ಕಿಕ್ಕೇರಿ ಗ್ರಾಪಂ ವಾಣಿಜ್ಯ ಮಳಿಗೆ ಹರಾಜು, ಬಾಡಿಗೆಯಲ್ಲಿ ಅವ್ಯವಹಾರವಾಗಿದ್ದು ತನಿಖೆ ಮಾಡುವಂತೆ ಸಾರ್ವಜನಿಕರು ಸೋಮವಾರ ಗ್ರಾಪಂ ಕಛೇರಿ ಮುಂದೆ ತಾಪಂ. ಇಒ ಸುಷ್ಮಾ ಮುಂದೆ ಪ್ರತಿಭಟನೆ ನಡೆಸಿ ಸಮಸ್ಯೆಗಳನ್ನು ಅಲವತ್ತುಕೊಂಡರು. ಶೇಖರ್, ಮಧು, ಪುಟ್ಟೇಗೌಡ, ಜಯರಾಂ ಮತ್ತಿತರರಿದ್ದರು.  
ಮಂಡ್ಯ

ಕಿಕ್ಕೇರಿ ಗ್ರಾಪಂ ಕಚೇರಿಯಲ್ಲಿ ಅವ್ಯವಹಾರ ಆರೋಪ

ಪ್ರಮುಖ ಮುಖ್ಯಾಂಶಗಳು

  • ಪಂಚಾಯಿತಿ ಮುಂದೆ ಗ್ರಾಮಸ್ಥರಿಂದ ಧರಣಿ
  • ಸೂಕ್ತ ಕ್ರಮದ ಭರವಸೆ ನೀಡಿದ ತಾಪಂ ಇಒ ಸುಷ್ಮಾ

ಕಿಕ್ಕೇರಿ:

ಗ್ರಾಪಂ ವ್ಯಾಪ್ತಿಯ ವಾಣಿಜ್ಯ ಮಳಿಗೆಯ ಬಾಡಿಗೆ ಹಾಗೂ ಹರಾಜು ಪ್ರಕ್ರಿಯೆಯಲ್ಲಿ ಬಾರಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ಇಲ್ಲಿನ ಗ್ರಾಪಂ ಕಚೇರಿ ಮುಂಭಾಗ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ತಾಪಂ ಇಒ ಸುಷ್ಮಾ ಅವರು ಸೋಮವಾರ ಗ್ರಾಪಂಗೆ ಭೇಟಿ ಕೊಟ್ಟಿದ್ದ ಹಿನ್ನೆಲೆಯಲ್ಲಿ ಕಚೇರಿ ಮುಂದೆ ಜಮಾಯಿಸಿದ ಸಾರ್ವಜನಿಕರು ಗ್ರಾಪಂ ಸಿಬ್ಬಂದಿ ವಿರುದ್ಧ ಘೋಷಣೆ ಕೂಗಿದರು.
ಗ್ರಾಪಂ ಕಚೇರಿ ಮುಂದೆ ಇರುವ ವಾಣಿಜ್ಯ ಮಳಿಗೆಯನ್ನು ಖಾಸಗಿ ವ್ಯಕ್ತಿಗೆ ಮಾಸಿಕವಾಗಿ 73 ಸಾವಿರ ರೂ.ಗೆ 2024ರಲ್ಲಿ ಹರಾಜು ಮೂಲಕ ಬಾಡಿಗೆಗೆ ನೀಡಲಾಗಿತ್ತು. ಆದರೆ ಗ್ರಾಪಂ ಆಡಳಿತ ಮಂಡಳಿಯ ಕೊನೆಯ ಸಭೆಯಲ್ಲಿ ಮಾಸಿಕ 35 ಸಾವಿರ ರೂ.ಗೆ ಇಳಿಸಿ ನಿರ್ಣಯ ಕೈಗೊಳ್ಳಲಾಗಿದೆ. ಇದು ಗೌಪ್ಯವಾಗಿ ನಡೆದಿದ್ದು, ಪಂಚಾಯಿತಿ ಆದಾಯಕ್ಕೆ ಹೊಡೆತ ಬಿದ್ದಿದೆ. ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಬಾಡಿಗೆ ವಸೂಲಿಯಲ್ಲೂ ಅಕ್ರಮ ನಡೆಸಲಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಟಿಎಪಿಸಿಎಂಸಿ ಸದಸ್ಯ ಮಧು ಮಾತನಾಡಿ, ಪಂಚಾಯಿತಿಯಲ್ಲಿ ಪೌರಕಾರ್ಮಿಕರಿಗೆ ಸಂಬಳ ನೀಡಲು ಹಣ ಇಲ್ಲ ಎಂದು ಸತಾಯಿಸುತ್ತಾರೆ. ಆದರೆ ಈ ರೀತಿ ಪಂಚಾಯಿತಿಗೆ ಬರಬೇಕಾದ ಆದಾಯ ಕಡಿತ ಮಾಡಲು ಷಡ್ಯಂತ್ರ ರೂಪಿಸುತ್ತಾರೆ. ಈ ಬಗ್ಗೆ ಸೂಕ್ತ ತನಿಖೆಯಾಗಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಶೇಖರ್ ಮಾತನಾಡಿ, ಖಾಸಗಿ ವ್ಯಕ್ತಿಗೆ ನೀಡಿರುವ ವಾಣಿಜ್ಯ ಮಳಿಗೆಯನ್ನು ಕೂಡಲೆ ಮುಚ್ಚಿಸಿ ಮರು ಹರಾಜು ಮಾಡಿಸಿ. ಪಂಚಾಯಿತಿಗೆ ಹೆಚ್ಚು ಆದಾಯ ಬರುವಂತೆ ಮಾಡಿ ಎಂದು ಒತ್ತಾಯಿಸಿದರು.
ಗ್ರಾಪಂ ಮಾಜಿ ಅಧ್ಯಕ್ಷ ಕೆ.ಜಿ. ಪುಟ್ಟರಾಜು ಮಾತನಾಡಿದರು. ಗ್ರಾಪಂ ಮಾಜಿ ಅಧ್ಯಕ್ಷರಾದ ಕೃಷ್ಣ, ರಾಜೇಶ್, ಕೆ.ಬಿ. ಚಂದ್ರಶೇಖರ್, ಜಯರಾಂ, ಮಾಜಿ ಸದಸ್ಯ ಪುಟ್ಟೇಗೌಡ, ಚಂದ್ರಶೇಖರ್, ಮುಖಂಡರಾದ ಕೆ.ಎನ್. ಪುಟ್ಟೇಗೌಡ, ಅಣ್ಣಯ್ಯ, ಪುಟ್ಟರಾಜು, ವಾಸು, ಮುರುಳೀಧರ್, ಅಕ್ಷಯ್ ಮತ್ತಿತರರಿದ್ದರು.