ಪಾಂಡವಪುರ ಪಟ್ಟಣದ ತಾಪಂ ಸಭಾಂಗಣದಲ್ಲಿ ನಡೆದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕ ದರ್ಶನ್ ಮಾತನಾಡಿದರು. ರೂಪಾಶ್ರೀ, ಎಂ.ಎಸ್.ವೀಣಾ,ಆಶಾ ಇತರರಿದ್ದರು.
- ಶಾಸಕ ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿಕೆ
- ಪ್ರಗತಿ ಪರಿಶೀಲನೆ ಸಭೆ
ಪಾಂಡವಪುರ: ಪೂರ್ವ ಮುಂಗಾರು ಮತ್ತು ಮುಂಗಾರು ಮಳೆ ವೈಫಲ್ಯದಿಂದ ಕೆಆರ್ ಎಸ್ ಅಣೆಕಟ್ಟೆ ತುಂಬಿಲ್ಲ. ಈ ನಡುವೆ ಬೆಳೆದು ನಿಂತಿರುವ ಬೆಳೆ ಒಣಗುತ್ತಿದೆ. ಬೆಳೆ ರಕ್ಷಣೆ ಜತೆಗೆ ಕುಡಿಯುವ ನೀರು ಒದಗಿಸಬೇಕಾದ ಅನಿವಾರ್ಯತೆ ಇದ್ದು, ನೀರಾವರಿ ಸಲಹಾ ಸಮಿತಿಯಲ್ಲಿ ಈ ಬಗ್ಗೆ ಚರ್ಚಿಸಲಾಗುವುದು ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿದರು.
ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ಸಭೆಯ
(ಕೆಡಿಪಿ) ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಒತ್ತುವರಿಯಾಗಿರುವ ಕೆರೆಕಟ್ಟೆ, ಹಳ್ಳಗಳನ್ನು ಸರ್ವೇ ಮಾಡಿ ಒತ್ತುವರಿ ತೆರವುಗೊಳಿಸಬೇಕು. ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಕುಡಿಯುವ ನೀರಿಗೆ ತೊಂದರೆಯಾಗದಂತೆ ಕ್ರಮವಹಿಸಬೇಕು. ಮಳೆಗಾಲದಲ್ಲಿ ಹೆಚ್ಚಾಗಿ ಡೆಂೆ ಜ್ವರ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ನಿಗಾವಹಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.
ವಿದ್ಯುತ್ ಸರಬರಾಜು ಡೇಟಾ ನೀಡಿ: ದಿನಕ್ಕೆ ಎಷ್ಟು ಗಂಟೆ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ ಎಂಬುದರ ಮಾಹಿತಿಯನ್ನು ಬರಿ ಮಾತಿನಲ್ಲಿ ಹೇಳುವುದರ ಬದಲು ಅದರ ಸಂಪೂರ್ಣ ಡೇಟಾ ನೀಡುವಂತೆ ಸೆಸ್ಕ್ ಎಇಇ ರವಿಕುಮಾರ್‌ಗೆ ತಾಕೀತು ಮಾಡಿದ ಶಾಸಕ ದರ್ಶನ್, ಕುಡಿಯುವ ನೀರು ಮತ್ತು ಕೃಷಿ ಚಟುವಟಿಕೆಗಳಿಗೆ ವಿದ್ಯುತ್ ಕೊರತೆಯಾಗದಂತೆ ಎಚ್ಚರವಹಿಸಬೇಕು. ಮಳೆಗಾಲದಲ್ಲಿ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಂದ ಸಸಿ ನೆಡುವ ಜತೆಗೆ ಬೇಬಿಬೆಟ್ಟ ಸುತ್ತಲಿನ ಪ್ರದೇಶದಲ್ಲಿ ಗಿಡ ನೆಡುವ ಕಾರ್ಯಕ್ರಮ ರೂಪಿಸಬೇಕು ಎಂದು ಅರಣ್ಯಾಧಿಕಾರಿಗಳಿಗೆ ಸೂಚಿಸಿದರು.
