ಮಂಡ್ಯ ನಗರದ ಕರ್ನಾಟಕ ಸಂಘದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ನಾಲ್ವರು ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
- ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ
- ಕರ್ನಾಟಕ ಸಂಘ ಮತ್ತು ಎಂ.ಎಲ್.ಶ್ರೀಕಂಠೇಶಗೌಡ ಸಂಶೋಧನಾ ಕೇಂದ್ರದಿಂದ ಆಯೋಜನೆ
ಮಂಡ್ಯ: ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ ವಿಚಾರದಲ್ಲಿ ಕರ್ನಾಟಕ ಸಂಘದ ಹೆಸರು ಮುಂಚೂಣಿಯಲ್ಲಿ ಇರುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ಅಭಿಪ್ರಾಯಪಟ್ಟರು.
ನಗರದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಕರ್ನಾಟಕ ಸಂಘ ಮತ್ತು ಎಂ.ಎಲ್.ಶ್ರೀಕಂಠೇಶಗೌಡ ಸಂಶೋಧನಾ ಕೇಂದ್ರದ ವತಿಯಿಂದ ಆಯೋಜಿಸಿದ್ದ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಂಘದ ಕಾರ್ಯಕ್ರಮ ಮಂಡ್ಯಕ್ಕೆ ಮಾತ್ರ ಸೀಮಿತ ಆಗಿಲ್ಲ. ಅಧ್ಯಕ್ಷ ಡಾ.ಬಿ.ಜಯಪ್ರಕಾಶಗೌಡರು ತಮ್ಮ ವಿಶಿಷ್ಟವಾದ ವ್ಯಕ್ತಿತ್ವದಿಂದ ಮತ್ತು ಮಾಡುತ್ತಿರುವ ಕೆಲಸಗಳಿಂದ ರಾಜ್ಯಾದ್ಯಂತ ಜನರ ಮನ್ನಣೆ ಪಡೆದಿದ್ದಾರೆ. ಅದರಿಂದಲೇ ಸಂಘಕ್ಕೆ ರಾಜ್ಯ ಮಟ್ಟದಲ್ಲಿ ಗೌರವ ಬಂದಿದೆ ಎಂದರು.
ದತ್ತಿದಾನಿ, ಸಾಹಿತಿ ಪ್ರೊ,ನರಸಿಂಹೇಗೌಡ ಮಾತನಾಡಿ, ಕ್ರಿಯಾಶೀಲವಾಗಿರುವ ಕರ್ನಾಟಕ ಸಂಘದಲ್ಲಿ 2022ರಲ್ಲಿ ನನ್ನ ತಾಯಿ ಹೆಸರಿನಲ್ಲಿ ಕಾರ್ಯಕ್ರಮ ಮಾಡಬೇಕು ಎಂದು ಕೋರಿದಾಗ ಬಹಳ ಸಂತೋಷದಿಂದ ಒಪ್ಪಿಕೊಂಡರು. ಕಳೆದ 4 ವರ್ಷದಿಂದ ನಿರಂತರವಾಗಿ ಈ ಕಾರ್ಯಕ್ರಮ ನಡೆಯುತ್ತಿದೆ. ನಮ್ಮ ಕುಟುಂಬದಲ್ಲಿಯೇ ಮಾಡಿದರೂ ಇಷ್ಟೊಂದು ಅಚ್ಚುಕಟ್ಟಾಗಿ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ನಿರ್ದೇಶಕರು ಎಲ್ಲರೂ ಸೇರಿ ಈ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನೆರವೇರಿಸಿಕೊಟ್ಟಿದ್ದಾರೆ ಎಂದು ಶ್ಲಾಘಿಸಿದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ವಿಜ್ಞಾನ ಶಿಕ್ಷಕ ಎನ್.ಜಿ.ಅಶೋಕ್, ಶಿಕ್ಷಕ ವೃತ್ತಿಗೆ ತನ್ನದೇ ಆದ ಜವಾಬ್ದಾರಿಯಿದೆ. ಶಿಕ್ಷಕರಿಗೆ ಮಕ್ಕಳ ಪಾಲಕರು, ಗ್ರಾಮಸ್ಥರ ಸಹಕಾರ ಅಗತ್ಯ ಎಂದರು.
ಕರ್ನಾಟಕ ಸಂಘದ ಅಧ್ಯಕ್ಷ ಡಾ.ಬಿ.ಜಯಪ್ರಕಾಶಗೌಡ, ಸಂಘದ ಪದಾಧಿಕಾರಿಗಳಾದ ಹರೀಶ್‌ಕುಮಾರ್, ಕೋಣನಹಳ್ಳಿ ಜಯರಾಮು, ಲೋಕೇಶ್ ಚಂದಗಾಲು, ಉದಯಶಂಕರ್ ಭಾಗವಹಿಸಿದ್ದರು.
ಇದೇ ವೇಳೆ ಎಂ.ಸಿದ್ದರಾಮು ವಿಜ್ಞಾನ ಶಿಕ್ಷಕ ಪ್ರಶಸ್ತಿಗೆ ಭಾಜನರಾದ ಮಂಡ್ಯ ತಾಲೂಕು ಹೊನ್ನನಾಯಕನಹಳ್ಳಿಯ ಶಿಕ್ಷಕ ಎನ್.ಜಿಅಶೋಕ್ ಅವರಿಗೆ 10 ಸಾವಿರ ರೂ. ನಗದು ಮತ್ತು ಪ್ರಶಸ್ತಿ ಫಲಕ ನೀಡಿ ಗೌರವಿಸಲಾಯಿತು. ಅದೇ ರೀತಿ ಗುಣಸಾಗರಿ ಸಿ.ನಾಗರಾಜು ಜನಪದ ಕಲಾವಿದ ಪ್ರಶಸ್ತಿಯನ್ನು ಮಂಡ್ಯ ತಾಲೂಕು ಕೀಲಾರದ ತತ್ವಪದ ಕಲಾವಿದ ಸಿ.ಆರ್.ಸಂಜೀವಯ್ಯ, ಸಿ.ನಾಗರಾಜು ಜನಪದ ಕಲಾವಿದ ಪ್ರಶಸ್ತಿ, ಚನ್ನರಾಯಪಟ್ಟಣ ತಾಲೂಕು ಜಾನಪದ ಕಲಾವಿದ ಉಮೇಶ್ ತೆಂಕನಹಳ್ಳಿ ಮತ್ತು ಚನ್ನಮ್ಮ ಕರಿಯಪ್ಪ ಜನಪದ ಕಲಾವಿದ ಪ್ರಶಸ್ತಿಯನ್ನು ಬೇವಿನಹಳ್ಳಿಯ ತತ್ವಪದ ಕಲಾವಿದೆ ನಂಜಮ್ಮ ಅವರಿಗೆ ತಲಾ 5 ಸಾವಿರ ರೂ. ನಗದು ಮತ್ತು ಪ್ರಶಸ್ತಿ ಫಲಕ ನೀಡಿ ಸನ್ಮಾನಿಸಲಾಯಿತು.