ಪಟ್ಟಣದ ತೋಟಗಾರಿಕೆ ಇಲಾಖೆ ಆವರಣದಲ್ಲಿ ತೆರದಿರುವಅಕ್ಕ ಕೆಫೆಯನ್ನು ಶುಕ್ರವಾರ ಶಾಸಕ ಎ.ಬಿ.ರಮೇಶ ಬಂಡಿಸಿದ್ದೇಗೌಡ ಹಾಗೂ ಜಿಲ್ಲಾ ಪಂಚಾಯಿತಿ ಆಡಳಿತಾಧಿಕಾರಿ ಮನೋಜ್ ಕುಮಾರ್ ಮೀನಾ ಉದ್ಘಾಟಿಸಿದರು. ಜಿಲ್ಲಾಧಿಕಾರಿ ಡಾ.ಕುಮಾರ, ಜಿಪಂ ಸಿಇಒ ಕೆ.ಆರ್.ನಂದಿನಿ, ಪಿಆರ್‌ಇಡಿ ಇಇ ನಾಗರಾಜು ಇದ್ದರು. 
ಮಂಡ್ಯ

ಮಹಿಳಾ ಸಬಲೀಕರಣಕ್ಕೆ ಅಕ್ಕ ಕೆಫೆ ಮಾದರಿ ಉದ್ಯಮ

ಶ್ರೀರಂಗಪಟ್ಟಣ: ಅಕ್ಕ ಕೆಫೆ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಮಹಿಳಾ ಸಬಲೀಕರಣಕ್ಕೆ ಮಾದರಿ ಉದ್ಯಮ ಎಂದು ಶಾಸಕ ಎ.ಬಿ.ರಮೇಶ ಬಂಡಿಸಿದ್ದೇಗೌಡ ತಿಳಿಸಿದರು.
ಪಟ್ಟಣದ ತಾಲೂಕು ತೋಟಗಾರಿಕೆ ಇಲಾಖೆ ಆವರಣದಲ್ಲಿ ಅಕ್ಕ ಕೆಫೆಯನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.
ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿ ಸಮನ್ವಯದಿಂದ ನಿರಂತರವಾಗಿ ಶ್ರಮಿಸುತ್ತಿವೆ. ಈ ನಿಟ್ಟಿನಲ್ಲಿ ಅಕ್ಕ ಕೆಫೆ ಗ್ರಾಮೀಣ ಭಾಗದ ಮಹಿಳೆಯರಿಗೆ ಶಾಶ್ವತ ಆದಾಯದ ಮೂಲ ಕಲ್ಪಿಸುವ ವೇದಿಕೆಯಾಗಿದೆ. ಮಹಿಳಾ ಸ್ವಸಹಾಯ ಸಂಘದ ಸದಸ್ಯರು ಸ್ವಚ್ಛತೆ, ಆಹಾರದ ರುಚಿ, ಗುಣಮಟ್ಟ ಹಾಗೂ ಗ್ರಾಹಕ ಸ್ನೇಹಿ ಸೇವೆಗೆ ಆದ್ಯತೆ ನೀಡಬೇಕು. ಗುಣಮಟ್ಟದ ಆಹಾರವನ್ನು ಒದಗಿಸಿದಲ್ಲಿ ಜನರ ವಿಶ್ವಾಸ ಹಾಗೂ ಬೆಂಬಲ ಸಹಜವಾಗಿ ದೊರೆಯಲಿದೆ. ಸ್ಪರ್ಧಾತ್ಮಕ ಯುಗದಲ್ಲಿ ಗುಣಮಟ್ಟವೇ ಯಶಸ್ಸಿನ ಮಾನದಂಡವಾಗಿದೆ. ಕೈಗೆಟುಕುವ ದರದಲ್ಲಿ ಗುಣಮಟ್ಟದ ಆಹಾರ ಒದಗಿಸುವ ಮೂಲಕ ಅಕ್ಕ ಕೆಫೆ ಜನಮನ ಗೆಲ್ಲಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಪಂಚಾಯಿತಿ ಆಡಳಿತಾಧಿಕಾರಿ ಮನೋಜ್ ಕುಮಾರ್ ಮೀನಾ ಮಾತನಾಡಿ, ಗ್ರಾಮೀಣ ಮಹಿಳೆಯರ ಆರ್ಥಿಕ ಸಬಲೀಕರಣ, ಸ್ವಾವಲಂಬನೆ ಹಾಗೂ ಉದ್ಯಮಶೀಲತೆಯನ್ನು ಉತ್ತೇಜಿಸುವ ಉದ್ದೇಶದಿಂದ ಯೋಜನೆ ಜಾರಿಯಾಗಿದ್ದು, ಉತ್ತಮ ಸೇವೆ ಮೂಲಕ ಜನರ ವಿಶ್ವಾಸವನ್ನು ಗಳಿಸಿದರೆ ಅಕ್ಕ ಕೆಫೆಯು ಮಹಿಳಾ ಸಬಲೀಕರಣದ ಮಾದರಿ ಉದ್ಯಮವಾಗಿ ರೂಪುಗೊಳ್ಳಲಿದೆ ಎಂದರು.
ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್.ನಂದಿನಿ, ಪಿಆರ್‌ಇಡಿ ಇಇ ನಾಗರಾಜು, ತಹಸೀಲ್ದಾರ್ ಚೇತನ ಯಾದವ್, ತಾಲೂಕು ಪಂಚಾಯಿತಿ ಇಒ ಚಂದ್ರು, ಯೋಜನಾಧಿಕಾರಿ ತ್ರಿವೇಣಿ, ಜಿಲ್ಲಾ ಹಾಗೂ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು, ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರು ಇದ್ದರು.