ಸ್ಥಳೀಯರು ದುಷ್ಕರ್ಮಿಗಳನ್ನು ಥಳಿಸಿ ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ. 
ಮಂಡ್ಯ

ರೈಲಿನ ಚೈನ್‌ಲಿಂಕ್ ಎಳೆದಿದ್ದನ್ನು ಪ್ರಶ್ನಿಸಿದ್ದಕ್ಕೆ ಹಲ್ಲೆ

ಲೋಕೇಶ್ ಮನು. ಡಿ
ಮದ್ದೂರು: ಚನ್ನೇಗೌಡನದೊಡ್ಡಿ ಗ್ರಾಮದ ಬಳಿ ಬುಧವಾರ ಸಂಜೆ ಮೈಸೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ರಾಜರಾಣಿ ಎಕ್ಸ್‌ಪ್ರೆಸ್ ರೈಲಿನ ಚೈನ್‌ಲಿಂಕ್ ಎಳೆದ ಕಿಡಿಗೇಡಿಗಳನ್ನು ಪ್ರಶ್ನಿಸಿದ ಗೇಟ್‌ಮ್ಯಾನ್‌ಗೆ ಚಾಕುವಿನಿಂದ ಇರಿಯಲಾಗಿದೆ. ಈ ವೇಳೆ ಸ್ಥಳೀಯರು ದುಷ್ಕರ್ಮಿಗಳನ್ನು ಥಳಿಸಿ ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ.
ನಗರದ ಎಚ್‌ಕೆವಿ ನಗರದ ಚನ್ನೇಗೌಡನದೊಡ್ಡಿ ಗ್ರಾಮದ ರೈಲ್ವೆ ಗೇಟ್‌ಮ್ಯಾನ್ ಕುಮಾರ್(36) ಚಾಕು ಇರಿಕ್ಕೊಳಗಾದವರು. ಅವರಿಗೆ ಮದ್ದೂರು ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಮೈಸೂರು ಗೌಸಿಯಾನಗರ ಹಾಗೂ ಕ್ಯಾತಮಾರನಹಳ್ಳಿ ಬಡಾವಣೆಯ ಮುಸ್ಕಾನ್ ಖುರೇಶಿ, ಸುಭಾವ್ ಖುರೇಶಿ, ಸುಹೇಬ್‌ಖಾನ್, ವಸೀಂ ಆರೋಪಿಗಳು. ಸ್ಥಳೀಯರು ಥಳಿಸಿದ ಪರಿಣಾಮವಾಗಿ ತೀವ್ರ ಅಸ್ವಸ್ಥಗೊಂಡ ಕಿಡಿಗೇಡಿಗಳನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.
ಏನಿದು ಘಟನೆ?: ಮೈಸೂರಿನಿಂದ ಬೆಂಗಳೂರಿಗೆ ಚಲಿಸುತ್ತಿದ್ದ ರೈಲಿನ ಚೈನ್ ಲಿಂಕ್ ಎಳೆದ ಕಿಡಿಗೇಡಿಗಳು, ರೈಲಿನಿಂದಿಳಿದು ತೆರಳುತ್ತಿದ್ದ ವೇಳೆ ಗಮನಿಸಿದ ಗೇಟ್‌ಮ್ಯಾನ್ ಕುಮಾರ್ ಅವರನ್ನು ಪ್ರಶ್ನಿಸಿದ್ದಾರೆ. ಈ ವೇಳೆ ಏಕಾಏಕಿ ಚಾಕುವಿನಿಂದ ಇರಿದು ಪರಾರಿಯಾಗಲು ಯತ್ನಿಸಿದ್ದಾರೆ. ಸ್ಥಳದಲ್ಲಿದ್ದ ಗ್ರಾಮಸ್ಥರು ಪ್ರಶ್ನಿಸಲು ಮುಂದಾದ ವೇಳೆ ಅವರಿಗೆ ಚಾಕು ತೋರಿಸಿ ಬೆದರಿಕೆ ಹಾಕಿ ತಪ್ಪಿಸಿಕೊಳ್ಳಲು ಮುಂದಾಗಿದ್ದಾರೆ. ಆದರೆ ಸ್ಥಳೀಯರು ಮೂವರನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿ ಬಳಿಕ ಪೊಲೀಸರಿಗೆ ವಿಷಯ ಮುಟ್ಟಿಸಿದರು.
ಸ್ಥಳಕ್ಕಾಗಮಿಸಿದ ಮದ್ದೂರು ಪೊಲೀಸರು ತುರ್ತು ಚಿಕಿತ್ಸೆ ವಾಹನದ ಮೂಲಕ ಕಿಡಿಗೇಡಿಗಳನ್ನು ಬಂಧಿಸಿದರು. ಮಂಡ್ಯ ರೈಲ್ವೆ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.