ಮಂಡ್ಯ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಕೃಷಿ ಪದವಿ ವಿದ್ಯಾರ್ಥಿಗಳು, ಪದವೀಧರರು ಪ್ರತಿಭಟನೆ ನಡೆಸಿದರು.
ಕೃಷಿ ಇಲಾಖೆಯಲ್ಲಿ ನಡೆಯುತ್ತಿರುವ ವಿವಿಧ ಹುದ್ದೆಗಳ ನೇಮಕಾತಿಯಲ್ಲಿ ನಿಯಮಬಾಹಿರ ಅರ್ಹತೆಗಳನ್ನು ಸೇರಿಸಲಾಗಿದೆ ಎಂದು ಕೃಷಿ ಪದವಿ ವಿದ್ಯಾರ್ಥಿಗಳು, ಪದವೀಧರರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದ ವಿದ್ಯಾರ್ಥಿಗಳು, ಅನ್ಯಾಯದ ವಿರುದ್ಧ ಘೋಷಣೆ ಮೊಳಗಿಸಿದರು. ಹತ್ತು ದಿನಗಳಿಂದ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿದ್ದರೂ ಇದುವರೆಗೂ ವಿದ್ಯಾರ್ಥಿಗಳ ಅಹವಾಲುಗಳನ್ನು ಯಾರೊಬ್ಬರೂ ಆಲಿಸುತ್ತಿಲ್ಲ. ಸರ್ಕಾರದ ವರ್ತನೆ ಹೀಗೆ ಮುಂದುವರೆದರೆ ಐದು ಕೃಷಿ ವಿಶ್ವವಿದ್ಯಾನಿಲಯಗಳ ವ್ಯಾಪ್ತಿಯಲ್ಲಿ ಉಗ್ರ ಸ್ವರೂಪದ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಕೃಷಿ ಅಧಿಕಾರಿ ಮತ್ತು ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳು ರೈತರಿಗೆ ತಾಂತ್ರಿಕ ಸಲಹೆ, ಬೆಳೆ ನಿರ್ವಹಣೆ, ಮಣ್ಣಿನ ಆರೋಗ್ಯ, ಕೀಟ ಮತ್ತು ರೋಗ ನಿಯಂತ್ರಣ, ಕೃಷಿ ವಿಸ್ತರಣಾ ಸೇವೆಗಳು, ವಿವಿಧ ಕೃಷಿ ಯೋಜನೆಗಳ ಅನುಷ್ಠಾನಕ್ಕೆ ಸಂಬಂಧಿಸಿದ ಅತ್ಯಂತ ಮಹತ್ವದ್ದಾಗಿವೆ. ಈ ಹುದ್ದೆಗೆ ಅರ್ಹತೆ ಪಡೆದ ಅಭ್ಯರ್ಥಿಗಳಿಗೆ ಮಾತ್ರ ಅವಕಾಶ ನೀಡಬೇಕು. ಕೃಷಿ ಸಂಬಂಧಿತ ಪದವೀಧರರನ್ನು ಮಾತ್ರ ಪರಿಗಣಿಸಬೇಕು ಎಂದು ಕರ್ನಾಟಕ ಕೃಷಿ ಸೇವೆಗಳ ನಿಯಮಗಳಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಆದರೆ, ರಾಜ್ಯಸರ್ಕಾರ ಈ ಹುದ್ದೆಗಳಿಗೆ ರೈ-ಟೆಕ್ ವಿಶ್ವವಿದ್ಯಾಲಯದ ಕೃಷಿ ಪದವೀಧರರನ್ನೂ ಅರ್ಹರೆಂದು ಪರಿಗಣಿಸಿದೆ. ಅಲ್ಲದೆ, ಬಯೋಟೆಕ್ನಾಲಜಿ ವಿಷಯದಲ್ಲಿ ಪದವಿ ಗಳಿಸಿದ ಇಂಜಿನಿಯರ್‌ಗಳನ್ನೂ ಅರ್ಹರೆಂದು ಸುತ್ತೋಲೆ ಹೊರಡಿಸಿರುವುದು ಕೃಷಿ ಪದವೀಧರರಿಗೆ ಮಾಡುತ್ತಿರುವ ಘೋರ ಅನ್ಯಾಯ ಎಂದು ಟೀಕಿಸಿದರು.
