ನಾಗಮಂಗಲ ತಾಲೂಕಿನ ಪಿ.ನೇರಲಕೆರೆ ಗ್ರಾಮದ ಶ್ರೀೀರಲಕೆರಮ್ಮದೇವಿ (ತೋಪಿನಮ್ಮ) ದೇವಸ್ಥಾನದ 48ನೇ ಮಂಡಲ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರನ್ನು ಗ್ರಾಮಸ್ಥರು ಅಭಿನಂದಿಸಿದರು. ಸುರೇಶ್‌ಗೌಡ, ಎಚ್.ಟಿ.ಮಂಜು, ನೆಲ್ಲಿಗೆರೆ ಬಾಲು, ಟಿ.ಕೃಷ್ಣಪ್ಪ ಇದ್ದರು 
ಮಂಡ್ಯ

ರಾಜ್ಯದ ಅಭಿವೃದ್ಧಿಗೆ ಅವಕಾಶ ನೀಡಿ

ಲೋಕೇಶ್ ಮನು. ಡಿ
ನಾಗಮಂಗಲ: ಕರ್ನಾಟಕ ಸಂಪದ್ಬರಿತ ರಾಜ್ಯವಾಗಿದ್ದು, ರಾಜ್ಯದ ಸಂಪತ್ತನ್ನು ಜನರಿಗೆ ತಲುಪಿಸಿ ಒಳ್ಳೆಯ ಕಾರ್ಯಕ್ರಮಗಳನ್ನು ರೂಪಿಸಲು ಒಂದು ಅವಕಾಶ ಕೊಟ್ಟು ನೋಡಿ ಎಂದು ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವ ಎಚ್.ಡಿ.ಕುಮಾರಸ್ವಾಮಿ ಮನವಿ ಮಾಡಿದರು.
ತಾಲೂಕಿನ ಪಿ.ನೇರಲಕೆರೆ ಗ್ರಾಮದ ಶ್ರೀ ನೇರಲಕೆರಮ್ಮದೇವಿ (ತೋಪಿನಮ್ಮ) ದೇವಸ್ಥಾನದ 48ನೇ ಮಂಡಲ ಪೂಜಾ ಕಾರ್ಯಕ್ರಮದಲ್ಲಿ ಮಂಗಳವಾರ ಮಾತನಾಡಿ, ನನ್ನ ಅವಧಿಯ ಆಡಳಿತಕ್ಕೂ ಈಗಿನ ಆಡಳಿತಕ್ಕೂ ಬಹಳಷ್ಟು ವ್ಯತ್ಯಾಸವಿದೆ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರದ ಆಡಳಿತವನ್ನು ಜರಿದರು.
ಈ ಹಿಂದೆ ಜಿಲ್ಲೆಯ ಇನ್ನೂರಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಾಗ ಎಲ್ಲ ಕುಟುಂಬದವರ ನಿವಾಸಕ್ಕೂ ಭೇಟಿ ಕೊಟ್ಟು ಸಾಂತ್ವನ ಹೇಳಿ ವೈಯುಕ್ತಿಕವಾಗಿ ಕೈಲಾದಷ್ಟು ಸಹಾಯ ಮಾಡಿದ್ದೇನೆ. ನಾನು ಅಧಿಕಾರಕ್ಕೆ ಬಂದರೆ ರೈತರ ಸಾಲ ಮನ್ನಾ ಮಾಡಬೇಕೆಂದು ಅಂದೇ ನಿರ್ಧರಿಸಿದ್ದೆ. ಜಿಲ್ಲೆಯ ಜನರು ಏಳು ಕ್ಷೇತ್ರದಲ್ಲಿಯೂ ಜೆಡಿಎಸ್ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಟ್ಟಿದ್ದರು. 38 ಸ್ಥಾನಗಳಿದ್ದರೂ ಕೂಡ ದೇವರ ಅನುಗ್ರಹದಿಂದ ಮುಖ್ಯಮಂತ್ರಿಯಾಗಿ ರೈತರ 25 ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡಿ ರೈತರನ್ನು ಉಳಿಸಿಕೊಟ್ಟೆ. ಇದು ನಾನು ಮಾಡಿದ ಕೆಲಸ ಎಂದರು.
