ಶ್ರೀರಂಗಪಟ್ಟಣದ ಮೂಡಲ ಬಾಗಿಲು ಶ್ರೀ ಆಂಜನೇಯಸ್ವಾಮಿ ದೇವಾಲಯಕ್ಕೆ ಶಾಸಕ ಬಸನಗೌಡ ಪಾಟೀಲ ಯತ್ನಾಳ ಭೇಟಿ ನೀಡಿ ದರ್ಶನ ಪಡೆದರು. ಚಂದನ್, ವರುಣ್ ಇದ್ದರು.
ಶ್ರೀರಂಗಪಟ್ಟಣ: ರಾಜ್ಯದಲ್ಲಿ ಆಡಳಿತರೂಢ ಕಾಂಗ್ರೆಸ್ ಸರ್ಕಾರ ಹಿಂದೂ ವಿರೋಧಿ ನೀತಿ ಅನುಸರಿಸುತ್ತಿದೆ. ಪಟ್ಟಣದ ಮೂಲಸ್ಥಾನದಲ್ಲಿ ಮೂಡಲ ಬಾಗಿಲು ಆಂಜನೇಯನ ಪ್ರತಿಷ್ಠಾಪನೆ ಹಿಂದೂಗಳ ಸಂಕಲ್ಪವಾಗಿದೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿದರು.
ಪಟ್ಟಣದ ಶ್ರೀ ಮೂಡಲ ಬಾಗಿಲು ಆಂಜನೇಯಸ್ವಾಮಿ ದೇವಾಲಯಕ್ಕೆ ಶುಕ್ರವಾರ ಭೇಟಿ ನೀಡಿ ದರ್ಶನ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಮೊದಲೇ ಇಲ್ಲಿ ದೇವಸ್ಥಾನ ಇತ್ತು ಎಂಬುದಕ್ಕೆ ಸಾಕ್ಷಿಯಾಗಿ ಕಣ್ಣಿಗೆ ಕಾಣುವಂತೆ ಸಾಕಷ್ಟು ಕುರುಹುಗಳಿವೆ. ಅಯೋಧ್ಯೆಯ ರಾಮ ಮಂದಿರ ಸಹ ಮುಚ್ಚಿ ಹೋಗಿತ್ತು. ಅಲ್ಲಿ ಉತ್ಖನನದ ಬಳಿಕ ಸಾಕಷ್ಟು ಕುರುಹು ಸಿಕ್ಕಿತು. ಆದರೆ, ಶ್ರೀರಂಗಪಟ್ಟಣದಲ್ಲಿ ಉತ್ಖನನದ ಅವಶ್ಯಕತೆಯೇ ಇಲ್ಲ. ಕಣ್ಣಿಗೆ ಕಾಣುವ ಸಾಕಷ್ಟು ಕುರುಹುಗಳು ಇಲ್ಲಿವೆ. ಭಾರತದಲ್ಲಿರುವ ಮುಸ್ಲಿಮರಿಗೆ ನೆಮ್ಮದಿ, ಶಾಂತಿಯಿಂದಿರುವ ಮನಸ್ಥಿತಿ ಇಲ್ಲ. ನಾವು ಎಷ್ಟೇ ಅನ್ಯೋನ್ಯವಾಗಿದ್ದರೂ ಗಣಪತಿ ಮೆರವಣಿಗೆ ಮೇಲೆ ಕಲ್ಲು ತೂರುತ್ತಾರೆ. ಮದ್ದೂರಿನಲ್ಲಿ ಗಣೇಶ ಮೂರ್ತಿ ಮೇಲೆ ಕಲ್ಲು, ನಾಗಮಂಗದಲ್ಲಿ ಪೆಟ್ರೋಲ್ ಬಾಂಬ್ ಹಾಕಿರುವುದೇ ಇದಕ್ಕೆ ಸಾಕ್ಷಿ ಎಂದು ಹೇಳಿದರು.
