ಪಾಂಡವಪುರ ಪಟ್ಟಣದ ತಾಪಂ ಕಚೇರಿ ಆವರಣದಲ್ಲಿ ಆಯೋಜಿಸಿದ್ದ ದೇಸಿ ಅಕ್ಕಿ ಮೇಳವನ್ನು ಶಾಸಕ ದರ್ಶನ್ ಪುಟ್ಟಣ್ಣಯ್ಯ ಉದ್ಘಾಟಿಸಿದರು. ಸುನೀತಾ ಪುಟ್ಟಣ್ಣಯ್ಯ, ಮುರಳೀಧರ್, ವೆಂಕಟೇಶ್ ಮೊದಲಿಯರ್ ಇದ್ದರು. 
ಮಂಡ್ಯ

ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಳ್ಳಿ

ಲಲಾಟಾಕ್ಷ ಎಸ್
ಪಾಂಡವಪುರ: ದೇಸಿ ಅಕ್ಕಿ ತಳಿಗಳನ್ನು ಪರಿಚಯಿಸುವ ಉದ್ದೇಶದಿಂದ ಪಟ್ಟಣದ ತಾಲೂಕು ಪಂಚಾಯಿತಿ ಕಚೇರಿ ಆವರಣದಲ್ಲಿ ಆಯೋಜಿಸಿದ್ದ ದೇಸಿ ಅಕ್ಕಿ ಮೇಳವನ್ನು ಶಾಸಕ ದರ್ಶನ್ ಪುಟ್ಟಣ್ಣಯ್ಯ ಸೋಮವಾರ ಉದ್ಘಾಟಿಸಿದರು.
ಪುಟ್ಟಣ್ಣಯ್ಯ ಫೌಂಡೇಷನ್, ಸಹಜ ಸಮೃದ್ಧ, ಸಹಜ ಸೀಡ್ಸ್, ಭತ್ತ ಉಳಿಸಿ ಆಂದೋಲನ, ಆಶಾ, ರಾಜ್ಯ ರೈತ ಸಂಘ, ನೇಗಿಲಯೋಗಿ ಸಂಘ, ಕನ್ನಡ ಸಾಹಿತ್ಯ ಪರಿಷತ್ ಹಾಗೂ ವಿವಿಧ ಸರ್ಕಾರಿ ಇಲಾಖೆಗಳ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾತನಾಡಿ, ಪಟ್ಟಣದ ತಾಪಂ ಕಚೇರಿ ಆವರಣದಲ್ಲಿ ಈಗಾಗಲೇ 15 ದಿನಕ್ಕೊಮ್ಮೆ ಸಾವಯವ ಸಂತೆ ಆಯೋಜಿಸಲಾಗುತ್ತಿದೆ. ಇದರ ಭಾಗವಾಗಿ ದೇಸಿ ಅಕ್ಕಿಮೇಳವನ್ನು ಕೂಡ ಆಯೋಜಿಸಲಾಗಿದೆ. ದೇಸಿ ಅಕ್ಕಿ ಮತ್ತು ದೇಸಿ ಬೀಜಗಳನ್ನು ಉತ್ತೇಜಿಸುವ ಮತ್ತು ಅವುಗಳನ್ನು ಮಾರಾಟ ಮಾಡುವ ದೃಷ್ಟಿಯಿಂದ ಇಂತಹ ಮೇಳಗಳು ಮಹತ್ವವನ್ನು ಪಡೆದುಕೊಂಡಿವೆ ಎಂದರು.
ಸರ್ಕಾರ ಪಾಂಡವಪುರ ತಾಲೂಕನ್ನು ಸಾವಯವ ತಾಲೂಕು ಎಂದು ಘೋಷಣೆ ಮಾಡಿರುವುದರ ಹಂತವನ್ನು ವಿಸ್ತರಿಸಲು ಇದೊಂದು ಸಣ್ಣ ಪ್ರಯತ್ನ. ಎಲ್ಲ ನಾಗರಿಕರೂ ಸಂತೆಯಲ್ಲಿ ಭಾಗವಹಿಸಿದರೆ ಸಾವಯವ ಕೃಷಿಯನ್ನು ಬೆಂಬಲಿಸಿದಂತಾಗುತ್ತದೆ. ರೈತರು ಸಾವಯವ ಕೃಷಿಯ ಮಹತ್ವ ಅರಿತು ಹಂತ ಹಂತವಾಗಿ ಸಾವಯವ ಕೃಷಿ ಅಳವಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಲಭ್ಯವಿದ್ದ ತಳಿಗಳು:
ಮೇಲುಕೋಟೆಯ ಪುಟ್ಟಭತ್ತ, ಯಳಂದೂರಿನ ರತ್ನಚೂಡಿ, ಪಿರಿಯಾಪಟ್ಟಣದ ರಾಜಭೋಗ, ಹೊಳೆನರಸೀಪುರದ ರಾಜಮುಡಿ, ನಂಜನಗೂಡಿನ ಆನೆಕೊಂಬಿನ ಭತ್ತ, ಕನಕಪುರದ ಮುಂಡುಗ, ನಾಗರಹೊಳೆ ಕಾಡಿನ ಹಾಲು ದೊಡ್ಡಿ, ತುