ಹನುಮಂತನಗರದ ಶ್ರೀಆತ್ಮಲಿಂಗೇಶ್ವರ ಕ್ಷೇತ್ರದ ದೇವಸ್ಥಾನದ ಆವರಣದಲ್ಲಿ ಶಿವರಾತ್ರಿ ಹಬ್ಬದ ಪ್ರಯುಕ್ತ ರಥೋತ್ಸವ ವಿಜೃಂಭಣೆಯಿಂದ ಜರುಗಿತು.
ಕೆ.ಎಂ.ದೊಡ್ಡಿ: ಹನುಮಂತನಗರದಲ್ಲಿ ಶಿವರಾತ್ರಿ ಹಬ್ಬದ ಪ್ರಯುಕ್ತ ಶ್ರೀಆತ್ಮಲಿಂಗೇಶ್ವರ ರಥೋತ್ಸವವು ಭಕ್ತಾಧಿಗಳ ಸಮ್ಮುಖದಲ್ಲಿ ವೈಭವದಿಂದ ನೆರವೇರಿತು.
ದೇವಸ್ಥಾನದ ಧರ್ಮದರ್ಶಿ ಮಂಡಳಿ ಅಧ್ಯಕ್ಷ, ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ಶ್ರೀ ಆತ್ಮಲಿಂಗೇಶ್ವರ ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸಿದರು. ಬಳಿಕ ಭಾರತೀ ಎಜುಕೇಷನ್ ಟ್ರಸ್ಟ್ ಕಾರ್ಯನಿರ್ವಾಹಕ ಟ್ರಸ್ಟಿ ಆಶಯ್ ಮಧು ರಥೋತ್ಸವಕ್ಕೆ ಚಾಲನೆ ನೀಡಿದರು.
ಎಂಎಲ್ಸಿ ಮಧು ಜಿ. ಮಾದೇಗೌಡ ಮಾತನಾಡಿ, ರಥೋತ್ಸವಕ್ಕೆ ಸುತ್ತಮುತ್ತಲ ಗ್ರಾಮದ ಭಕ್ತಾಧಿಗಳು ಭಾಗವಹಿಸಿ ರಥವನ್ನು ಎಳೆಯುವ ಮೂಲಕ ಯಶಸ್ವಿಗೊಳಿಸಿದ್ದು, ಈ ಬಾರಿ ಉತ್ತಮ ಮಳೆಯಾಗಿ ರೈತರು ಸಮೃದ್ಧಿಯಾಗಿ ಬೆಳೆ ಬೆಳೆಯಲಿ ಎಂದು ಆಶಿಸಿದರು.
ಭಕ್ತರು ಹಾಗೂ ವಿದ್ಯಾರ್ಥಿಗಳು ರಥವನ್ನು ಎಳೆದು ಹಣ್ಣು ಮತ್ತು ಜವನ ಎಸೆಯುವುದರ ಮೂಲಕ ರಥೋತ್ಸವದಲ್ಲಿ ಉತ್ಸಾಹದಿಂದ ಪಾಲ್ಗೊಂಡರು. ಆತ್ಮಲಿಂಗೇಶ್ವರ ದೇವರಿಗೆ ಬೆಳಗ್ಗೆ 6 ರಿಂದ 8 ಗಂಟೆಯವರೆಗೆ ವಿಶೇಷ ಪೂಜೆ, ಮಧ್ಯಾಹ್ನ 12 ಗಂಟೆಗೆ ಮಹಾಮಂಗಳಾರತಿ 2 ಗಂಟೆಗೆ ರಥೋತ್ಸವ ಜರುಗಿತು.
ಶ್ರೀ ಕ್ಷೇತ್ರದ ಬಸಪ್ಪ ಸೇರಿದಂತೆ ಕೆ.ಶೆಟ್ಟಹಳ್ಳಿ ಶ್ರೀ ಭೈರವೇಶ್ವರ ಸ್ವಾಮಿ, ಮಾರಮ್ಮ, ಬಿದರಹಳ್ಳಿ ಶ್ರೀ ಕಬ್ಬಾಳಮ್ಮ, ಮಾದರಹಳ್ಳಿ ಶ್ರೀ ಕಾಳಮ್ಮ, ಶ್ರೀ ದೇವಮ್ಮ, ಚಿಕ್ಕರಸಿನಕೆರೆ ಶ್ರೀ ಕಾಲಭೈರವೇಶ್ವರ ಸ್ವಾಮಿ, ಅರೇಚಾಕನಹಳ್ಳಿ ಶಂಭುಲಿಂಗೇಶ್ವರ, ಕರಡಕೆರೆ ಆಂಜನೇಯ ಸ್ವಾಮಿಯ ಮೆರವಣಿಗೆ ಮಾಡಲಾಯಿತು.
ವೀರಗಾಸೆ, ಪೂಜಾಕುಣಿತ ರಥೋತ್ಸವಕ್ಕೆ ಮೆರುಗು ನೀಡಿದವು. ಪೊಲೀಸ್ ಇನ್ಸ್‌ಪೆಕ್ಟರ್ ಅನಿಲ್‌ಕುಮಾರ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.