ಮಾಕವಳ್ಳಿಯ ಹೇಮಗಿರಿ ಶುಗರ್ಸ್‌ ಕಾರ್ಖಾನೆಯಲ್ಲಿ ಕಬ್ಬು ಅರೆಯುವಿಕೆಗೆ ಎಜಿಎಂ ಆರ್.ವರದರಾಜನ್ ಚಾಲನೆ ನೀಡಿದರು. ಪಿ.ಎಸ್.ಮೇಯನ್, ಅಶೋಕ್‌ಕುಮಾರ್, ಕಾಯಿ ಮಂಜೇಗೌಡ, ಕುಮಾರ್, ಮಂಜುನಾಥ್ ಇದ್ದರು.  
ಮಂಡ್ಯ

ಕಬ್ಬು ಸರಬರಾಜಿಗೆ ಮಧ್ಯವರ್ತಿಗಳ ಅವಲಂಬಿಸದಿರಲಿ ಸಲಹೆ

ಪ್ರಮುಖ ಮುಖ್ಯಾಂಶಗಳು

  • ಹೇಮಗಿರಿ ಶುಗರ್ಸ್‌ ಕಾರ್ಖಾನೆಯ ಹಿರಿಯ ಪ್ರಧಾನ ವ್ಯವಸ್ಥಾಪಕ ಆರ್.ವರದರಾಜನ್ ಮನವಿ
ಕಿಕ್ಕೇರಿ: ಹೇಮಗಿರಿ ಸಕ್ಕರೆ ಕಾರ್ಖಾನೆ ಕೆೆ.ಆರ್.ಪೇಟೆ ತಾಲೂಕಿನ ಜೀವನಾಡಿಯಾಗಿದ್ದು, ಕಬ್ಬನ್ನು ಕಾರ್ಖಾನೆಗೆ ಸರಬರಾಜು ಮಾಡುವ ಮೂಲಕ ಕಾರ್ಖಾನೆ ಉಳಿಸಿ ಬೆಳೆಸಬೇಕು ಎಂದು ಕಾರ್ಖಾನೆಯ ಹಿರಿಯ ಪ್ರಧಾನ ವ್ಯವಸ್ಥಾಪಕ ಆರ್.ವರದರಾಜನ್ ರೈತರಲ್ಲಿ ಮನವಿ ಮಾಡಿದರು.
ಸಮೀಪದ ಮಾಕವಳ್ಳಿ ಗ್ರಾಮದ ಹೇಮಗಿರಿ ಶುಗರ್ ಕಾರ್ಖಾನೆಯಲ್ಲಿ ಪ್ರಸಕ್ತ ಸಾಲಿನ ಕಬ್ಬು ಅರೆಯುವಿಕೆಗೆ ಗುರುವಾರ ಚಾಲನೆ ನೀಡಿ ಮಾತನಾಡಿದ ಅವರು, ಒಟ್ಟು 11ಸಾವಿರ ಎಕರೆಯಲ್ಲಿ ಕಬ್ಬು ಬೆಳೆದಿದ್ದು, 5.5ಲಕ್ಷ ಮೆಟ್ರಿಕ್ ಟನ್ ಅರೆಯುವ ಗುರಿ ಇದೆ. ನಿತ್ಯ 4 ಸಾವಿರ ಮೆಟ್ರಿಕ್ ಟನ್ ಕಬ್ಬು ಅರೆಯಲಾಗುವುದು ಎಂದರು.
ಪ್ರಸಕ್ತ ಸಾಲಿನ ಹಂಗಾಮಿನಲ್ಲಿ ನಿರೀಕ್ಷಿತ ಮಟ್ಟದಲ್ಲಿ ಕಬ್ಬು ಬೆಳೆ ಇಲ್ಲವಾಗಿದೆ. ಮಧ್ಯವರ್ತಿಗಳನ್ನು ಅವಲಂಬಿಸದೆ ಕಾರ್ಖಾನೆಗೆ ಕಬ್ಬು ಸರಬರಾಜು ಮಾಡಬೇಕು. ಸುಮಾರು 250 ತಂಡಗಳು ಬಳ್ಳಾರಿ ಮತ್ತಿತರ ಪ್ರದೇಶದಿಂದ ಜು. 14ರಂದು ಆಗಮಿಸಲಿದೆ. ಕಬ್ಬು ಕಟಾವಿಗೆ ಕಟಿಂಗ್ ಹೊರತುಪಡಿಸಿ ಟನ್‌ಗೆ 500 ರೂ. ನಿಗದಿಪಡಿಸಲಾಗಿದೆ.