ದೇಶ ವಿಭಜನೆ ಸಂದರ್ಭದಲ್ಲಿ ಭಾರತದಲ್ಲಿ ಕೊನೆಯ ಮುಸ್ಲಿಂ ವ್ಯಕ್ತಿ ಪಾಕಿಸ್ತಾನಕ್ಕೆ, ಪಾಕಿಸ್ತಾನದ ಕೊನೇ ಹಿಂದೂ ಭಾರತಕ್ಕೆ ಬರಲಿ ಎಂದು ಅಂಬೇಡ್ಕರ್ ಹೇಳಿದ್ದರು. ಇಲ್ಲಿ ದಲಿತ-ಮುಸ್ಲಿಂ ಭಾಯಿ ಭಾಯಿ ಎನ್ನುವವರಿಗೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ವಿಚಾರಧಾರೆಗಳೇ ಗೊತ್ತಿಲ್ಲ.370ರ ಆರ್ಟಿಕಲ್ ತೆಗೆಯುವ ಮುನ್ನ ಕಾಶ್ಮೀರದಲ್ಲಿ ಮೀಸಲಾತಿ ಇರಲಿಲ್ಲ. ಅಲ್ಲಿನ ದಲಿತರು ಡಿಸಿ ಆಗಲು ಸಾಧ್ಯವಾಗುತ್ತಿರಲಿಲ್ಲ. ಬದಲಿಗೆ ಪೌರಕಾರ್ಮಿಕ ಆಗಲಷ್ಟೇ ಅವಕಾಶ ಇತ್ತು. ಆದರೀಗ ಪ್ರಧಾನಿ ನರೇಂದ್ರ ಮೋದಿ ಅವರು 370 ಆರ್ಟಿಕಲ್ ತೆಗೆಯುವ ಮೂಲಕ ಡಾ.ಅಂಬೇಡ್ಕರ್ ಅವರ ವಿಚಾರಧಾರೆ ಎತ್ತಿಹಿಡಿದಿದ್ದಾರೆ. ಈಗ ಅಲ್ಲಿ ಸಾಮಾನ್ಯರೂ ಜಿಲ್ಲಾಧಿಕಾರಿ, ಶಾಸಕರು ಆಗುತ್ತಾರೆ ಎಂದರು.
ತಾಲೂಕಿನ ರಾಂಪುರ ಗ್ರಾಮದ ಶ್ರೀ ಕುಬೇರ ಆಂಜನೇಯಸ್ವಾಮಿ ಹಾಗೂ ಶ್ರೀವಿದ್ಯಾ ಹಯಗ್ರೀವ ಸ್ವಾಮಿ ದೇವಾಲಯಕ್ಕೂ ಭೇಟಿ ನೀಡಿ ದರ್ಶನ ಪಡೆದರು. ಬಜರಂಗದಳ ಮಂಜುನಾಥ್, ಹನುಮ ಮಾಲ ಸಮಿತಿ ಸಂಚಾಲಕ ಚಂದನ್, ಹಿಂದೂ ಮುಖಂಡರಾದ ವರುಣ್, ದರಸಗುಪ್ಪೆ ಸತೀಶ್, ಮರಳಗಾಲ ರವಿ, ಕಿರಂಗೂರು ಚಂದ್ರು, ಶರತ್ ಇದ್ದರು.
ಆರ್‌ಎಸ್‌ಎಸ್ ಸ್ಮರಣೆ ಮಾಡದೆ ಮಲಗಲ್ಲ
ಆರ್‌ಎಸ್‌ಎಸ್ ಪಥಸಂಚಲನದಲ್ಲಿ ಎಲ್ಲೂ ಕೂಡ ಯಾವುದೇ ಗಲಾಟೆ, ಹಿಂಸಾಚಾರ ಆಗಿಲ್ಲ. ಹಿಂದೂಗಳ ಸಹಿಷ್ಣುತೆಯಿಂದಲೇ ಅನ್ಯ ಕೋಮಿನವರೆಲ್ಲ ಜೀವಂತವಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ಹಿಂದೂಗಳು, ಆರ್‌ಎಸ್‌ಎಸ್ ದೇಶ ಕೂಡಿಸುವ ಕೆಲಸ ಮಾಡಿದೆ. ಮತ ಬ್ಯಾಂಕ್ ಸಲುವಾಗಿ ಈ ಕಾಂಗ್ರೆಸ್ಸಿನಿಂದ ಹಿಂದೂ-ಮುಸ್ಲಿಂ ಗಲಾಟೆ ಈಗಲೂ ಜೀವಂತ. ಕಾಂಗ್ರೆಸ್ ಸರ್ಕಾರ ಇದ್ದ ಕಡೆ ಮಾತ್ರ ಹಿಂದೂ-ಮುಸ್ಲಿಂ ಗಲಾಟೆ ಯಾಕೆ? ಈ ರೀತಿ ಗುಜರಾತ್‌ನಲ್ಲಿ ಏಕಿಲ್ಲ. ಆದರೆ, ಕರ್ನಾಟಕದಲ್ಲಿ ಮಾತ್ರ ಗಲಾಟೆಯಾಗುತ್ತದೆ. ಬಾಂಗ್ಲಾ ಮತ್ತು ಕೇರಳದಲ್ಲಿ ಹಿಂದೂಗಳ ಪರಿಸ್ಥಿತಿ ಏನಿದೆ?.