ಇಂಜಿನಿಯರಿಂಗ್ ಪದವೀಧರರು ಕೃಷಿ ತಾಂತ್ರಿಕ ಸಲಹೆ, ಬೆಳೆ ನಿರ್ವಹಣೆ, ಮಣ್ಣಿನ ಆರೋಗ್ಯ, ಕೀಟ ಮತ್ತು ರೋಗ ನಿಯಂತ್ರಣ, ಕೃಷಿ ವಿಸ್ತರಣಾ ಸೇವೆಗಳ ಬಗ್ಗೆ ಓದಿರುವುದೇ ಇಲ್ಲ. ರೈ-ಟೆಕ್ ವಿಶ್ವವಿದ್ಯಾನಿಲಯವನ್ನು ಬ್ಯಾನ್ ಮಾಡಿದ್ದರೂ ಅಲ್ಲಿ ಪದವಿ ಪಡೆದವರನ್ನು ಹುದ್ದೆಗಳಿಗೆ ಪರಿಗಣಿಸಲಾಗಿದೆ. ಇದನ್ನು ರಾಜ್ಯಸರ್ಕಾರ ತಕ್ಷಣವೇ ಕೈಬಿಟ್ಟು ಐಸಿಎಆರ್ ಮಾನ್ಯತೆ ಪಡೆದ ಕೃಷಿ ಮತ್ತು ಕೃಷಿ ಪದವೀಧರರಿಗೆ ಮಾತ್ರ ಅವಕಾಶ ನೀಡಬೇಕು. ಕರ್ನಾಟಕ ಕೃಷಿ ಸೇವೆಗಳ ಸಿ ಆ್ಯಂಡ್ ಆರ್ ನಿಯಮಗಳನ್ನು ಕಟ್ಟು ನಿಟ್ಟಾಗಿ ಜಾರಿಗೊಳಿಸುವಂತೆ ಒತ್ತಾಯಿಸಿದರು.
ಕಾಂಗ್ರೆಸ್ ಸರ್ಕಾರದ ಪ್ರತಿನಿದಿಗಳು ಜಂತರ್‌ಮಂತರ್‌ನಲ್ಲಿ ವಿದ್ಯಾರ್ಥಿಗಳ ಪರ ಹೋರಾಡುವುದಲ್ಲ, ಇಲ್ಲಿ ಆಗುತ್ತಿರುವ ಅನ್ಯಾಯದ ಬಗ್ಗೆ ಮಾತನಾಡಬೇಕಿದೆ. ಅಲ್ಲಿ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದ್ದರೆ, ಇಲ್ಲಿ ವಿದ್ಯಾರ್ಥಿಗಳಿಗೆ ಆಗುತ್ತಿರುವುದೇನು ಎಂದು ಪ್ರಶ್ನಿಸಿದರು. ಈ ವಿಷಯಕ್ಕೆ ಸಂಬಂಧಿಸಿದಂತೆ ಅನೇಕ ಬಾರಿ ರಾಜ್ಯಸರ್ಕಾರ, ಕೃಷಿ ಇಲಾಖೆ, ಕರ್ನಾಟಕ ಪರೀಕ್ಷಾ ಪ್ರಾಧಿಕಾರ, ಕೃಷಿ ಆಯುಕ್ತರು, ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ, ಜ್ಞಾಪನಾ ಪತ್ರ, ಆಕ್ಷೇಪಣೆಗಳನ್ನು ಸಲ್ಲಿಸಿದ್ದರೂ ಸಮರ್ಪಕ ಕ್ರಮ ಕೈಗೊಂಡಿಲ್ಲ. ತಮ್ಮ ನ್ಯಾಯ ಸಮ್ಮತ ಬೇಡಿಕೆಗಳು ಈಡೇರುವವರೆಗೆ ಹೋರಾಟ ಮುಂದುವರೆಯಲಿದೆ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಕೆ.ಇಶಾಂತ್‌ಗೌಡ, ಲಕ್ಷ್ಮೀ, ಕೆ.ಎಸ್.ಚಿರಂತ್‌ಪಟೇಲ್, ಪಿ.ತೇಜಸ್, ದೀಪ್ತಿ, ಹರ್ಷಿತಾ, ದಿಶಾ, ಮೌಲ್ಯಾ ಇತರರಿದ್ದರು.