theft Drama case 
ಮಂಡ್ಯ

ಆ್ಯಸಿಡ್ ದಾಳಿ ಮಾಡಿ ಚಿನ್ನ ಕದ್ದಿದ್ದಾರೆಂದು ನಾಟಕವಾಡಿದ್ದವನ ಬಂಧನ

ಪಾಂಡವಪುರ: ದರೋಡೆಕೋರರು ಆ್ಯಸಿಡ್ ದಾಳಿ ನಡೆಸಿ 170 ಗ್ರಾಂ ಚಿನ್ನ, 8 ಕೆಜಿ ಬೆಳ್ಳಿ ದೋಚಿಕೊಂಡು ಪರಾರಿಯಾದ್ದಾರೆ ಎಂದು ಡ್ರಾಮ ಮಾಡಿದ್ದ ಜ್ಯುವೆಲ್ಲರಿ ಅಂಗಡಿ ಮಾಲೀಕ ಜೈಲು ಪಾಲಾಗಿರುವುದು ತಾಲೂಕಿನ ಕ್ಯಾತನಹಳ್ಳಿ ಗ್ರಾಮದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಗ್ರಾಮದ ಮಹಾಲಕ್ಷ್ಮೀ ಜ್ಯುವೆಲ್ಲರ್ಸ್ ಮಾಲೀಕ ಜಿತೇಂದ್ರ ಜೈಲು ಸೇರಿದ ವ್ಯಾಪಾರಿ. ರಾಜಸ್ಥಾನ ಮೂಲದವನಾಗಿರುವ ಜಿತೇಂದ್ರ ಕಳೆದ ಒಂದೂವರೆ ವರ್ಷದಿಂದ ಕ್ಯಾತನಹಳ್ಳಿಯಲ್ಲಿ ಚಿನ್ನದ ಅಂಗಡಿ ತೆರೆದು ವ್ಯಾಪಾರ ಮಾಡುತ್ತಿದ್ದು, ಇತ್ತೀಚೆಗೆ ನಷ್ಟಕ್ಕೊಳಗಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಎನ್ನಲಾಗಿದೆ. ಸಾಲದಿಂದ ಪಾರಾಗಲು ಫ್ಲ್ಯಾನ್ ರೂಪಿಸಿದ್ದ ವ್ಯಾಪಾರಿ ಅದರಂತೆ ಫೆ.10ರಂದು ತನ್ನ ಮೇಲೆ ದರೋಡೆಕೋರರು ಆ್ಯಸಿಡ್ ದಾಳಿ ನಡೆಸಿ ಅಂಗಡಿಯಲ್ಲಿದ್ದ 170 ಗ್ರಾಂ ಚಿನ್ನ, 8 ಕೆಜಿ ಬೆಳ್ಳಿಯನ್ನು ಕದ್ದೊಯ್ದಿರುವುದಾಗಿ ಪೊಲೀಸರಿಗೆ ತಿಳಿಸಿದ್ದ. ಆದರೆ, ಈ ವಿಚಾರವಾಗಿ ಆತ ಯಾವುದೇ ದೂರು ನೀಡಿರಲಿಲ್ಲ.
ಆ್ಯಸಿಡ್ ದಾಳಿಯಿಂದ ಮುಖದ ಒಂದು ಭಾಗದಲ್ಲಿ ಮಾತ್ರ ಕಲೆ ಇದ್ದು, ಕಣ್ಣಿನ ಭಾಗದಲ್ಲಿ ಯಾವ ಕಲೆಯೂ ಇರಲಿಲ್ಲ. ಜತೆಗೆ ನನಗೆ ತುಂಬ ಉರಿ ಇತ್ತು. ಪ್ರಜ್ಞೆ ತಪ್ಪುವಂತಹ ಸ್ಪ್ರೇಯನ್ನು ಮುಖಕ್ಕೆ ಹಾಕಿದ್ದರಿಂದ ನನಗೆ ತಕ್ಷಣಕ್ಕೆ ದೂರು ಕೊಡಲಾಗಲಿಲ್ಲವೆಂದು ಸಿನಿಮೀಯ ಮಾದರಿಯಲ್ಲಿ ಕತೆ ಹೆಣೆದಿದ್ದ. ಈತನ ಅಂಗಡಿಯಲ್ಲಿದ್ದ ಸಿಸಿ ಕ್ಯಾಮರಾ, ಡಿವಿಆರ್‌ನ್ನು ದರೋಡೆಕೋರರು ಕದ್ದಿದ್ದಾರೆ ಎಂದು ಪೊಲೀಸರನ್ನು ನಂಬಿಸಿದ್ದ.
ಚಿನ್ನದ ವ್ಯಾಪಾರಿ ಜಿತೇಂದ್ರ ಮೈಸೂರಿನಲ್ಲಿ ಸಾಲದ ಆಧಾರದಲ್ಲಿ ಎಷ್ಟು ಚಿನ್ನ-ಬೆಳ್ಳಿ ಖರೀದಿಸಿದ್ದ ಎನ್ನುವುದು ಸದ್ಯಕ್ಕೆ ಗೊತ್ತಾಗಿಲ್ಲ. ಆತ ರಾಜಸ್ಥಾನಕ್ಕೆ ವಾಪಸ್ ತೆರಳುವ ಉದ್ದೇಶದಿಂದ ಆ್ಯಸಿಡ್ ದಾಳಿ ನಾಟಕವಾಡಿದ್ದಾನೆ. ಪೊಲೀಸರಿಗೆ ಸುಳ್ಳು ಮಾಹಿತಿ ನೀಡಿದ ಆಧಾರದ ಮೇಲೆ ಆತನನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.