ಪಾಂಡವಪುರ ತಾಲೂಕಿನ ಹರಳಹಳ್ಳಿಯಲ್ಲಿರುವ ಪುಸ್ತಕ ಮನೆಗೆ ಮಾಜಿ ಡಿಸಿಎಂ ಅಶ್ವತ್ಥ ನಾರಾಯಣಗೌಡ ಭೇಟಿ ನೀಡಿ ಪುಸ್ತಕ ಸಂಗ್ರಹ ವೀಕ್ಷಿಸಿದರು.
ಪಾಂಡವಪುರ: ಕೇಂದ್ರ ಸರ್ಕಾರ ಕೊಡ ಮಾಡುವ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿರುವ ಅಂಕೇಗೌಡ ಅವರ ಪುಸ್ತಕ ಮನೆಗೆ ಭೇಟಿ ನೀಡಿದ ಮಾಜಿ ಡಿಸಿಎಂ ಅಶ್ವತ್ಥನಾರಾಯಣಗೌಡ ಅವರು ಅಲ್ಲಿನ ಪುಸ್ತಕ ಸಂಗ್ರಹ ಕಂಡು ಬೆರಗಾದರು.
ತಾಲೂಕಿನ ಹರಳಹಳ್ಳಿ ಗ್ರಾಮದಲ್ಲಿರುವ ಪುಸ್ತಕ ಮನೆಗೆ ಸೋಮವಾರ ಭೇಟಿ ನೀಡಿದ ಅಶ್ವತ್ಥ ನಾರಾಯಣಗೌಡ, ದೇಶ, ವಿದೇಶಗಳ ನೂರಾರು ಸಾಹಿತಿಗಳು, ಕವಿಗಳಿಂದ ರಚಿತವಾಗಿರುವ ಪುಸ್ತಕ ಸಂಗ್ರಹ, ಐಎಎಸ್, ಐಪಿಎಸ್ ತರಬೇತಿಗೆ ಅಗತ್ಯವಾಗಿರುವ ಪುಸ್ತಕ, ದೇಶದ ಮಹನೀಯರ ಆತ್ಮಚರಿತ್ರೆ, 200 ವರ್ಷಗಳ ಪುರಾತನ ಪುಸ್ತಕಗಳು, ಹಳೆಯ ನಾಣ್ಯಗಳು ಸೇರಿದಂತೆ ಅಂಕೇಗೌಡ ಅವರು ಸಂಗ್ರಹಿಸಿರುವ ವೈವಿಧ್ಯ ಪುಸ್ತಕಗಳನ್ನು ವೀಕ್ಷಣೆ ಮಾಡಿದ ಬಳಿಕ, ಅಂಕೇಗೌಡ ಅವರನ್ನು ಸನ್ಮಾನಿಸಿದರು.
50 ವರ್ಷಗಳ ಸತತ ಪ್ರಯತ್ನದಿಂದ ಅಂಕೇಗೌಡ ಅವರು ಜ್ಞಾನದ ಶಕ್ತಿ ಏನು ಎಂಬುದನ್ನು ಅರ್ಥ ಮಾಡಿಕೊಂಡು ಅದನ್ನು ಜಗತ್ತಿಗೆ ತೋರಿಸಿದ್ದಾರೆ. ಎಲ್ಲರೂ ಹಣ, ಅಂತಸ್ತು, ಜಮೀನು, ಒಡವೆ ಸಂಪಾದನೆಗೆ ಪ್ರಾಮುಖ್ಯತೆ ಕೊಡುತ್ತಾರೆ. ಆದರೆ ಅಂಕೇಗೌಡರು ಪುಸ್ತಕ ಸಂಗ್ರಹ ಮಾಡುವ ಮೂಲಕ ಜ್ಞಾನಕ್ಕೆ ಒತ್ತು ಕೊಟ್ಟಿದ್ದಾರೆ. ಸ್ಪಷ್ಟ ಗುರಿ ಮತ್ತು ಸಂದೇಶ ಇಟ್ಟುಕೊಂಡು ಸಮಾಜಮುಖಿಗಳಾಗಿ ಸತ್ಕಾರ್ಯದ ಕೆಲಸ ಮಾಡಿದ್ದಾರೆ. ಅವರ ಈ ಸಾಧನೆಯಿಂದ ಪಾಂಡವಪುರ ಹೆಸರುವಾಸಿಯಗಿದೆ. ನಳಂದ ಮತ್ತು ತಕ್ಷಶಿಲೆ ರೀತಿಯಲ್ಲಿ ಈ ಗ್ರಂಥಾಲಯ ಬೆಳೆಯಬೇಕು ಎಂಬುದು ಅಂಕೇಗೌಡ ಅವರ ಇಚ್ಛೆಯಾಗಿದೆ ಎಂದರು.
