ಬೆಂಗಳೂರಿನಲ್ಲಿ ಎಂಎಲ್‌ಸಿ ದಿನೇಶ್ ಗೂಳಿಗೌಡ ಅವರು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿಗೆ ಮನವಿ ಸಲ್ಲಿಸಿದರು.
- ಅಂಕೇಗೌಡ ಪುಸ್ತಕದ ಮನೆಗೆ ನೆರವು
- ಪುಸ್ತಕ ಸಂರಕ್ಷಣೆಗೆ ಅನುದಾನ
- ಎಂಎಲ್ಸಿ ದಿನೇಶ್ ಗೂಳಿಗೌಡ ಮನವಿಗೆ ಸ್ಪಂದನೆ
ಮಂಡ್ಯ: ಪದ್ಮಶ್ರೀ ಪುರಸ್ಕೃತ ಅಂಕೇಗೌಡರ ಅಪರೂಪದ ಜ್ಞಾನ ಭಂಡಾರವನ್ನು ರಕ್ಷಿಸಲು ರಾಜ್ಯ ಸರ್ಕಾರ ನೆರವು ನೀಡಲು ಮುಂದಾಗಿದೆ. ಪುಸ್ತಕ ಮನೆಯಲ್ಲಿರುವ 25 ಲಕ್ಷಕ್ಕೂ ಅಧಿಕ ಪುಸ್ತಕಗಳನ್ನು ವ್ಯವಸ್ಥಿತವಾಗಿ ಜೋಡಿಸಿಡಲು ಅಗತ್ಯವಿರುವ ಪುಸ್ತಕದ ರ‌್ಯಾಕ್ ಅಳವಡಿಕೆಗೆ ಅನುದಾನ ಮಂಜೂರು ಮಾಡುವ ಕುರಿತು ಕಡತ ಮಂಡಿಸುವಂತೆ ಅಧಿಕಾರಿಗಳಿಗೆ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಸೂಚಿಸಿದ್ದಾರೆ.
ಎಂಎಲ್‌ಸಿ ದಿನೇಶ್ ಗೂಳಿಗೌಡ ಅವರು ಸಚಿವ ಶಿವರಾಜ್ ತಂಗಡಗಿ ಅವರನ್ನು ಭೇಟಿ ಮಾಡಿ ಈ ಸಂಬಂಧ ಮನವಿ ಸಲ್ಲಿಸಿದರು. ಅವರ ಮನವಿಗೆ ತಕ್ಷಣವೇ ಸ್ಪಂದಿಸಿದ ಸಚಿವರು, ಅಗತ್ಯ ಅನುದಾನ ಮಂಜೂರು ಮಾಡಲು ಕಡತ ಮಂಡಿಸುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿಗೆ ಸೂಚನೆ ನೀಡಿದ್ದಾರೆ.
ಪಾಂಡವಪುರ ತಾಲೂಕಿನ ಹರಳಹಳ್ಳಿಯ ಅಂಕೇಗೌಡರು ಕಳೆದ 40 ವರ್ಷಗಳಿಂದ 25 ಲಕ್ಷಕ್ಕೂ ಹೆಚ್ಚು ಪುಸ್ತಕಗಳನ್ನು ಸಂಗ್ರಹಿಸಿದ್ದಾರೆ. ಆದರೆ, ಪ್ರಸ್ತುತ ಈ ಪುಸ್ತಕಗಳನ್ನು ಜೋಡಿಸಿಡಲು ಸ್ಥಳಾವಕಾಶದ ಕೊರತೆ ಇರುವುದರಿಂದ ಪುಸ್ತಕಗಳನ್ನು ಒಂದರ ಮೇಲೊಂದು ರಾಶಿ ಹಾಕಲಾಗಿದೆ. ಇದರಿಂದ ಮೌಲ್ಯಯುತ ಪುಸ್ತಕಗಳು ಹಾಳಾಗುವ ಆತಂಕವಿದ್ದು, ಅವುಗಳನ್ನು ಸಂರಕ್ಷಿಸಲು ಸುಸಜ್ಜಿತ ಸ್ಟೀಲ್ ರ್ಯಾಕ್‌ಗಳನ್ನು ಅಳವಡಿಸಲು ಇಲಾಖೆಯಿಂದ ವಿಶೇಷ ಅನುದಾನ ನೀಡಬೇಕೆಂದು ಎಂಎಲ್‌ಸಿ ಕೋರಿದ್ದರು.