5 ವರ್ಷದ ಸರ್ಕಾರಕ್ಕೆ ಹಳೇ ಮೈಸೂರು ಭಾಗದ ಜನರು ಆಶೀರ್ವದಿಸುತ್ತಾರೆ. ಉತ್ತರ ಕರ್ನಾಟಕ ಭಾಗದ ಜನರು ಸಾಲ ಮನ್ನಾ ಯೋಜನೆಯನ್ನು ದೊಡ್ಡ ಮಟ್ಟದಲ್ಲಿ ಅನುಕೂಲ ಪಡೆದುಕೊಂಡರೂ ಕೂಡ ನಮ್ಮ ಬಗ್ಗೆ ಮಮತೆ ಬಂದಿಲ್ಲ. ಆ ಭಾಗದಲ್ಲಿ ನಾನು ಪ್ರವಾಸ ಕೈಗೊಂಡಾಗ ನಿಮ್ಮಿಂದ ನಮಗೆ ಬಹಳಷ್ಟು ಅನುಕೂಲವಾಯಿತು ಎನ್ನುತ್ತಾರೆ. ಆದರೆ ಮತ ಹಾಕುವಾಗ ಈ ಕುಮಾರಣ್ಣ ನೆನಪಿಗೆ ಬರುವುದಿಲ್ಲ. ನೀವೆಲ್ಲರೂ ನನ್ನನ್ನು ಉಳಿಸಿದ್ದೀರಿ ನಿಮ್ಮೆಲ್ಲರ ಋಣ ತೀರಿಸುತ್ತೇನೆ ಎಂದು ಹೇಳಿದರು.
ರಾಜ್ಯ ಸರ್ಕಾರ ಬದಲಾವಣೆ ಆಗುತ್ತಿದ್ದಂತೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಮನೆಯಲ್ಲಿ ಸೂತಕದ ಛಾಯೆ ಕಾಣಿಸುತ್ತಿದೆ ಎನ್ನುವವರನ್ನು ನಾವು ಬೆಳೆಸಿದ್ದರಿಂದ ಅವರು ಈಗ ದೊಡ್ಡ ಮಟ್ಟದಲ್ಲಿ ಬೆಳೆದಿದ್ದಾರೆ. ಎಂತಹ ರಾಜಕಾರಣಿಗಳಿದ್ದಾರೆ ಎಂದು ನೀವೇ ಯೋಚಿಸಿ. ದೇವೇಗೌಡರ ಸಾವನ್ನು ಬಯಸಿದ್ದಾರೋ ಅಥವಾ ಅವರ ಕುಟುಂಬ ನಾಶವಾಗಬೇಕೆಂದು ಬಯಸಿದ್ದಾರೋ ಅವರ ಬಗ್ಗೆ ನಾನು ಚರ್ಚೆ ಮಾಡಬಾರದು. ಈ ರೀತಿಯ ಭಾವನೆ ಇರುವವರ ಬಗ್ಗೆ ನೀವು ತೀರ್ಮಾನಿಸಿ. ಇಂತಹ ವ್ಯಕ್ತಿಗಳ ಬಗ್ಗೆ ನಾನು ಹೆಚ್ಚು ಹೇಳುವುದಿಲ್ಲ ಎಂದು ಪರೋಕ್ಷವಾಗಿ ಮಾಜಿ ಸಚಿವ ಎನ್.ಚಲುವರಾಯಸ್ವಾಮಿ ವಿರುದ್ಧ ಕಿಡಿಕಾರಿದರು.
ಈ ಸಂದರ್ಭ ಮಾಜಿ ಶಾಸಕ ಸುರೇಶ್‌ಗೌಡ, ಕೆ.ಆರ್.ಪೇಟೆ ಶಾಸಕ ಎಚ್.ಟಿ.ಮಂಜು, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ನೆಲ್ಲಿಗೆರೆ ಬಾಲು, ಪಡಿತರ ವಿತಕರ ಸಂಘದ ರಾಜ್ಯಾಧ್ಯಕ್ಷ ಟಿ.ಕೃಷ್ಣಪ್ಪ, ಸಮಾಜ ಸೇವಕ ಜವರನಹಳ್ಳಿ ಗೌರೀಶ್, ತಾಲೂಕು ಜೆಡಿಎಸ್ ಅಧ್ಯಕ್ಷ ಎಂ.ಸಿ.ಚನ್ನಪ್ಪ, ಜಿಪಂ ಮಾಜಿ ಸದಸ್ಯ ಚಂದ್ರೇಗೌಡ, ಮುಖಂಡರಾದ ಶಂಕರಲಿಂಗೇಗೌಡ, ಹಡೇನಹಳ್ಳಿ ಉಮೇಶ್, ಗಿರೀಶ್ ಅಧಿಪತಿ ಇತರರು ಇದ್ದರು.