯೋಜನೆ
ಮಂಡ್ಯ: ನನ್ನ ಪುಟ್ಟ ಸೇವೆಗೆ ಮಂಡ್ಯ ಜಿಲ್ಲೆಯಿಂದಲೇ ಎರಡು ಸಹಕಾರ ಪ್ರಶಸ್ತಿ ಲಭಿಸಿರುವುದು ನಿಜವಾಗಿಯೂ ಹರ್ಷ ತಂದಿದೆ. 2020ರಲ್ಲಿ ಕೀಲಾರ ಗ್ರಾಮದಲ್ಲಿಯೂ ಸಹಕಾರ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಆದ್ದರಿಂದ ಸಕ್ಕರೆ ನಾಡಿನ ಋಣವನ್ನು ಎಂದಿಗೂ ಮರೆಯುವುದಿಲ್ಲ ಎಂದು ಹಿರಿಯ ಸಹಕಾರಿ ಲಲಿತಾ ಹೇಳಿದರು.
ನಗರದ ಕರ್ನಾಟಕ ಸಂಘದ ಕೆ.ವಿ. ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಆಯೋಜಿಸಿದ್ದ ಹಿರಿಯ ಸಹಕಾರಿ ಜಿ.ಎಸ್.ಬೊಮ್ಮೇಗೌಡ ಸಹಕಾರ ರತ್ನ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, 2008ರವರೆಗೂ ಸಹಕಾರ ಕ್ಷೇತ್ರದಲ್ಲಿ ತೊಡಗಲು ಮನೆಯಿಂದ ಹೊರಗೆ ಬಂದಿರಲಿಲ್ಲ. ಆದರೆ ಹುಣಸೂರು ತಾಲೂಕಿನಲ್ಲಿ ಎಲ್ಲ ಮಹಿಳೆಯರು ಸಹಕಾರ ಕ್ಷೇತ್ರವನ್ನು ಕಟ್ಟೋಣ ಎಂದು ನನಗೆ ಒತ್ತಡ ಹಾಕಿದರು. ಅವರ ಒತ್ತಡದಿಂದ ಈ ಕ್ಷೇತ್ರಕ್ಕೆ ಕಾಲಿಟ್ಟೆ ಎಂದು ಸ್ಮರಿಸಿದರು.
ಹುಣಸೂರಿನಲ್ಲಿ ಮಹಿಳಾ ಸಂಘ ಕಟ್ಟಿಕೊಂಡು ಕೇವಲ ಒಂದು ವರ್ಷದಲ್ಲಿ ನಾಲ್ಕು ಸಾವಿರ ಸದಸ್ಯತ್ವ ಮಾಡಿ 1 ಕೋಟಿ ರೂ ಸಂಗ್ರಹಿಸಿದೆ. ಅದೇ ವರ್ಷದಲ್ಲಿ ಆ ಸಂಘದಲ್ಲಿ 19 ಲಕ್ಷ ರೂ ಲಾಭ ಬರುವಂತೆ ಮಾಡಿದೆ. ಮೈಸೂರಿನ ನಂದಿನಿ ಲೇಔಟ್‌ನಲ್ಲಿ ಕೋಟ್ಯಂತರ ರೂಪಾಯಿ ವ್ಯಯಿಸಿ ಸೊಸೈಟಿ ನಿರ್ಮಾಣ ಮಾಡಿದೆ. 2022ರಲ್ಲಿ ಅಂದಿನ ಸಹಕಾರಿ ಸಚಿವರು ಕಟ್ಟಡ ಉದ್ಘಾಟಿಸಿದರು. ಆ ಸಂಘವನ್ನು ಲಾಭದಾಯಕವಾಗಿ ಮುನ್ನಡೆಸಿದೆ ಎಂದು ವಿವರಿಸಿದರು.
ಕರ್ನಾಟಕ ಸಂಘದ ಅಧ್ಯಕ್ಷ ಡಾ.ಬಿ.ಜಯಪ್ರಕಾಶಗೌಡ ಮಾತನಾಡಿ, ಮಂಡ್ಯ ರಾಜಕಾರಣವು ಒಂದು ಕಾಲದಲ್ಲಿ ಇಡೀ ರಾಜ್ಯವನ್ನೇ ಮುನ್ನಡೆಸುತ್ತಿತ್ತು. ಇಂದು ಜಿಲ್ಲೆಯಲ್ಲಿ ರಾಜ್ಯ ರಾಜಕಾರಣ ಆಳುವ ಶಕ್ತಿಯುತ ರಾಜಕಾರಣಿಗಳು ಮರೆಯಾಗಿದ್ದಾರೆ. ಕರ್ನಾಟಕ ಸಂಘ ಸಾಹಿತ್ಯ, ಸಂಸ್ಕೃತಿ, ಕಲೆ, ಸಿನಿಮಾ ಮತ್ತು ರಾಜಕಾರಣ ಕ್ಷೇತ್ರದಲ್ಲಿ ಯುವ ಪೀಳಿಗೆಯನ್ನು ಬೆಳೆಸುವ ಕೆಲಸ ಮಾಡುತ್ತಿದೆ. ಕೆ.ವಿ. ಶಂಕರಗೌಡ ಅವರಂತಹ ರಾಜಕಾರಣಿಗಳು ಯುವ ರಾಜಕಾರಣಿಗಳನ್ನು ಹುಟ್ಟು ಹಾಕುತ್ತಿದ್ದರು. ಕೆ.ವಿ.ಶಂಕರಗೌಡ ಅವರು ರಾಜಕಾರಣ, ಸಹಕಾರ, ಶಿಕ್ಷಣ ಕ್ಷೇತ್ರದಲ್ಲಿ ಹೆಸರು ಮಾಡಿ ಮೂರು ಕ್ಷೇತ್ರಗಳಿಂದ ಅನೇಕ ಸಾಧಕರನ್ನು ಸಮಾಜಕ್ಕೆ ಕೊಟ್ಟಿದ್ದಾರೆ. ಇಂಥ ಕೆಲಸಗಳು ಪ್ರಸ್ತುತ ಆಗಬೇಕು ಎಂದರು.
ಮೈಸೂರು ವಿವಿಯ ಪ್ರಸರಾಂಗ ವಿಭಾಗ ವಿಶ್ರಾಂತ ನಿರ್ದೇಶಕ ಕೆ.ಟಿ. ವೀರಪ್ಪ ಮಾತನಾಡಿದರು. ವಿಧಾನ ಪರಿಷತ್ ಮಾಜಿ ಸದಸ್ಯ ಡಿ.ಮಾದೇಗೌಡ, ಮಾಜಿ ಶಾಸಕ ಜಿ.ಬಿ.ಶಿವಕುಮಾರ್, ಕರ್ನಾಟಕ ಸಂಘದ ಎಚ್.ಡಿ.ಸೋಮಶೇಖರ್, ಮಂಜುಳಾ ಉದಯಶಂಕರ್ ಇದ್ದರು.