ಸರ್ಕಾರ ಪಾಂಡವಪುರ ತಾಲೂಕನ್ನು ಸಾವಯವ ಮಾರ್ಪಾಟು ತಾಲೂಕು ಎಂದು ಘೋಷಿಸಿರುವ ಹಿನ್ನೆಲೆ ಈ ಸಾಲಿನ ರಾಗಿಯನ್ನು ಸಾವಯವ ಕೃಷಿ ಪದ್ಧತಿಯಡಿ ಬೆಳೆಯುವಂತೆ ರೈತರಿಗೆ ಅರಿವು ಮೂಡಿಸಬೇಕು ಎಂದು ಸಹಾಯಕ ಕೃಷಿ ನಿರ್ದೇಶಕ ಮಂಜುನಾಥ್‌ಗೆ ತಿಳಿಸಿದರು.
ಕಾವೇರಿ ನೀರಾವರಿ ನಿಗಮ ನಂ.6 ಉಪ ವಿಭಾಗಾದ ಎಇಇ ಶಿವಪ್ರಸಾದ್ ಮಾತನಾಡಿ, ಪೂರ್ವ ಮುಂಗಾರು ಮತ್ತು ಮುಂಗಾರು ಸಮರ್ಪಕವಾಗಿ ಮಳೆ ಬಿದ್ದಿಲ್ಲ. ಹೀಗಾಗಿ ಕೆಆರ್ ಎಸ್ ಜಲಾಶಯದಲ್ಲಿ ಕೇವಲ 81 ಅಡಿ ನೀರು ಇದೆ. ಮುಂಬರುವ ದಿನಗಳಲ್ಲಿ ಕುಡಿಯುವ ನೀರಿನ ದೃಷ್ಠಿಯಿಂದ ನಾಲೆಗಳಿಗೆ ನೀರು ಬಿಡಲು ಸಾಧ್ಯವಾಗುತ್ತಿಲ್ಲ. ನೀರಾವರಿ ಸಲಹಾ ಸಮಿತಿಯ ನಿರ್ಧಾರವೇ ಅಂತಿಮವಾಗಿದೆ. ನಾಲೆಯಲ್ಲಿ ನೀರು ಸ್ಥಗಿತವಾಗಿರುವ ಹಿನ್ನೆಲೆಯಲ್ಲಿ ಹಲವಾರು ಕಾಮಗಾರಿಗಳನ್ನು ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಕಾವೇರಿ ನೀರಾವರಿ ನಿಗಮದ (ಹೇಮಾವತಿ) ಎಇಇ ಪುಟ್ಟಮಾಯಿಗೌಡ ಮಾತನಾಡಿ, ಹೇಮಾವತಿ ಅಚ್ಚುಕಟ್ಟಿನ ಎಲ್ಲ ಕೆರೆಗಳಲ್ಲಿ ನೀರು ಕ್ಷೀಣಿಸುತ್ತಿದ್ದು, ಮುಂದಿನ ಹದಿನೈದು ದಿನಗಳಲ್ಲಿ ಕೆರೆಕಟ್ಟೆಗಳು ಬರಿದಾಗಲಿವೆ ಎಂದು ತಿಳಿಸಿದರು.