ಬೇಸಿಗೆಯಲ್ಲಿ ಸರಬರಾಜು ಮಾಡುವ ರೈತರಿಗೆ ಟನ್‌ಗೆ 100 ರೂ. ಹೆಚ್ಚಳವಾಗಿ ನೀಡಲಾಗುವುದು. ರೈತರಿಗೆ ಅನುಕೂಲವಾಗಲು ಸಾಲದ ರೂಪದಲ್ಲಿ ಬಿತ್ತನೆ ಬೀಜ ವಿತರಣೆ, ಶೇ. 50ರ ರಿಯಾಯಿತಿಯಲ್ಲಿ ಸೂಕ್ಷ್ಮಾಣು ಪೋಷಕಾಂಶ ವಿತರಣೆ, ಪ್ರೆಸ್ ಮಡ್ಡಿಗೆ ಟನ್‌ಗೆ 140ರೂ.ನಂತೆ ವಿತರಿಸಲಾಗುತ್ತಿದ್ದು, ರೈತರು ಇದರ ಸದುಪಯೋಗ ಪಡೆಯಬೇಕು ಎಂದು ಮಾಹಿತಿ ನೀಡಿದರು.
ಕಬ್ಬು ಬೆಳೆಗಾರ ಸಂಘದ ಬೋರಾಪುರ ಮಂಜುನಾಥ್ ಮಾತನಾಡಿ, ಶುಂಠಿ ಮಾದರಿಯಲ್ಲಿ ಕಬ್ಬು ಬೆಳೆಯಲು ರೈತರು ಮುಂದಾಗಬೇಕು. ಕಬ್ಬು ಬೆಳೆಗಾರರಿಗೆ ಸರ್ಕಾರ 50ರೂ. ನೀಡಿದ್ದು, ಉಳಿಕೆ 50ರೂ.ಗಳನ್ನು ತ್ವರಿತವಾಗಿ ಕಾರ್ಖಾನೆ ನೀಡಲು ಮುಂದಾಗಬೇಕು ಎಂದು ಒತ್ತಾಯಿಸಿದರು.
ಶೃಂಗೇರಿ ಶಾರದಾಪೀಠದ ವಿದ್ಯಾಶಂಕರ ಶರ್ಮ ನೇತೃತ್ವದಲ್ಲಿ ದುರ್ಗಾಹೋಮ, ಗಣಹೋಮ, ಯಂತ್ರೋಪಕರಣ ಪೂಜೆ ನೆರವೇರಿತು. ಕಾರ್ಖಾನೆಯ ವಿವಿಧ ವಿಭಾಗದ ಇಂಜಿನಿಯರಿಂಗ್ ಮುಖ್ಯಸ್ಥರಾದ ಪಿ.ಎಸ್.ಮೇಯನ್, ಅಶೋಕ್‌ಕುಮಾರ್, ಸೆಂಥಿಲ್‌ಕುಮಾರ್, ಆರ್.ಇ.ಕುಮಾರ್, ಜಿ.ಆರ್.ದತ್ತಾತ್ರೇಯ, ಶಿವರಾಂ, ಕುಮಾರಸ್ವಾಮಿ, ಕಬ್ಬು ಬೆಳೆಗಾರರ ಸಂಘದ ಕುಮಾರ್, ಕಾಯಿ ಮಂಜೇಗೌಡ, ವಡಕಹಳ್ಳಿ ಮಂಜೇಗೌಡ, ರಾಮೇಗೌಡ, ಕೃಷ್ಣೇಗೌಡ ಇತರರಿದ್ದರು.