ಆರ್‌ಎಸ್‌ಎಸ್ ಸ್ಮರಣೆ ಮಾಡದಿದ್ದರೆ ಪ್ರಿಯಾಂಕ್ ಖರ್ಗೆ ಮಲಗಲ್ಲ. ಈಗ ಪ್ರಿಯಾಂಕ್ ಖರ್ಗೆ ವಿರುದ್ಧ ಮಾನಹಾನಿ ಮೊಕದ್ದಮೆ ಹೂಡಲಾಗಿದೆ. ನಾಳೆಯಿಂದ ಜಾಮೀನು ಪಡೆದು ಗೃಹಮಂತ್ರಿ ಓಡಾಡಬೇಕಾಗುತ್ತದೆ. 2028ರ ಚುನಾವಣೆಗೆ ಸಿಎಂ ಅಭ್ಯರ್ಥಿಯಾಗಲೆಂದು ಪ್ರಿಯಾಂಕ್ ಖರ್ಗೆ ನಿರಂತರವಾಗಿ ಆರ್‌ಎಸ್‌ಎಸ್ ಬೈಯ್ಯುತ್ತಾರೆ. ಆಕಾಶಕ್ಕೆ ಉಗಿದು ತಮ್ಮ ಮುಖದ ಮೇಲೆ ತಾವೇ ಬೀಳಿಸಿಕೊಳ್ಳುವ ಪ್ರವೃತ್ತಿ ಅವರದ್ದು. ಪ್ರಧಾನಿ ನರೇಂದ್ರ ಮೋದಿ ಬೈಯ್ದರೆ ರಾಹುಲ್ ಗಾಂಧಿಗೆ ಅತೀವ ಸಂತೋಷ. ವಿಘ್ನ ಸಂತೋಷಿ, ರಾಹುಲ್ ಗಾಂಧಿ ಮನಸ್ಥಿತಿ ಎಂದು ಟೀಕಿಸಿದರು.
ಬಿವೈವಿ ಕೆಳಗಿಳಿಸುವ ಆಂದೋಲನ ಪ್ರಾರಂಭ
ರಾಜ್ಯದಲ್ಲಿ ಬಿಜೆಪಿ ವಿರೋಧ ಪಕ್ಷವಾಗಿ ಸಕ್ರಿಯವಾಗಿ ಕೆಲಸ ಮಾಡ್ತಿಲ್ಲ. ರೈತಾಪಿ ಜನರ ದೊಡ್ಡ ಆಂದೋಲನ ಪ್ರಾರಂಭವಾದ ಮೇಲೆ ಬಿಡದಿ ಹೋರಾಟಕ್ಕೆ ಬಿಜೆಪಿ ನಾಯಕರು ಹೋಗಿದ್ದಾರೆ. ಎಲ್ಲ ಆಂದೋಲನಗಳು ಪ್ರಾರಂಭದಲ್ಲೇ ಫಲ ಕೊಡಲ್ಲ. ಹಿಂದೆ ಯಡಿಯೂರಪ್ಪ ಅವರನ್ನು ಆಗ ಕೆಳಗಿಳಿಸುತ್ತೇವೆ ಎಂದಿದ್ದೆವು, ಇಳಿಸಿದ್ದೇವೆ. ನಾಯಕತ್ವ ಬದಲಾದ ಬಳಿಕ ಬಿಜೆಪಿ ಸೇರ್ಪಡೆಯೋ ಅಥವಾ ಹೊಸ ಪಕ್ಷವೋ ವಿಚಾರ ನೋಡೋಣ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿದರು.