ದೆಹಲಿಯ ಭಾರತೀಯ ಕೃಷಿ ಅನುಸಂಧಾನ ಪರಿಷತ್‌ನಲ್ಲಿ ಒಡಂಬಡಿಕೆ ಪ್ರಕ್ರಿಯೆ ನಡೆಯಿತು.
- ಸೇವೆ ವಿಸ್ತರಣೆ ಮಾಡಲು ಮಹತ್ವದ ಹೆಜ್ಜೆ
- ದೆಹಲಿಯ ಭಾರತೀಯ ಕೃಷಿ ಅನುಸಂಧಾನ ಪರಿಷತ್‌ನಲ್ಲಿ ಒಪ್ಪಂದ
ಮಂಡ್ಯ: ಬೆಂಗಳೂರು ಕೃವಿ ವಿಶ್ವವಿದ್ಯಾಲಯದ ಅಧೀನದಲ್ಲಿದ್ದ ಮಂಡ್ಯ, ಹಾಸನ ಮತ್ತು ಚಾಮರಾಜನಗರದ ಕೃಷಿ ವಿಜ್ಞಾನ ಕೇಂದ್ರ ಇನ್ನು ಮುಂದೆ ಮಂಡ್ಯ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ವ್ಯಾಪ್ತಿಗೊಳಪಡಲಿದೆ. ಇಂತಹದೊಂದು ಮಹತ್ವದ ಒಡಂಬಡಿಕೆಗೆ ಸಹಿ ಹಾಕಲಾಗಿದ್ದು, ಇದರಿಂದ ಮುಂದಿನ ದಿನದಲ್ಲಿ ಮೂರು ಜಿಲ್ಲೆಯಲ್ಲಿಯೂ ಕೃಷಿ ಸೇವೆ ವಿಸ್ತರಣೆ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ.
ದೆಹಲಿಯ ಭಾರತೀಯ ಕೃಷಿ ಅನುಸಂಧಾನ ಪರಿಷತ್‌ನಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಸುಧೀರ್ಘ ಚರ್ಚೆಯ ನಂತರ ಪರಿಷತ್‌ನೊಂದಿಗೆ ಮಹತ್ವದ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಈ ಮೂಲಕ ಮೂರು ಜಿಲ್ಲೆಯ ಕೃಷಿ ವಿಜ್ಞಾನ ಕೇಂದ್ರದ ಆಡಳಿತಾತ್ಮಕ ನಿಯಂತ್ರಣವನ್ನು ಮಂಡ್ಯ ಕೃಷಿ ವಿವಿಗೆ ವರ್ಗಾವಣೆ ಮಾಡಲಾಗಿದೆ. ಈ ಪ್ರಕ್ರಿಯೆಯಲ್ಲಿ ಪರಿಷತ್‌ನ ಕೃಷಿ ವಿಸ್ತರಣೆಯ ಉಪ ಮಹಾನಿರ್ದೇಶಕ ಡಾ.ರಾಜಬೀರ್ ಸಿಂಗ್, ಮಂಡ್ಯ ಕೃಷಿ ವಿವಿಯ ಕುಲಪತಿ ಡಾ.ಕೆ.ಸಿ.ನಾರಾಯಣಸ್ವಾಮಿ, ಬೆಂಗಳೂರಿನ ಕೃಷಿ ತಂತ್ರಜ್ಞಾನ ಅನ್ವಯಿಕ ಸಂಶೋಧನಾ ಸಂಸ್ಥೆ ನಿರ್ದೇಶಕ ಡಾ.ಎಂ.ಪ್ರಭಾಕರ್, ಮಂಡ್ಯ ಕೃಷಿ ವಿವಿ ಸಂಶೋಧನಾ ನಿರ್ದೇಶಕ ಡಾ.ಜಿ.ಎಂ.ದೇವಗಿರಿ ಹಾಗೂ ವಿಸ್ತರಣಾ ನಿರ್ದೇಶಕ ಡಾ.ಸಿ.ರಾಮಚಂದ್ರ ಅವರು ಭಾಗಿಯಾದರು.
