ಬೆಂಗಳೂರಿನಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಕೌಶಲ ಶೃಂಗಸಭೆ 2026 ಕಾರ್ಯಕ್ರಮದಲ್ಲಿ ಮದ್ದೂರು ತಾಲೂಕಿನ ಸೋಮನಹಳ್ಳಿ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗೆ ಅತ್ಯುನ್ನತ ಕೌಶಲ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಾಚಾರ್ಯ ಸಿ.ಎಸ್.ಪ್ರಕಾಶ್ ಬಾಬು, ಸುಬೋಧ್ ಯಾದವ್, ಡಾ.ಇ.ವಿ.ರಮಣರೆಡ್ಡಿ, ಎಂ.ಶಿಲ್ಪಾ, ಕಾಂತನಾಯಕ್ ಇದ್ದರು.  maddur
ಮಂಡ್ಯ

ಸೋಮನಹಳ್ಳಿ ಕೈಗಾರಿಕಾ ತರಬೇತಿ ಸಂಸ್ಥೆಗೆ ಪ್ರಶಸ್ತಿ

ಮೈಸೂರು ವಿಭಾಗಕ್ಕೆ ಗರಿ

ಮದ್ದೂರು: ತಾಂತ್ರಿಕ ಹಾಗೂ ವೃತ್ತಿಪರ ಕೌಶಲ ಅಭಿವೃದ್ಧಿ ಕ್ಷೇತ್ರದಲ್ಲಿ ತೋರಿದ ಅತ್ಯುತ್ತಮ ಸಾಧನೆ ಹಿನ್ನೆಲೆಯಲ್ಲಿ ಮೈಸೂರು ವಿಭಾಗೀಯ ಮಟ್ಟದಲ್ಲಿ ಮದ್ದೂರು ತಾಲೂಕಿನ ಸೋಮನಹಳ್ಳಿ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗೆ 2026 ನೇ ಸಾಲಿನ ಅತ್ಯುನ್ನತ ಕೌಶಲ ಪ್ರಶಸ್ತಿ ಲಭಿಸಿದೆ.

ಬೆಂಗಳೂರಿನ ಖಾಸಗಿ ಸಭಾಂಗಣದಲ್ಲಿ ನ. 3ರಿಂದ 5ರ ರವರೆಗೆ ಕರ್ನಾಟಕ ಸರ್ಕಾರದ ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಹಮ್ಮಿಕೊಂಡಿದ್ದ ‘ಕೌಶಲ ಶೃಂಗಸಭೆ - 2026’ ಕಾರ್ಯಕ್ರಮದಲ್ಲಿ ಸಂಸ್ಥೆ ಪ್ರಾಚಾರ್ಯರಾದ ಸಿ.ಎಸ್.ಪ್ರಕಾಶ್ ಬಾಬು ಅವರಿಗೆ ಇಲಾಖೆಯ ಸಚಿವ ಡಾ. ಶರಣಪ್ರಕಾಶ ರುದ್ರಪ್ಪ ಪಾಟೀಲ ಅವರು ರೂ. 50 ಸಾವಿರ ಪ್ರೋತ್ಸಾಹ ಧನದೊಂದಿಗೆ ಸ್ಮರಣಿಕೆ ನೀಡಿ ಗೌರವಿಸಿದರು. ತರಬೇತಿ ಸಂಸ್ಥೆಯು ತಾಂತ್ರಿಕ ಹಾಗೂ ವೃತ್ತಿಪರ ಕೌಶಲ ಅಭಿವೃದ್ಧಿ ಕ್ಷೇತ್ರದಲ್ಲಿ ತೋರಿದ ಗುಣಮಟ್ಟದ ತರಬೇತಿ ಮತ್ತು ಯುವಜನರಿಗೆ ಕಲ್ಪಿಸಿಕೊಟ್ಟ ಹಲವು ರೀತಿಯ ಉದ್ಯೋಗಾವಕಾಶ, ಈ ನಿಟ್ಟಿನಲ್ಲಿ ತೋರಿದ ದಕ್ಷತೆ ಮತ್ತು ವಿಶ್ವಾಸಾರ್ಹತೆಗಳನ್ನು ಗುರುತಿಸಿ ಪ್ರಶಸ್ತಿ ನೀಡಿರುವುದು ಮೈಸೂರು ವಿಭಾಗಕ್ಕೆ ಗರಿ ಮೂಡಿಸಿದೆ.

ಕೌಶಲ ಅಭಿವೃದ್ಧಿ, ಉದ್ಯಮ ಶೀಲತೆ ಮತ್ತು ಜೀವನೋಪಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಸುಬೋಧ ಯಾದವ್, ಪ್ರಾಧಿಕಾರದ ಅಧ್ಯಕ್ಷ ಡಾ.ಇ.ವಿ.ರಮಣರೆಡ್ಡಿ, ಆಯುಕ್ತೆ ಎಂ.ಶಿಲ್ಪಾ, ನಿಗಮದ ಅಧ್ಯಕ್ಷ ಕಾಂತನಾಯಕ್ ಮತ್ತಿತರರು ಇದ್ದರು.