ರೋಟರಿ ಸಂಸ್ಥೆ ವತಿಯಿಂದ ದತ್ತು ಪಡೆದಿರುವ ಮಳವಳ್ಳಿ ತಾಲೂಕಿನ ಮಾಗನೂರು ಸಮೀಪದ ಜೆಎಸ್‌ಎಸ್ ಪ್ರೌಢಶಾಲೆಯಲ್ಲಿ ರೋಟರಿ ಸಂಸ್ಥೆ ಅಧ್ಯಕ್ಷ ಮೊಹಮದ್ ಜಬಿವುಲ್ಲ ಗಿಡಗಳನ್ನು ನೆಟ್ಟು ನೀರೆರೆದರು. ಆರ್.ಜಿ.ಮಹದೇವಸ್ವಾಮಿ, ಮಧು, ಪ್ರಕಾಶ್, ರಾಜು, ನಂಜುಂಡಸ್ವಾಮಿ ಇದ್ದರು. 
ಮಂಡ್ಯ

ರೋಟರಿ ಸಂಸ್ಥೆಯಿಂದ ಪ್ರೌಢಶಾಲೆಗಳ ದತ್ತು

ಮಳವಳ್ಳಿ: ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವ ಹಾಗೂ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಒತ್ತು ನೀಡುವ ಉದ್ದೇಶದಿಂದ ರೋಟರಿ ಸಂಸ್ಥೆಯಿಂದ ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ತಾಲೂಕಿನ ಕೆಲ ಸರ್ಕಾರಿ ಪ್ರೌಢಶಾಲೆಗಳನ್ನು ದತ್ತು ಪಡೆಯಲಾಗುತ್ತಿದೆ ಎಂದು ರೋಟರಿ ಸಂಸ್ಥೆ ಕಾರ್ಯದರ್ಶಿ ಆರ್.ಜಿ.ಮಹದೇವಸ್ವಾಮಿ ತಿಳಿಸಿದರು.
ತಾಲೂಕಿನ ಮಾಗನೂರು ಸಮೀಪದ ಜೆಎಸ್‌ಎಸ್ ಪ್ರೌಢಶಾಲೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪರಿಕರ ವಿತರಣೆ ಹಾಗೂ ಪರಿಸರ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ರೋಟರಿ ಸಂಸ್ಥೆಯಿಂದ ಈ ಬಾರಿ ತಾಲೂಕಿನ ರಾಗಿಬೊಮ್ಮನಹಳ್ಳಿ, ನೆಲ್ಲಿಗೆರೆ, ಸರಗೂರು, ದೊಡ್ಡಬೂಹಳ್ಳಿ ಮತ್ತು ಕ್ಯಾತೇಗೌಡನದೊಡ್ಡಿ ಸರ್ಕಾರಿ ಪ್ರೌಢಶಾಲೆಗಳನ್ನು ದತ್ತು ಪಡೆಯಲಾಗಿದೆ. ದತ್ತು ಪಡೆದ ಶಾಲೆಗಳ ಅಭಿವೃದ್ಧಿಗಾಗಿ ಹಲವು ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಮುಖ್ಯವಾಗಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ಸಾಧಿಸುವ ಗುರಿ ಹೊಂದಲಾಗಿದೆ. ಇದಕ್ಕಾಗಿ ವಿದ್ಯಾರ್ಥಿಗಳಿಗೆ ಉಚಿತ ಶೈಕ್ಷಣಿಕ ಪರಿಕರಗಳ ವಿತರಣೆ, ವಿಶೇಷ ತರಗತಿಗಳು ಮತ್ತು ಮಾದರಿ ಪ್ರಶ್ನೆಪತ್ರಿಕೆಗಳನ್ನು ನೀಡಲಾಗುವುದು ಎಂದು ಮಾಹಿತಿ ನೀಡಿದರು.
ಪರಿಸರ ಸಂರಕ್ಷಣೆಗೆ ಒತ್ತು ನೀಡುವ ಉದ್ದೇಶದಿಂದ ಪ್ರತಿ ಶಾಲೆ ಆವರಣದಲ್ಲಿ ಸಸಿಗಳನ್ನು ನೆಟ್ಟು ಪೋಷಿಸುವ ಕಾರ್ಯ ಮಾಡಲಾಗುವುದು. ವಿದ್ಯಾರ್ಥಿಗಳಲ್ಲಿ ಸ್ವಚ್ಛತೆ, ಶಿಸ್ತು ಮತ್ತು ಜೀವನ ಮೌಲ್ಯಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಾಗಾರ ಏರ್ಪಡಿಸಲಾಗುವುದು ಎಂದರು.
ರೋಟರಿ ಸಂಸ್ಥೆ ಅಧ್ಯಕ್ಷ ಮೊಹಮದ್ ಜಬಿವುಲ್ಲ, ರೋಟರಿ ಶಾಲೆ ಕಾರ್ಯದರ್ಶಿ ಪ್ರಕಾಶ್, ಉದ್ಯಮಿ ಮಧು, ಮುಖ್ಯ ಶಿಕ್ಷಕ ರಾಜು, ನಂಜುಂಡಸ್ವಾಮಿ ಇದ್ದರು. ವಿದ್ಯಾರ್ಥಿಗಳೊಂದಿಗೆ ಸೇರಿ ಗಿಡಗಳನ್ನು ನೆಡಲಾಯಿತು. ಬಳಿಕ ಶೈಕ್ಷಣಿಕ ಸಾಮಗ್ರಿ ವಿತರಿಸಲಾಯಿತು.