ನಾಗಮಂಗಲ ಪಟ್ಟಣದ ತಾಲೂಕು ಆಡಳಿತಸೌಧದ ನ್ಯಾಯಾಲಯದ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಸಾರ್ವಜನಿಕರ ಅಹವಾಲು ಸ್ವೀಕಾರ ಮತ್ತು ಕುಂದು ಕೊರತೆ ಸಭೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಎಡಿಎಲ್‌ಆರ್ ದೊಳ್ಳೇಗೌಡರನ್ನು ತರಾಟೆಗೆ ತೆಗೆದುಕೊಂಡರು.
- ಲೋಕಾಯುಕ್ತ ಎಸ್ಪಿ ಸುರೇಶ್ ಬಾಬು ತರಾಟೆ
- ಸಾರ್ವಜನಿಕರ ಕುಂದುಕೊರತೆ ಸಭೆ
ನಾಗಮಂಗಲ: ಸಾರ್ವಜನಿಕರಿಂದ ಯಾವುದೇ ದೂರುಗಳು ಬಾರದಂತೆ ಎಲ್ಲ ಅಧಿಕಾರಿಗಳು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಬೇಕು. ಸಣ್ಣ ಪುಟ್ಟ ತಪ್ಪುಗಳನ್ನು ಸರಿಪಡಿಸಿಕೊಳ್ಳದಿದ್ದಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಲೋಕಾಯುಕ್ತ ಎಸ್ಪಿ ಸುರೇಶ್ ಬಾಬು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಪಟ್ಟಣದ ತಾಲೂಕು ಆಡಳಿತಸೌಧದ ನ್ಯಾಯಾಲಯದ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಸಾರ್ವಜನಿಕರ ಅಹವಾಲು ಸ್ವೀಕಾರ ಮತ್ತು ಕುಂದುಕೊರತೆ ಸಭೆಯ ನಂತರ ಮಾತನಾಡಿದರು. ತಾಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳು ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೂ ಸಹ ಕೆಲ ಅಧಿಕಾರಿಗಳಿಂದ ಸಣ್ಣಪುಟ್ಟ ತಪ್ಪುಗಳು ನಡೆಯುತ್ತಿರುತ್ತವೆ. ಅವುಗಳನ್ನು ಸರಿಪಡಿಸಿಕೊಳ್ಳುವಂತೆ ಸೂಚಿಸಲಾಗಿದೆ ಎಂದರು.
ತಾಲೂಕಿನ ಚಿಣ್ಯ ಗ್ರಾಮದ ಸ.ನಂ.49ರಲ್ಲಿ 34ಗುಂಟೆ ಜಮೀನಿನ ಪೋಡಿ ದುರಸ್ತು ಮಾಡಲು ಎಡಿಎಲ್‌ಆರ್ ದೊಳ್ಳೇಗೌಡ ಸೇರಿದಂತೆ ಸರ್ವೇ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಗೆ 15 ಸಾವಿರ ರೂ. ಲಂಚ ನೀಡಿದ್ದೇನೆ.