ಅಂಕೇಗೌಡರ ಪುಸ್ತಕ ಸಂಗ್ರಹ ಗಮನಿಸಿದ್ದ ಹಿಂದಿನ ಮುಖ್ಯಮಂತ್ರಿ ಸದಾನಂದಗೌಡ ಅವರು 2012ರಲ್ಲಿ ಬಜೆಟ್‌ನಲ್ಲಿ 50 ಲಕ್ಷ ರೂ. ಘೋಷಿಸಿದ್ದರು. ಅದೇ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕೂಡ ಸಹಾಯಹಸ್ತ ಚಾಚಿದ್ದಾರೆ. 2005ರಲ್ಲಿ ಉದ್ಯಮಿ ಹರಿಖೋಡೆ ಗ್ರಂಥಾಲಯಕ್ಕೆ ಅಗತ್ಯವಿದ್ದ ಕಟ್ಟಡ ನಿರ್ಮಿಸಿಕೊಟ್ಟಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಇವರ ಸಾಧನೆ ಗಮನಿಸಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಇವರು ಪ್ರಶಸ್ತಿಗಾಗಿ ಅರ್ಜಿ ಹಾಕಿರಲಿಲ್ಲ. ಆದರೆ ಇವರ ಸತ್ಕಾರ್ಯಕ್ಕಾಗಿ ಪ್ರಶಸ್ತಿ ಸಿಕ್ಕಿದೆ. ವ್ಯಕ್ತಿ ಸಂಸ್ಥೆಯಾಗಿ ಬೆಳೆದಿದ್ದಾರೆ. ಹಣ ಬಲ, ತೋಳ್ಬಲ ಮುಖ್ಯವಲ್ಲ. ಗುರಿ, ಶ್ರಮ ಇರಬೇಕು ಎಂಬ ಸಂದೇಶ ಕೊಟ್ಟಿದ್ದಾರೆ. ಇವರ ಕಲ್ಪನೆಗೆ ಅನುಗುಣವಾಗಿ ಮುಂದಿನ ದಿನಗಳಲ್ಲಿ ಸಹಕಾರ ನೀಡುವುದಾಗಿ ತಿಳಿಸಿದರು.
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಅಂಕೇಗೌಡ ಮಾತನಾಡಿ, ಶ್ರೀಮಂತರ ಮಕ್ಕಳಿಗೆ ಉನ್ನತ ಶಿಕ್ಷಣ ಸುಲಭವಾಗಿ ಲಭ್ಯವಾಗುತ್ತದೆ. ಬಡವರ ಮಕ್ಕಳಿಗೆ ಕಷ್ಟ. ಬಡ ವಿದ್ಯಾರ್ಥಿಗಳಿಗಾಗಿ ಈ ಗ್ರಂಥಾಲಯ ಇದೆ. ಸತತ 50 ವರ್ಷಗಳು ಕಷ್ಟಪಟ್ಟು ಪುಸ್ತಕ ಭಂಡಾರ ಸಂಗ್ರಹಿಸಿದ್ದೇನೆ. ಇದನ್ನು ಉಳಿಸಲು ಎಲ್ಲರೂ ಸಹಕಾರ ನೀಡಬೇಕು ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್.ಇಂದ್ರೇಶ್, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಮಂಗಳಾ ನವೀನ್‌ಕುಮಾರ್, ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಉಮೇಶ್, ಕ್ಷೇತ್ರಾಧ್ಯಕ್ಷ ನೀಲನಹಳ್ಳಿ ಧನಂಜಯ, ಶ್ರೀರಂಗಪಟ್ಟಣ ಟಿ.ಶ್ರೀಧರ್, ರೈತ ಮೋರ್ಚಾ ಮಾಜಿ ಜಿಲ್ಲಾಧ್ಯಕ್ಷ ಎಚ್.ಎನ್.ಮಂಜುನಾಥ್ ಇತರರು ಇದ್ದರು.