ಮೂರು ಕೃಷಿ ವಿಜ್ಞಾನ ಕೇಂದ್ರಗಳ ವರ್ಗಾವಣೆಯು ಮಂಡ್ಯ, ಹಾಸನ ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಕೃಷಿ ವಿಸ್ತರಣಾ ಸೇವೆಗಳು ಹಾಗೂ ಕೃಷಿ ತಂತ್ರಜ್ಞಾನಗಳ ಪ್ರಸರಣವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ. ಈ ಕ್ರಮವು ಕೃಷಿ ಶಿಕ್ಷಣ, ಸಂಶೋಧನೆ ಮತ್ತು ವಿಸ್ತರಣಾ ಚಟುವಟಿಕೆ ನಡುವೆ ಉತ್ತಮ ಸಮನ್ವಯವನ್ನು ಸಾಧಿಸಲು ಸಹಕಾರಿಯಾಗಲಿದೆ. ವಿಜ್ಞಾನ ಕೇಂದ್ರಗಳು ಕೃಷಿ ತಂತ್ರಜ್ಞಾನಗಳ ವರ್ಗಾವಣೆ, ಕೃಷಿಕರ ಕ್ಷೇತ್ರಮಟ್ಟದ ಪರೀಕ್ಷೆಗಳು, ಮುಂಚೂಣಿ ಪ್ರಾತ್ಯಕ್ಷಿಕೆಗಳು, ಕೃಷಿಕರ ತರಬೇತಿ ಕಾರ್ಯಕ್ರಮಗಳು, ಸಾಮರ್ಥ್ಯ ವೃದ್ಧಿ, ಸಲಹಾ ಸೇವೆಗಳು ಹಾಗೂ ಇತರ ವಿಸ್ತರಣಾ ಚಟುವಟಿಕೆಗಳ ಮೂಲಕ ರೈತರಿಗೆ ಮಹತ್ವದ ಸೇವೆಗಳನ್ನು ಒದಗಿಸುತ್ತಿವೆ. ಮಂಡ್ಯ, ಹಾಸನ ಮತ್ತು ಚಾಮರಾಜನಗರ ಕೃಷಿ ವಿಜ್ಞಾನ ಕೇಂದ್ರಗಳು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಮಂಡ್ಯದ ವ್ಯಾಪ್ತಿಗೆ ಬಂದಿರುವುದರಿಂದ ಜಿಲ್ಲಾವಾರು ಕೃಷಿ ಸಮಸ್ಯೆಗಳಿಗೆ ಸೂಕ್ತವಾದ ಕ್ರಮಗಳನ್ನು ಮತ್ತಷ್ಟು ಬಲಪಡಿಸುವುದರ ಜತೆಗೆ, ಸ್ಥಳೀಯ ಪರಿಸ್ಥಿತಿಗೆ ಅನುಗುಣವಾದ ತಂತ್ರಜ್ಞಾನಗಳು ಹಾಗೂ ಸಲಹಾ ಸೇವೆಗಳನ್ನು ರೈತ ಸಮುದಾಯಕ್ಕೆ ಒದಗಿಸಲು ವಿಶ್ವವಿದ್ಯಾಲಯಕ್ಕೆ ಹೆಚ್ಚಿನ ಅವಕಾಶ ದೊರೆಯಲಿದೆ.
ಈ ಒಡಂಬಡಿಕೆ ಸಹಿ ಕಾರ್ಯಕ್ರಮವು ನೂತನವಾಗಿ ಸ್ಥಾಪಿತವಾದ ಮಂಡ್ಯದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ವಿಸ್ತರಣಾ ಜಾಲವನ್ನು ಮತ್ತಷ್ಟು ಬಲಪಡಿಸುವಲ್ಲಿ ಹಾಗೂ ಸುಸ್ಥಿರ ಕೃಷಿ ಅಭಿವೃದ್ಧಿ ಮತ್ತು ರೈತರ ಜೀವನೋಪಾಯ ಸುಧಾರಣೆಗೆ ಸಮನ್ವಯದ ಪ್ರಯತ್ನಗಳನ್ನು ಹೆಚ್ಚಿಸುವಲ್ಲಿ ಮಹತ್ವದ ಮೈಲಿಗಲ್ಲಾಗಿದೆ.