ಮಂಡ್ಯ ತಾಲೂಕು ಬಿಳಿದೇಗಲು ಗ್ರಾಮದಲ್ಲಿ ವಾತ್ಸಲ್ಯ ಕಿಟ್ ವಿತರಣೆ ಮಾಡಲಾಯಿತು.
- ತೀರಾ ಅಸಹಾಯಕರ ಕಿಟ್ ವಿತರಣೆ
- ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗಡೆ ಅವರ ಆಶಯ
- ರಾಜ್ಯಾದ್ಯಂತ ಕಾರ್ಯಕ್ರಮ ಜಾರಿ
ಮಂಡ್ಯ: ತಾಲೂಕಿನ ಹದಿಮೂರು ಕುಟುಂಬಕ್ಕೆ ಗುರುವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಜ್ಞಾನ ವಿಕಾಸ ಕಾರ್ಯಕ್ರಮದಡಿ ವಾತ್ಸಲ್ಯ ಕಿಟ್ ನೀಡಲಾಗಿದೆ.
ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗಡೆ ಮತ್ತು ಹೇಮಾವತಿ ವಿ.ಹೆಗ್ಗಡೆ ಅವರ ಆಶಯದಂತೆ ಕುಟುಂಬದ ಸದಸ್ಯರ ಅಗತ್ಯತೆ ಗುರುತಿಸಿ ದಿನಬಳಕೆಗೆ ಬೇಕಾದ ವಸ್ತು, ಪಾತ್ರೆ, ಬಟ್ಟೆ ವಿತರಿಸಲಾಯಿತು. ಪ್ರತಿ ವರ್ಷ ಏಕಕಾಲದಲ್ಲಿ ಇಡೀ ರಾಜ್ಯದ ಎಲ್ಲ ತಾಲೂಕಿನ ವಾತ್ಸಲ್ಯ ಕುಟುಂಬದ ಸದಸ್ಯರಿಗೆ ಕಿಟ್ ನೀಡಲಾಗುತ್ತದೆ.
ತೀರಾ ಅಸಹಾಯಕರನ್ನು ಯಾರು ನೋಡಿಕೊಳ್ಳದ ಸಂದರ್ಭದಲ್ಲಿ ಅವರಿಗೆ ಜೀವನ ನಿರ್ವಹಣೆಗೆ ಪ್ರತಿ ತಿಂಗಳು 1000 ರೂನಿಂದ 3000 ರೂವರೆಗೆ ಮಾಸಾಶನ ನೀಡಲಾಗಿದೆ. ವಾಸಿಸಲು ಮನೆಯಿಲ್ಲದಿರುವವರಿಗೆ ಮನೆ ನಿರ್ಮಾಣ, ಮನೆ ರಿಪೇರಿ, ಸೋಲಾರ್ ಅಳವಡಿಕೆ, ಆಹಾರ ಕಿಟ್ ಒದಗಿಸಿಕೊಡಲಾಗುತ್ತಿದೆ. ಇದರಿಂದ ಅವರ ಕುಟುಂಬಕ್ಕೆ ಹೆಚ್ಚಿನ ಅನುಕೂಲವಾಗಿದ್ದು, ನೆಮ್ಮದಿಯ ಜೀವನ ನಡೆಸಲು ಪ್ರಯೋಜನವಾಗಿದೆ.
ಧರ್ಮಸ್ಥಳ ಸಂಘದ ಯೋಜನಾಧಿಕಾರಿ ಸುರೇಶ್‌ಶೆಟ್ಟಿ, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಾದ ಬೋರೇಗೌಡ, ಚಂದ್ರು, ಜ್ಞಾನವಿಕಾಸ ಸಮನ್ವಯಾಧಿಕಾರಿ ಶ್ವೇತಾ ಇತರರಿದ್ದರು.