ಮೇಲುಕೋಟೆಯಲ್ಲಿ ಶ್ರೀದೇವಿ-ಭೂದೇವಿಗೆ ಶುಕ್ರವಾರ ರಾತ್ರಿ ಅಂಗಮಣಿ ಉತ್ಸವ ಸಹಸ್ರಾರು ಭಕ್ತರ ಸಮಮ್ಮುಖದಲ್ಲಿ ನೆರವೇರಿತು.  
ಮಂಡ್ಯ

ಮೇಲುಕೋಟೆಯಲ್ಲಿ ಅಂಗಮಣಿ ಉತ್ಸವ

ಪ್ರಮುಖ ಮುಖ್ಯಾಂಶಗಳು

  • ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಅಶ್ವ ವಾಹನೋತ್ಸವ
ಮೇಲುಕೋಟೆ: ಶ್ರೀ ಚೆಲುವನಾರಾಯಣಸ್ವಾಮಿ ದೇವಾಲಯದಲ್ಲಿ ತವರು ಮನೆ ಉತ್ಸವವೆಂದೇ ಪ್ರಖ್ಯಾತವಾದ ಅಂಗಮಣಿ ಉತ್ಸವ ಶುಕ್ರವಾರ ರಾತ್ರಿ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವೈಭವದಿಂದ ನೆರವೇರಿತು.
ಮೇಲುಕೋಟೆ ದೇವಾಲಯದ ಪ್ರಮುಖ ಉತ್ಸವಗಳಲ್ಲೊಂದಾದ ಶ್ರೀದೇವಿ-ಭೂದೇವಿಯರ ಅಂಗಮಣಿ ಉತ್ಸವ ರಾತ್ರಿ 8.30ಕ್ಕೆ ಆರಂಭವಾಯಿತು. ನಡೆಮುಡಿಯೊಂದಿಗೆ ಸಾಗಿದ ದೇವಿಯರ ಉತ್ಸವ ಅಂಗಮಣಿ ಮಂಟಪ
ತಲುಪಿದ ವೇಳೆ ಕರಗಂ ಗುರುಪೀಠದ ವತಿಯಿಂದ ಸ್ಥಾನಾಚಾರ್ಯ ಕೃಷ್ಣಯ್ಯಂಗಾರ್ ದೇವಿಕಾ ದಂಪತಿಗಳು ಮತ್ತು ಸಜ್ಜೆಹಟ್ಟಿ ಗುರುಪೀಠದ ಪರವಾಗಿ ಸ್ಥಾನಾಚಾರ್ಯ ತಿರುನಾರಾಯಣ ಅಯ್ಯಂಗಾರ್ ಮಾರ್ಗದರ್ಶನದಲ್ಲಿ ನರಸಿಂಹರಂಗನ್ ದಂಪತಿಗೆ ದೇವಿಯರಿಗೆ ಅನೂಚಾನ ಸಂಪ್ರದಾಯದಂತೆ ಮಡಿಲು ತುಂಬುವ ಕೈಂಕರ್ಯ ನೆರವೇರಿತು.
ತವರು ಮನೆಗೆ ಹೋಗಿ ತಡವಾಗಿ ದೇವಾಲಯಕ್ಕೆ ಬಂದ ಶ್ರೀದೇವಿ-ಭೂದೇವಿಯರೊಂದಿಗೆ ಮುನಿಸಿಕೊಂಡ ಚೆಲುವನಾರಾಯಣಸ್ವಾಮಿ ಧೀರ ನಡಿಗೆಯೊಂದಿಗೆ ಆಗಮಿಸುವ ವಿಶಿಷ್ಟ ನಡಿಗೆಯ ಉತ್ಸವ ದರ್ಶನ ಮಾಡಿದ, ಭಕ್ತರು ಪುಳಕಿತರಾಗಿ ಗೋವಿಂದ ಗೋವಿಂದ ಎಂದು ಮೊಳಗಿಸಿದ ಜಯಘೋಷ ಮುಗಿಲು ಮುಟ್ಟಿತ್ತು. ನಂತರ ಸ್ವಾಮಿ ಅಶ್ವವಾಹನೋತ್ಸವದಲ್ಲಿ ಸಾಗುವ ವಿಶೇಷ ಕ್ಷಣಗಳನ್ನು ಸಹಸ್ರಾರು ಭಕ್ತರು ಕಣ್ತುಂಬಿಕೊಂಡರು. ತಡರಾತ್ರಿ 12 ಗಂಟೆಗೆ ನಡೆದ ಈ ವೈಶಿಷ್ಟೃ ಪೂರ್ಣಕ್ಷಣಗಳಿಗಾಗಿ ಕಾಯು ್ದಕುಳಿತಿದ್ದ ಸಹಸ್ರಾರು ಸಂಖ್ಯೆಯ ಭಕ್ತರು ಅಶ್ವವಾಹನೋತ್ಸವನ್ನು ಹಿಂಬಾಲಿಸಿ ಮೊಲ ಅಡ್ಡಬಿಡುವ ಕ್ಷಣಗಳಿಗೂ ಸಾಕ್ಷಿಯಾದರು. ದೇವಿಯರೊಂದಿಗೆ ಮುನಿಸಿಕೊಂಡು ಹೊರಟ ಚೆಲುವರಾಯನಿಗೆ ಮೂರು ಮೊಲ ಅಡ್ಡಬಂದಾಗ ಸ್ವಾಮಿ ಮರಳಿ ದೇವಾಲಯಕ್ಕೆ ಹಿಂದಿರುಗಿದರು ಎಂಬ ಪ್ರತೀತಿಯು ಅಂಗಮಣಿಯ ಉತ್ಸವದಲ್ಲಿ ಪ್ರಮುಖ ಘಟ್ಟವಾಗಿದೆ. ನಂತರ ಚೆಲುವನಾರಾಯಣಸ್ವಾಮಿಯ ಉತ್ಸವ ದೇವಾಲಯಕ್ಕೆ ಹಿಂತಿರುಗಿತು. ದೇವಿಯರಿಗೆ ಅರ್ಪಿಸಿದ ಹಣ್ಣು ತರಕಾರಿಗಳಿಂದ ಶನಿವಾರ ಪಾಯಸ ರಸಾಯನ ಮೊಸರನ್ನ ಮಾಡಿ ಸಹಸ್ರಾರು ಭಕ್ತರಿಗೆ ವಿತರಿಸಲಾಯಿತು.
ಸಂಕ್ರಾಂತಿ ಮತ್ತು ಅಂಗಮಣಿ ಉತ್ಸವ ಪ್ರಯುಕ್ತ ದೇವಾಲಯದ ರಾಜಗೋಪುರಕ್ಕೆ ಅಂಗಮಣಿಮಂಟಪಕ್ಕೆ ದೀಪಾಲಂಕಾರ ಮಾಡಲಾಗಿತ್ತು. ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಶೀಲಾ ಮಾರ್ಗದರ್ಶನದಲ್ಲಿ ಪಾರುಪತ್ತೇಗಾರ ಸ್ಥಾನಾಚಾರ್ಯ ಶ್ರೀನಿವಾಸನರಸಿಂಹನ್ ಗುರೂಜಿ ಉತ್ಸವ ನಡೆಸಿದರೆ, ಮೇಲುಕೋಟೆ ಇನ್‌ಸ್ಪೆೆಕ್ಟರ್ ಪ್ರಮೋದ್ ನೇತೃತ್ವದಲ್ಲಿ ಪೊಲೀಸ್ ಭದ್ರತೆ ನಿಯೋಜಿಸಲಾಗಿತ್ತು.
ಶಾಸಕರು ಹಾಗೂ ಜಿಲ್ಲಾಧಿಕಾರಿಗಳು, ಹಲವು ಭಾರಿ ಎಚ್ಚರಿಸಿದರೂ ಉತ್ಸವಬೀದಿಗಳ ಎರಡೂ ಬದಿಯಲ್ಲಿ ಭಕ್ತರು ವಾಹನಗಳನ್ನು ನಿಲುಗಡೆ ಮಾಡಿ ಅವ್ಯವಸ್ಥೆಗೆ ಕಾರಣವಾದ ಘಟನೆ ಅಂಗಮಣಿ ಉತ್ಸವದ ವೇಳೆಯೂ ಮರುಕಳಿಸಿತು. ಶನಿವಾರ, ಭಾನುವಾರಗಳಂದು ವಿಶೇಷ ಉತ್ಸವ ಇರುವುದರಿಂದ ಪಾರ್ಕಿಂಗ್ ಅವವ್ಯಸ್ಥೆ ಮುಂದುವರೆದರೂ ಸಂಬಂದಿಸಿದ ಅಧಿಕಾರಿಗಳ ನಿರ್ಲಕ್ಷ್ಯ ಮುಂದುವರೆಯುತ್ತಲೇ ಇದೆ. ಮುಂಬರುವ ರಥಸಪ್ತಮಿ ಹಾಗೂ ರಾಮಾನುಜರ ಪುನರ್ವಸು ಉತ್ಸವದಲ್ಲಾದರೂ ಅಧಿಕಾರಿಗಳು ಉತ್ಸವ ಸುಗಮವಾಗಿ ನಡೆಯಲು ಹಾಗೂ ವಾಹನ ದಟ್ಟಣೆ ಉಂಟಾಗದಂತೆ ಎಚ್ಚರ ವಹಿಸಲಿ ಎಂದು ನಾಗರಿಕರು ಒತ್ತಾಯಿಸಿದರು.