ಆರು ತಿಂಗಳು ಕಳೆದರೂ ಪೋಡಿ ದುರಸ್ತು ಮಾಡಿಕೊಟ್ಟಿಲ್ಲ ಎಂದು ಚಿಣ್ಯ ಗ್ರಾಮದ ಸಿ.ಎನ್.ನಾಗೇಂದ್ರ ಅವರು ಲೋಕಾಯುಕ್ತ ಎಸ್ಪಿ ಅವರಿಗೆ ದೂರು ಸಲ್ಲಿಸಿದರು. ಈ ವೇಳೆ ಗರಂ ಆದ ಲೋಕಾಯುಕ್ತ ಅಧಿಕಾರಿಗಳು ಅರ್ಜಿದಾರರ ಕೆಲಸ ಮಾಡಿಕೊಡಲು ಲಂಚ ಕೇಳುತ್ತೀರಿ ಎಂದರೆ ನಿಮಗೆ ನಾಚಿಕೆಯಾಗುವುದಿಲ್ಲವೇ?. ಪ್ರಪಂಚದಲ್ಲಿ ಇಲ್ಲದ ಸಮಸ್ಯೆ ನಿಮ್ಮ ಮುಂದೆ ಬಂದಿದೆಯೇ. ಈ ವಿಚಾರದಲ್ಲಿ ಸಮಸ್ಯೆಗೆ ಸಿಕ್ಕಿಹಾಕಿಕೊಳ್ಳುತ್ತೀರಿ. ಕಾನೂನು ಬದ್ಧವಾಗಿದ್ದರೆ ಕೆಲಸ ಮಾಡಿಕೊಡಬೇಕು. ಯಾವುದೇ ಕೆಲಸ ಕಾರ್ಯಗಳಿಗೆ ಜನರಿಂದ ಲಂಚ ಪಡೆದರೆ ಅದರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಡಿಎಲ್‌ಆರ್ ದೊಳ್ಳೇಗೌಡರನ್ನು ತರಾಟೆಗೆ ತೆಗೆದುಕೊಂಡು ಖಡಕ್ ಎಚ್ಚರಿಕೆ ನೀಡಿದರು.
38ಅರ್ಜಿಗಳ ಸ್ವೀಕಾರ: ಸಭೆಯಲ್ಲಿ ಕಂದಾಯ ಇಲಾಖೆಗೆ ಸಂಬಂಧಿಸಿದ 28 ದೂರು ಅರ್ಜಿ ಸಲ್ಲಿಕೆಯಾದರೆ, ಪಂಚಾಯತ್‌ರಾಜ್, ನಗರಾಭಿವೃದ್ಧಿ, ಶಿಕ್ಷಣ ಹಾಗೂ ಪೊಲೀಸ್ ಇಲಾಖೆಗೆ ಸಂಬಂಧಿಸಿದ ತಲಾ 2 ದೂರು ಅರ್ಜಿಗಳು, ಗಣಿ ಮತ್ತು ಭೂ ವಿಜ್ಞಾನ ಹಾಗೂ ಹೇಮಾವತಿ ಇಲಾಖೆಗೆ ಸಂಬಂಧಿಸಿದ ತಲಾ 1 ಅರ್ಜಿ ಸೇರಿ ಒಟ್ಟು 38 ದೂರು ಅರ್ಜಿಗಳು ಸಲ್ಲಿಕೆಯಾದವು. ಕೆಲವು ಸಮಸ್ಯೆಗಳನ್ನು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳ ಮೂಲಕ ಸ್ಥಳದಲ್ಲಿಯೇ ಪರಿಹರಿಸಲಾಯಿತು.
ಲೋಕಾಯುಕ್ತ ಡಿವೈಎಸ್ಪಿ ಎಚ್.ಟಿ.ಸುನಿಲ್‌ಕುಮಾರ್, ಇನ್‌ಸ್ಪೆಕ್ಟರ್‌ಗಳಾದ ಬಿ.ಟಿ.ಬ್ಯಾಟರಾಯಗೌಡ, ಎಂ.ರವಿಕುಮಾರ್, ತಹಸೀಲ್ದಾರ್ ಅಶೋಕ್, ತಾಪಂ ಇಒ ಸತೀಶ್, ತಾಲೂಕು ಆರೋಗ್ಯಾಧಿಕಾರಿ ಡಾ.ನಾರಾಯಣ, ವಲಯ ಅರಣ್ಯಾಧಿಕಾರಿ ಸಂಪತ್ ಪಟೇಲ್, ಎಆರ್‌ಟಿಒ ಹೊನ್ನೇಗೌಡ, ಕೆಎಸ್‌ಆರ್‌ಟಿಸಿ ಡಿಪೋ ವ್ಯವಸ್ಥಾಪಕ ಮಹೇಶ್, ಪುರಸಭೆ ಮುಖ್ಯಾಧಿಕಾರಿ ವೀಣಾ, ವಿವಿಧ ಇಲಾಖೆಗಳ ಅಧಿಕಾರಿಗಳು, ತಾಲೂಕಿನ ಗ್ರಾ.ಪಂ.ಗಳ ಪಿಡಿಒಗಳು ಇದ್ದರು.