ಪುರಸಭೆ ಮುಖ್ಯಾಧಿಕಾರಿ ಸತೀಶ್ ಕುಮಾರ್ ಮಾತನಾಡಿ, ಮದ್ಯದಂಗಡಿಗಳಿಗೆ ಅಬಕಾರಿ ಅಧಿಕಾರಿಗಳು ಲೈಸೆನ್ಸ್ ನೀಡುವಾಗ ಸ್ಥಳೀಯ ಪುರಸಭೆಯಿಂದಲೂ ಅನುಮತಿ ಪಡೆದುಕೊಳ್ಳಲು ಕ್ರಮವಹಿಸಬೇಕು. ಪಟ್ಟಣದ ರಸ್ತೆ ರಸ್ತೆಗಳಲ್ಲಿ ಮದ್ಯದ ಖಾಲಿ ಬಾಟಲ್, ಟೆಟ್ರಾ ಪ್ಯಾಕೇಟ್‌ಗಳು ಬಿಸಾಡುತ್ತಿದ್ದು, ಅಬಕಾರಿಯವರು ಕಟ್ಟುನಿಟ್ಟಾಗಿ ಕ್ರಮವಹಿಸಬೇಕು. ಪುರಸಭೆ ವ್ಯಾಪ್ತಿಯ ಹಾರೋಹಳ್ಳಿ ಬಳಿ ನಿವೇಶನ ರಹಿತರಿಗೆ 177 ನಿವೇಶನಗಳನ್ನು ಹಂಚಿಕೆ ಮಾಡಲು 714 ಅರ್ಜಿಗಳು ಬಂದಿದ್ದವು. ಈ ಪೈಕಿ ಅರ್ಹ 244 ಅರ್ಜಿಗಳನ್ನು ಕ್ರಮಬದ್ಧವೆಂದು ಪರಿಗಣಿಸಿದ್ದು, ಆಶ್ರಯ ಸಮಿತಿ ಸಭೆಯಲ್ಲಿ ಅಂತಿಮಗೊಳಿಸಲಾಗುವುದು. ಈ ಹಿಂದೆ ವಾಣಿಜ್ಯ ಮಳಿಗೆಗಳಿಂದ ಕೇವಲ ತಿಂಗಳಿಗೆ 25ಸಾವಿರ ರೂ., ಆದಾಯ ಬರುತ್ತಿತ್ತು. ಈಗ ಮರು ಹರಾಜು ಮಾಡಿದ್ದರಿದ್ದ 2ಲಕ್ಷ ರೂ., ಆದಾಯ ಬರುವಂತೆ ಕ್ರಮವಹಿಸಲಾಗಿದೆ ಎಂದು ತಿಳಿಸಿದರು.
ಪೊಲೀಸರು ಕೆಲವು ಗಾಂಜಾ ಪ್ರಕರಣಗಳನ್ನು ಭೇದಿಸಿದ್ದರೂ ಇನ್ನೂ ಗಾಂಜಾ ಮಾರಾಟ ನಡೆಯುತ್ತಿದೆ ಎಂಬ ಮಾಹಿತಿ ಲಭ್ಯವಿದೆ. ಪಟ್ಟಣ ಮತ್ತು ಗ್ರಾಮೀಣ ಪ್ರದೇಶದ ಕೆಲವು ಪೆಟ್ಟಿ ಅಂಗಡಿಗಳಲ್ಲಿ ಅಕ್ರಮ ಮದ್ಯ ಮಾರಾಟ ಎಗ್ಗಿಲ್ಲದೆ ಸಾಗಿದೆ. ಪೊಲೀಸ್ ಮತ್ತು ಅಬಕಾರಿ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ಇದಕ್ಕೆ ಕಡಿವಾಣ ಹಾಕಬೇಕು ಎಂದು ಅಬಕಾರಿ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಪಂ.ಆಡಳಿತಾಧಿಕಾರಿ ರೂಪಾಶ್ರೀ, ತಾ.ಪಂ.ಇಒ ಎಂ.ಎಸ್.ವೀಣಾ, ಯೋಜನಾಧಿಕಾರಿ ಆಶಾ, ಗ್ಯಾರಂಟಿ ಯೋಜನೆಗಳ ಅಭಿವೃದ್ಧಿ ಪ್ರಾಧಿಕಾರಿದ ತಾಲೂಕು ಅಧ್ಯಕ್ಷ ಎಚ್.ಕೃಷ್ಣೇಗೌಡ, ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.