ಮಂಡ್ಯದಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ ಅಧ್ಯಕ್ಷತೆಯಲ್ಲಿ ಕೃಷಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ಆಯೋಜಿಸಲಾಗಿತ್ತು.
- ಗರಿಷ್ಟ ಪ್ರಮಾಣದಲ್ಲಿ ವಿಮೆ ನೋಂದಣಿ ಮಾಡಿಸಬೇಕು
- ಕೃಷಿ ಇಲಾಖೆ ಪ್ರಗತಿ ಪರಿಶೀಲನಾ ಸಭೆ
ಮಂಡ್ಯ: ಜಿಲ್ಲೆಯ ಪ್ರತಿ ರೈತರಿಗೂ ಬೆಳೆ ವಿಮೆಯ ರಕ್ಷಣೆ ಸಿಗುವಂತಾಗಲು ಕೃಷಿ ಇಲಾಖೆ ಅಧಿಕಾರಿಗಳು ಜಾಗೃತಿ ಮೂಡಿಸಬೇಕು. ಅಂತೆಯೇ ಗರಿಷ್ಟ ಪ್ರಮಾಣದಲ್ಲಿ ವಿಮೆ ನೋಂದಣಿ ಮಾಡಿಸಬೇಕು ಎಂದು ಕೃಷಿ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಕುಮಾರ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಕೃಷಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಬೆಳೆ ವಿಮೆ ನೋಂದಣಿ ಪ್ರಕ್ರಿಯೆ ನಡೆಯುತ್ತಿದೆ. ಯಾವುದೇ ರೈತರು ಯೋಜನೆಯಿಂದ ವಂಚಿತರಾಗದಂತೆ ನೋಡಿಕೊಳ್ಳಲು ಕೃಷಿ ಮತ್ತು ವಿಮಾ ಅಧಿಕಾರಿಗಳ ಅಗತ್ಯ ಕ್ರಮ ವಹಿಸಬೇಕು ಎಂದು ತಿಳಿಸಿದರು.
ಹವಾಮಾನ ವೈಪರೀತ್ಯ ಹಾಗೂ ಮಳೆ ಕೊರತೆಯಿಂದಾಗಿ ರೈತರು ನಷ್ಟ ಅನುಭವಿಸುವುದನ್ನು ತಪ್ಪಿಸಲು ಬೆಳೆ ವಿಮೆ ಪ್ರಮುಖ ಅಸ್ತ್ರವಾಗಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಹಳ್ಳಿಗಳಿಗೆ ಭೇಟಿ ನೀಡಿ ರೈತರ ಮನವೊಲಿಸಬೇಕು. ಬೆಳೆ ವಿಮೆ ಎನ್ನುವುದು ಅನಿರೀಕ್ಷಿತ ನೈಸರ್ಗಿಕ ವಿಕೋಪ, ಬರ, ಪ್ರವಾಹ ಅಥವಾ ಕೀಟಬಾಧೆಯಿಂದ ಬೆಳೆ ನಷ್ಟವಾದಾಗ ರೈತರಿಗೆ ಆರ್ಥಿಕ ನೆರವು ಒದಗಿಸುತ್ತದೆ. ಇದರ ಬಗ್ಗೆ ಹಾಲಿನ ಡೇರಿ ಹಾಗೂ ರೈತ ಸಂಪರ್ಕ ಕೇಂದ್ರ, ಸ್ವಸಹಾಯ ಸಂಘಗಳಲ್ಲಿ ಬೆಳೆ ವಿಮೆ ಕುರಿತು ಫೋಸ್ಟರ್ ಅಳವಡಿಸುವ ಮೂಲಕ ರೈತರಿಗೆ ಜಾಗೃತಿ ಮೂಡಿಸಬೇಕು. ಅದೇ ರೀತಿ ಜಿಲ್ಲೆಯಲ್ಲಿ ಪರ್ಯಾಯ ಬೆಳೆಗಳಾಗಿ 10 ಬೆಳೆಗಳನ್ನು ಗುರುತಿಸಿದ್ದು ರಾಗಿ, ಜೋಳ, ಮೆಕ್ಕೆಜೋಳ, ತೊಗರಿ, ಅಲಸಂದೆ ಮತ್ತು ಹುರುಳಿ ಬೆಳೆಗೆ ಹೆಚ್ಚು ಒತ್ತು ನೀಡುವಂತೆ ರೈತರಿಗೆ ಅರಿವು ಮೂಡಿಸಬೇಕು ಎಂದರು.
ಜಿಪಂ ಸಿಇಒ ಕೆ.ಆರ್.ನಂದಿನಿ ಮಾತನಾಡಿ, ಹೋಬಳಿ ಹಾಗೂ ಗ್ರಾಮೀಣ ವ್ಯಾಪ್ತಿಯಲ್ಲಿ ಕಸ ವಿಲೇವಾರಿ ಮಾಡುವ ವಾಹನದಲ್ಲಿ ಜಿಂಗಲ್ ಅಳವಡಿಸಿ ರೈತರಿಗೆ ಬೆಳೆ ವಿಮೆಯ ಪ್ರಯೋಜನಗಳು ಹಾಗೂ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಬೆಳೆ ವಿಮೆ ನೋಂದಣಿ ಪ್ರಕ್ರಿಯೆ ಮಾಹಿತಿ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಜಂಟಿ ಕೃಷಿ ನಿರ್ದೇಶಕ ಜಿ.ಎಸ್.ಜಯಸ್ವಾಮಿ, ಉಪ ನಿರ್ದೇಶಕಿಯರಾದ ಮಾಲತಿ, ಸುಷ್ಮಾ ಇತರರಿದ್ದರು.