ಕಸಾಯಿ ಖಾನೆಗೆ ಗೋ ಸಾಗಣೆ ಮಾಡುತ್ತಿದ್ದ ಗೋವು ಹಾಗೂ ಟೆಂಪೋವನ್ನು ಹಿಂದೂ ಪರ ಸಂಘಟನೆ ಕಾರ್ಯಕರ್ತರು ಹಿಡಿದು ಪೊಲೀಸರ ವಶಕ್ಕೆ ಒಪ್ಪಿಸಿದರು. 
ಮಂಡ್ಯ

ಕಸಾಯಿ ಖಾನೆಗೆ ಗೋವು ಸಾಗಿಸುತ್ತಿದ್ದವರ ಬಂಧನ

ಮದ್ದೂರು: ಕಸಾಯಿ ಖಾನೆಗೆ ಗೋವು ಸಾಗಣೆ ಮಾಡುತ್ತಿದ್ದ ಗೂಡ್ಸ್ ಟೆಂಪೋವನ್ನು ಗೋವು ಸಮೇತ ಹಿಂದೂಪರ ಸಂಘಟನೆ ಕಾರ್ಯಕರ್ತರು ಪೊಲೀಸರ ವಶಕ್ಕೆ ಒಪ್ಪಿಸಿರುವ ಘಟನೆ ಶನಿವಾರ ರಾತ್ರಿ ಪಟ್ಟಣದಲ್ಲಿ ನಡೆದಿದೆ.
ಪ್ರಕರಣದ ಸಂಬಂಧ ಮದ್ದೂರು ನಿವಾಸಿ ನಾಜೀರ್ ಹಾಗೂ ಮಳವಳ್ಳಿ ತಾಲೂಕಿನ ಮಲ್ಲಿಕ್ಯಾತನಹಳ್ಳಿ ಶ್ರೀಕಾಂತ್ ಎಂಬುವರನ್ನು ಬಂಧಿಸಲಾಗಿದೆ. ಬಂಧಿತರ ವಿರುದ್ಧ ಜಾನುವಾರ ಹತ್ಯೆ ಪ್ರತಿಬಂಧಕ ಮತ್ತು ಸುರಕ್ಷತಾ ಕಾಯ್ದೆ ಕಲಂ 192 ಅನ್ವಯ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.
ಶಿವನಸಮುದ್ರದಿಂದ ಮದ್ದೂರು ರಾಮ್ ರಹೀಮ್ ನಗರ ಬಡಾವಣೆ ಕಸಾಯಿ ಖಾನೆಗೆ ಟೆಂಪೋದಲ್ಲಿ ಸಾಗಣೆ ಮಾಡಲಾಗುತ್ತಿದೆ ಎಂಬ ಮಾಹಿತಿ ಮೇರೆಗೆ ಹಿಂದೂಪರ ಸಂಘಟನೆಯ ಸಚಿನ್, ಕದಲೂರು ನವೀನ, ಯೋಗಾನಂದ, ವೀರಭದ್ರಸ್ವಾಮಿ ಸೇರಿದಂತೆ ಹಲವು ಕಾರ್ಯಕರ್ತರು ಹಳೆ ಎಂಸಿ ರಸ್ತೆಯ ಕೆನರಾ ಬ್ಯಾಂಕಿನ ಬಳಿ ದಾಳಿ ನಡೆಸಿ ಗೋ ರಕ್ಷಣೆ ಮಾಡಿದ್ದಾರೆ. ಪೊಲೀಸರ ವಶಕ್ಕೆ ಪಡೆದ ಗೋವನ್ನು ಮೈಸೂರಿನ ಪಿಂಜರಾ ಪೋಲ್‌ಗೆ ಸುರಕ್ಷಿತವಾಗಿ ರವಾನಿಸಲಾಗಿದೆ. ಬಂಧಿತ ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ ನಂತರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.