ಎಚ್.ಕೆ.ಪಾಟೀಲ್‌ಗೆ ಮನವಿ: ಇದೇ ಸಂದರ್ಭದಲ್ಲಿ ದಿನೇಶ್ ಗೂಳಿಗೌಡ ಅವರು ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್ ಅವರನ್ನು ಭೇಟಿ ಮಾಡಿ, ಅಂಕೇಗೌಡರ ಪುಸ್ತಕ ಮನೆಯನ್ನು ಅಧಿಕೃತವಾಗಿ ’ಗ್ರಾಮೀಣ ಸಾಂಸ್ಕೃತಿಕ ಪ್ರವಾಸಿ ತಾಣ’ ಎಂದು ಘೋಷಿಸಲು ಮನವಿ ಮಾಡಿದರು. ರಾಹುಲ್ ಗಾಂಧಿ ಸೇರಿದಂತೆ ಅನೇಕ ಗಣ್ಯರು ಭೇಟಿ ನೀಡಿರುವ ಈ ಸ್ಥಳದಲ್ಲಿ ಸುಸಜ್ಜಿತ ವಸ್ತು ಸಂಗ್ರಹಾಲಯ ನಿರ್ಮಾಣ, ಪುಸ್ತಕಗಳ ಡಿಜಿಟಲೀಕರಣ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ವಿಶೇಷ ಅನುದಾನ ನೀಡುವಂತೆ ಅವರು ಕೋರಿದರು. ಈ ಮನವಿಯನ್ನು ಪುರಸ್ಕರಿಸಿದ ಸಚಿವ ಎಚ್.ಕೆ. ಪಾಟೀಲ್ ಅವರು, ಶೀಘ್ರದಲ್ಲೇ ಸ್ಥಳಕ್ಕೆ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
ಸಿಎಂ, ಡಿಸಿಎಂಗೂ ಮನವಿ ಸಲ್ಲಿಕೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ಎಂಎಲ್‌ಸಿ ದಿನೇಶ್ ಗೂಳಿಗೌಡ ಅವರು, ಮುಂಬರುವ ರಾಜ್ಯ ಆಯವ್ಯಯದಲ್ಲಿ ಅಂಕೇಗೌಡರ ಪುಸ್ತಕ ಭಂಡಾರಕ್ಕೆ ಶಾಶ್ವತ ಪರಿಹಾರ ಘೋಷಿಸುವಂತೆ ಕೋರಿದ್ದಾರೆ. ಪಾಂಡವಪುರ ತಾಲೂಕಿನ ಹರಳಹಳ್ಳಿಯಲ್ಲಿ 5 ಎಕರೆ ಜಮೀನು ಮಂಜೂರು ಮಾಡುವುದು ಹಾಗೂ ಸುಸಜ್ಜಿತ ಗ್ರಂಥಾಲಯ ಸಂಕೀರ್ಣ ನಿರ್ಮಿಸಲು 5 ಕೋಟಿ ರೂ. ಅನುದಾನವನ್ನು ಬಜೆಟ್‌ನಲ್ಲಿ ಮೀಸಲಿಡುವಂತೆ ಅವರು ಪ್ರಮುಖವಾಗಿ ವಿನಂತಿಸಿದ್ದಾರೆ.
ಅಂತೆಯೇ ಉಪ ಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರಿಗೂ ಶಾಸಕರು ಮನವಿ ಸಲ್ಲಿಸಿದ್ದು, ಮಂಡ್ಯ ಜಿಲ್ಲೆಯ ಸಾಂಸ್ಕೃತಿಕ ಪರಂಪರೆಯ ರಕ್ಷಣೆಯ ಭಾಗವಾಗಿ ಕಾವೇರಿ ನೀರಾವರಿ ನಿಗಮದ ವತಿಯಿಂದ ಪುಸ್ತಕ ಮನೆಗೆ ನೂತನ ಕಟ್ಟಡ ನಿರ್ಮಿಸಿಕೊಡುವಂತೆ ಕೇಳಿಕೊಂಡಿದ್ದಾರೆ. ಜ್ಞಾನ ಭಂಡಾರದ ಡಿಜಿಟಲೀಕರಣ ಹಾಗೂ ಮೂಲಸೌಕರ್ಯ ಒದಗಿಸಲು ಸರ್ಕಾರ ಮುತುವರ್ಜಿ ವಹಿಸಬೇಕೆಂದು ಅವರು ಪತ್ರದಲ್ಲಿ ಮನವಿ ಮಾಡಿದ್ದಾರೆ.
ಈ ಪುಸ್ತಕ ಭಂಡಾರವನ್ನು ಉಳಿಸಿ ಬೆಳೆಸಲು, ಪಾಂಡವಪುರ ತಾಲೂಕಿನ ಹರಳಹಳ್ಳಿ ಗ್ರಾಮದಲ್ಲಿಯೇ (ಅವರ ಊರಿನಲ್ಲಿ) ಕಂದಾಯ ಇಲಾಖೆಯಿಂದ 5 ಎಕರೆ ಸರ್ಕಾರಿ ಜಮೀನು ಅಥವಾ ಸೂಕ್ತವಾದ ಸಿ.ಎ ನಿವೇಶನವನ್ನು ಮಂಜೂರು ಮಾಡುವುದಾಗಿ ಬಜೆಟ್‌ನಲ್ಲಿ ಘೋಷಿಸಬೇಕು. ಮಂಜೂರಾದ ಜಾಗದಲ್ಲಿ ಸುಸಜ್ಜಿತ ಗ್ರಂಥಾಲಯ, ಓದುಗರ ಕೊಠಡಿ ಮತ್ತು ವಸ್ತು ಸಂಗ್ರಹಾಲಯವನ್ನು ನಿರ್ಮಿಸಲು 5 ಕೋಟಿ ರೂ.ಗಳ ವಿಶೇಷ ಅನುದಾನವನ್ನು ಈ ಆಯವ್ಯಯದಲ್ಲಿ ಮೀಸಲಿಡಬೇಕು. ಅಲ್ಲಿರುವ ಲಕ್ಷಾಂತರ ಪುಸ್ತಕಗಳನ್ನು ಮುಂದಿನ ಪೀಳಿಗೆಗೆ ಉಳಿಸಲು ’ಡಿಜಿಟಲೀಕರಣ’ ವ್ಯವಸ್ಥೆಗೆ ನೆರವು ನೀಡಬೇಕೆಂದು ಒತ್ತಾಯಿಸಿದ್ದಾರೆ.