ಮಂಡ್ಯ ತಾಲೂಕು ಮಾಯಪ್ಪನಹಳ್ಳಿ ಗ್ರಾಮಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿ.ಜೆ.ಶೋಭಾರಾಣಿ ಭೇಟಿ ನೀಡಿ ಮಾಹಿತಿ ಕಲೆ ಹಾಕಿದರು.
- ಮಾಯಪ್ಪನಹಳ್ಳಿ ಗ್ರಾಮದಲ್ಲಿ ನಡೆದಿದ್ದ ಕೊಲೆ ಪ್ರಕರಣ
- ನಾಲ್ವರು ಆರೋಪಿಗಳನ್ನು ಬಂಧಿಸಿದ ಪೊಲೀಸರು
- ಮತ್ತೊರ್ವ ಆರೋಪಿಗಾಗಿ ಶೋಧ
ಮಂಡ್ಯ: ತಾಲೂಕಿನ ಮಾಯಪ್ಪನಹಳ್ಳಿ ಗ್ರಾಮದಲ್ಲಿ ನಡೆದಿದ್ದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆರಗೋಡು ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಮಾಯಪ್ಪನಹಳ್ಳಿ ಗ್ರಾಮದ ನಿಂಗರಾಜು, ಈತನ ಪತ್ನಿ ಪ್ರತಿಭಾ, ಮಕ್ಕಳಾದ ಭರತ್ ಮತ್ತು ದರ್ಶನ್ ಬಂಧಿತರು. ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದು, ಈತನ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ.
ಆಸ್ತಿ ಕಲಹ ಹಿನ್ನೆಲೆಯಲ್ಲಿ ಜ.16ರಂದು ಮುಂಜಾನೆ ಗ್ರಾಮದ ಎಂ.ಎನ್.ಯೋಗೇಶ್ ಎಂಬಾತನನ್ನು ಈತನ ಸಹೋದರ ನಿಂಗರಾಜು ತನ್ನ ಮಕ್ಕಳೊಂದಿಗೆ ಸೇರಿ ಅಣ್ಣನೇ ತಮ್ಮನನ್ನು ಕೊಲೆ ಮಾಡಿದ್ದಾನೆಂದು ದೂರು ದಾಖಲಾಗಿತ್ತು. ಈ ಸಂಬಂಧ ತನಿಖಾ ತಂಡ ರಚನೆ ಮಾಡಲಾಗಿತ್ತು. ಅದರಂತೆ ಜ.18ರಂದು ಮಂಡ್ಯ ನಗರದಲ್ಲಿ ಇಬ್ಬರನ್ನು ಹಾಗೂ ಕೆ.ಎಂ.ದೊಡ್ಡಿಯ ತಿಟ್ಟಮಾರನಹಳ್ಳಿ ಸಮೀಪ ಮತ್ತಿಬ್ಬರನ್ನು ಬಂಧಿಸಲಾಗಿದೆ.
ತನಿಖಾ ತಂಡದಲ್ಲಿದ್ದ ಡಿವೈಎಸ್ಪಿ ಲಕ್ಷ್ಮೀ ನಾರಾಯಣಪ್ರಸಾದ್, ಕೆರಗೋಡು ಠಾಣೆ ಎಸ್‌ಐ ಕಾಶಿನಾಥ ಬಗಲಿ, ಶಿವಳ್ಳಿ ಠಾಣೆ ಎಸ್‌ಐ ರಾಘವೇಂದ್ರ ಕಠಾರಿ, ಎಎಸ್‌ಐ ಚಿಕ್ಕಯ್ಯ, ಕೃಷ್ಣಕುಮಾರ್, ಜಿ.ಎಂ.ಶಿವಕುಮಾರ್, ಮಂಜುನಾಥ, ಎಸ್.ಆರ್.ಚೇತನ್‌ಕುಮಾರ್, ಹೂವಣ್ಣ ಎಸ್.ಬಿರಾದರ, ವಿನಾಯಕ ದೊಡ್ಡಮನಿ, ಶ್ರುತಿ, ಪೂಜಾ ಅವರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿ.ಜೆ.ಶೋಭಾರಾಣಿ ಅಭಿನಂದಿಸಿದ್ದಾರೆ.
ಪಂಜಿನ ಮೆರವಣಿಗೆ: ತಾಲೂಕಿನ ಮಾಯಪ್ಪನಹಳ್ಳಿಯಲ್ಲಿ ನಡೆದಿದ್ದ ಕೊಲೆ ಪ್ರಕರಣದ ಆರೋಪಿಗಳನ್ನು ಬಂಧಿಸಿ ಕಠಿಣ ಶಿಕ್ಷೆ ಕೊಡುವಂತೆ ಆಗ್ರಹಿಸಿ ಗ್ರಾಮಸ್ಥರು ಭಾನುವಾರ ಪಂಜಿನ ಮೆರವಣಿಗೆ ನಡೆಸಿದರು. ಮೃತ ಯೋಗೇಶ್ ಮನೆಯಿಂದ ಪ್ರಾರಂಭವಾದ ಮೆರವಣಿಗೆ ಕಾಲಭೈರವೇಶ್ವರ ಸ್ವಾಮಿಯ ದೇವಸ್ಥಾನದವರೆಗೂ ನಡೆಯಿತು. ಗ್ರಾಮದ ಮುಖಂಡರಾದ ರಮೇಶ್, ದೊರೆಸ್ವಾಮಿ, ದೇವರಾಜು, ರವಿಕುಮಾರ್, ಲಿಂಗರಾಜು, ಯಶವಂತ್, ಮನೋಜ್, ಸ್ವಾಮಿ ಇತರರಿದ್ದರು.