ಮೇಲುಕೋಟೆಯ ಪುತಿನ ಕಲಾಮಂದಿರದಲ್ಲಿ ಹಮ್ಮಿಕೊಂಡಿದ್ದ ಬೇಸಿಗೆ ಶಿಬಿರ ಅಕ್ಕರೆಯ ಅಂಗಳದ ಸಮಾರೋಪ ಕಾರ್ಯಕ್ರಮದಲ್ಲಿ ಮನ್‌ಮುಲ್ ನಿರ್ದೇಶಕ ಶಿವಕುಮಾರ್ ಮಕ್ಕಳಿಗೆ ಬಹುಮಾನ ವಿತರಿಸಿದರು.  
ಮಂಡ್ಯ

ಬೇಸಿಗೆ ಶಿಬಿರ ಮಕ್ಕಳಿಗೆ ಮನ್‌ಮುಲ್ ವೀಕ್ಷಣೆಗೆ ವ್ಯವಸ್ಥೆ

ಮೇಲುಕೋಟೆ: ಬೇಸಿಗೆ ಶಿಬಿರದಲ್ಲಿ ಭಾಗವಹಿಸಿದ ಸರ್ಕಾರಿ ಶಾಲೆ ಮಕ್ಕಳನ್ನು ಮನ್‌ಮುಲ್‌ಗೆ ಕರೆದೊಯ್ದು ಅಲ್ಲಿನ ಚಟುವಟಿಕೆ ಪರಿಚಯಿಸಲಾಗುವುದು ಎಂದು ಮನ್‌ಮುಲ್‌ನ ಪಾಂಡವಪುರ ತಾಲೂಕು ನಿರ್ದೇಶಕ ಶಿವಕುಮಾರ್ ತಿಳಿಸಿದರು.
ಮೇಲುಕೋಟೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಗ್ರಾಮ ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ, ಗ್ರಂಥಾಲಯ ಇಲಾಖೆ ಹಾಗೂ ಕಾಲಭೈರವೇಶ್ವರ ಜಾನಪದ ಕಲಾ ತಂಡದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಬೇಸಿಗೆ ಶಿಬಿರ ಅಕ್ಕರೆಯ ಅಂಗಳದ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜಿಪಂ ಸಿಇಒ ನಂದಿನಿ ಅವರ ಕಾಳಜಿಯಿಂದಾಗಿ ಬೇಸಿಗೆಯ ವೇಳೆಯಲ್ಲಿ ಕ್ರಿಯಾತ್ಮಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಜಿಲ್ಲಾದ್ಯಂತ ಬೇಸಿಗೆ ಶಿಬಿರ ನಡೆಸಲಾಗಿದೆ. ಮೇಲುಕೋಟೆಯಲ್ಲಿ ಮಕ್ಕಳಿಗೆ ನಾಟಕ, ಚಿತ್ರಕಲೆ, ಗೊಂಬೆ ತಯಾರಿಕೆ, ಗಣಿತ, ಇಂಗ್ಲಿಷ್ ಚಟುವಟಿಕೆ, ಈಜು, ಯೋಗ, ಜನಪದ ನೃತ್ಯ, ಸ್ಮಾರಕಗಳ ಪರಿಚಯ ಹೀಗೆ ಹತ್ತಾರು ಚಟುವಟಿಕೆ ಆಯೋಜಿಸಿ ಅರ್ಥಪೂರ್ಣವಾಗಿ ಶಿಬಿರ ನಡೆಸಲಾಗಿದೆ. ಶಿಬಿರದಲ್ಲಿ ಭಾಗಿಯಾದ ಮಕ್ಕಳಿಗೆ ಸ್ವಂತ ಖರ್ಚಿನಲ್ಲಿ ಬಸ್ ವ್ಯವಸ್ಥೆ ಮಾಡಿ, ರೈತರ ಜೀವನಾಡಿಯಾದ ಮನ್‌ಮುಲ್ ಕಾರ್ಯವೈಖರಿಯನ್ನು ಪರಿಚಯ ಮಾಡಿಸುತ್ತೇನೆ ಎಂದು ತಿಳಿಸಿದರು.
ಶಿಬಿರದಲ್ಲಿ ಭಾಗವಹಿಸಿದ್ದ ಮಕ್ಕಳು ಕಂಸಾಳೆ, ಅಡವಿ ದೇವಿ ಮುಂತಾದ ನೃತ್ಯ, ಕುಡಿತದ ದುಷ್ಪರಿಣಾಮ ಜಾಗೃತಿ ನಾಟಕ ಪ್ರದರ್ಶಿಸಿದರು. ಶಂಬೂನಹಳ್ಳಿ ಆನಂದ್ ಪ್ರಾಯೋಜಿಸಿದ ಸ್ಮರಣಿಕೆಗಳನ್ನು ಮಕ್ಕಳಿಗೆ ವಿತರಿಸಲಾಯಿತು. ಮಕ್ಕಳ ಮನೆ ಶಿಕ್ಷಕಿ ಕವಿತಾ, ಸಹಾಯಕಿ ಸವಿತಾ, ಗ್ರಂಥಪಾಲಕಿ ಗುಣವತಿ, ಶಿಬಿರದ ನಿರ್ದೇಶಕ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ರಾಘು ಅವರನ್ನು ಅಭಿನಂದಿಸಲಾಯಿತು. ಸಮಾರಂಭದಲ್ಲಿ ದೇವಾಲಯದ ಕಾರ್ಯನಿರ್ವಾಹ ಅಧಿಕಾರಿ ಶೀಲಾ ಅವರು ಮಕ್ಕಳಿಗೆ ಲೇಖನ ಸಾಮಗ್ರಿ ಕೊಡುಗೆ ನೀಡಿದರು. ಗ್ರಾಪಂ ಅಧ್ಯಕ್ಷೆ ಭವಾನಿ ಹರಿಧರ್, ಉಪಾಧ್ಯಕ್ಷ ಜಯರಾಮೇಗೌಡ, ಪಿಡಿಒ ರಾಜೇಶ್ವರ್, ಸದಸ್ಯೆ ಮಣಿಮುರುಗನ್, ಕಾಲಭೈರವೇಶ್ವರ ಕಲಾ ತಂಡದ ಜಯಲಕ್ಷ್ಮೀ ಪುಟ್ಟರಾಜು, ಕನಗೋನಹಳ್ಳಿ ಕಾಂತರಾಜು, ಪರಿಸರತಜ್ಞ ಸಂತೋಷ್‌ಕೌಲಗಿ, ದೇವಾಲಯದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಪ್ರೀತಿ ಮಹದೇವ್, ಪುಟ್ಟಸ್ವಾಮಿ, ಶಿಬಿರದ ನೋಡಲ್ ಅಧಿಕಾರಿ ನಿರ್ಮಲಾ, ಸಹ ನಿರ್ದೇಶಕ ಮನು, ಬಾಲಕರ ಶಾಲೆಯ ಮುಖ್ಯಶಿಕ್ಷಕ ಸಂತಾನರಾಮನ್ ಇದ್ದರು.