ಮಂಡ್ಯ ನಗರದ ಮಹಿಳಾ ಸರ್ಕಾರಿ ಕಾಲೇಜಿ(ಸ್ವಾಯುತ್ತ)ನಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿನಿಯರನ್ನು ಸನ್ಮಾನಿಸಲಾಯಿತು.
- ನಗರದ ಮಹಿಳಾ ಸರ್ಕಾರಿ ಕಾಲೇಜಿನಲ್ಲಿ ವಾರ್ಷಿಕೋತ್ಸವ
- ಕಾಲೇಜು ಶಿಕ್ಷಣ ಇಲಾಖೆ ಸಹಯೋಗದಲ್ಲಿ ಆಯೋಜನೆ
ಮಂಡ್ಯ: ವಿದ್ಯಾರ್ಥಿಗಳು ಶ್ರದ್ಧೆಯಿಂದ ವಿದ್ಯಾಭ್ಯಾಸ ಮಾಡಬೇಕು. ಜತೆಗೆ ವೃತ್ತಿಪರ ಕೌಶಲ ಬೆಳೆಸಿಕೊಳ್ಳುವುದರಿಂದ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ಶಾಸಕ ಪಿ.ರವಿಕುಮಾರ್ ಗಣಿಗ ಸಲಹೆ ನೀಡಿದರು.
ನಗರದ ಮಹಿಳಾ ಸರ್ಕಾರಿ ಕಾಲೇಜಿ(ಸ್ವಾಯುತ್ತ)ನ ಆವರಣದಲ್ಲಿ ಕಾಲೇಜು ಶಿಕ್ಷಣ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ 2025 -26ನೇ ಶೈಕ್ಷಣಿಕ ಸಾಲಿನ ಸಾಂಸ್ಕೃತಿಕ, ಕ್ರೀಡೆ, ರಾಷ್ಟ್ರೀಯ ಸೇವಾ ಯೋಜನೆ, ಸ್ಕೌಟ್ಸ್ ಆ್ಯಂಡ್ ಗೈಡ್, ಭಾರತೀಯ ರೆಡ್‌ಕ್ರಾಸ್ ಚಟುವಟಿಕೆಗಳ ಸಮಾರೋಪ ಸಮಾರಂಭ, ಕಾಲೇಜು ವಾರ್ಷಿಕೋತ್ಸವ ಮತ್ತು ಅಂತಿಮ ಪದವಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಉತ್ತಮ ರೀತಿಯಲ್ಲಿ ಸಾಧನೆ ಮಾಡುವ ನಿಟ್ಟಿನಲ್ಲಿ ಮುಂದಿನ ವರ್ಷ ಜಿಲ್ಲೆಯಲ್ಲಿ ಐಎಎಸ್, ಕೆಎಎಸ್‌ನಂತಹ ಸ್ಪರ್ಧಾತ್ಮಕ ಪರೀಕ್ಷೆಗೆ ಉಚಿತ ತರಬೇತಿ ನೀಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ. ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶವನ್ನು ಸೃಷ್ಟಿಸುವುದು ನನ್ನ ಉದ್ದೇಶ. ಅದೇ ರೀತಿ ಕಾರ್ಖಾನೆ ತರುವುದು ನನ್ನ ಆಸೆ. ಈ ನಿಟ್ಟಿನಲ್ಲಿ ಸಾಫ್ಟ್‌ವೇರ್ ಕಂಪನಿಯನ್ನು ಒಂದು ತಿಂಗಳಲ್ಲಿ ಉದ್ಘಾಟನೆ ಮಾಡುತ್ತೇವೆ. 100ಕ್ಕೂ ಹೆಚ್ಚು ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ಕಲ್ಪಿಸುತ್ತೇವೆ. ನಮ್ಮ ಸರ್ಕಾರ ವಿದ್ಯಾರ್ಥಿಗಳಿಗೆ ಉದ್ಯೋಗ ಸೃಷ್ಟಿಸುವ ಸಲುವಾಗಿ ಬಿಡದಿ ಹತ್ತಿರ ಎಐ ಸಿಟಿ ನಿರ್ಮಾಣ ಮಾಡುತ್ತಿದೆ. ವಿದ್ಯಾರ್ಥಿಗಳು ಗ್ರಂಥಾಲಯವನ್ನು ಉಪಯೋಗ ಮಾಡಿಕೊಳ್ಳಬೇಕು. ಉತ್ತಮ ರೀತಿಯಲ್ಲಿ ಓದಿ ಉನ್ನತ ಅಧಿಕಾರಿಯಾಗಿ ಸಮಾಜಕ್ಕೆ ಉತ್ತಮ ಕೆಲಸ ಮಾಡಬೇಕು ಎಂದು ತಿಳಿಸಿದರು.
ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಜಿಲ್ಲಾ ಸಭಾಧ್ಯಕ್ಷೆ ಡಾ.ಮೀರಾ ಶಿವಲಿಂಗಯ್ಯ ಮಾತನಾಡಿ, ಶಿಕ್ಷಣ ಎಂಬುದು ದೈಹಿಕ, ಭೌತಿಕ ಶಕ್ತಿ ಜತೆಗೆ ಅಂತರಂಗದ ಸಂಸ್ಕಾರ ಬೆಳೆಸುವುದಾಗಿದೆ. ಜತೆಗೆ ಮನುಷ್ಯನ ಚರಿತ್ರೆ ಹಾಗೂ ಜೀವನದ ಮೌಲ್ಯ ಗುರಿಯನ್ನು ಸ್ಪಷ್ಟ ಪಡಿಸುವ ತರಬೇತಿ. ಸನಾತನ ಸಂಸ್ಕೃತಿಯಲ್ಲಿ ಶಿಕ್ಷಣದ ಮೂಲ ಉದ್ದೇಶ ಕೇವಲ ಜೀವನೋಪಾಯದ ಕೌಶಲ ನೀಡುವುದಲ್ಲ. ಬದಲಿಗೆ, ಮನುಷ್ಯನ ಸರ್ವತೋಮುಖ ಬೆಳವಣಿಗೆ, ನೈತಿಕ ಮೌಲ್ಯಗಳ ಅಳವಡಿಕೆ ಮತ್ತು ಅಂತಿಮವಾಗಿ ಆತ್ಮ ಸಾಕ್ಷಾತ್ಕಾರ ಸಾಧಿಸುವುದೇ ಶಿಕ್ಷಣದ ಪ್ರಮುಖ ಗುರಿಯಾಗಿದೆ ಎಂದು ತಿಳಿಸಿದರು.
ಪ್ರಾಂಶುಪಾಲ ಪ್ರೊ.ಕೆ.ಗುರುರಾಜ್‌ಪ್ರಭು, ಆದಿಚುಂಚನಗಿರಿ ಕಲಾ ಮತ್ತು ವಾಣಿಜ್ಯ ವಿಜ್ಞಾನ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಭೈರೇಗೌಡ, ಕಾಲೇಜಿನ ಸಾಂಸ್ಕೃತಿಕ ವೇದಿಕೆ ಸಂಚಾಲಕ ದಾನೇಗೌಡ, ಖಜಾಂಚಿ ಡಾ.ಗುಲೆ ಆರೀಫ, ಕ್ರೀಡಾ ಸಂಚಾಲಕ ಡಾ.ಕೆ.ಆರ್.ಲೋಕೇಶ್, ಯುವ ರೆಡ್‌ಕ್ರಾಸ್ ಘಟಕ ಸಂಚಾಲಕ ಎಸ್.ನವೀನ್, ರಾಷ್ಟ್ರೀಯ ಸೇವಾ ಯೋಜನೆ ಅಧಿಕಾರಿಗಳಾದ ಬಿ.ಎನ್.ಪುಷ್ಪಲತಾ, ಸಿ.ಅಶೋಕ್, ಸಾತ್ನಕೋತರ ವಿಭಾಗದ ಡಾ.ಕೆ.ಎನ್.ಶ್ರೀನಿವಾಸ್, ವಸಂತಲಕ್ಷ್ಮೀ, ಪತ್ರಾಂಕಿತ ವ್ಯವಸ್ಥಾಪಕ ಕೆ.ಪಿ.ರವಿಕಿರಣ್, ಎಸ್.ಪಿ.ಹೇಮಲತಾ ಇತರರಿದ್ದರು.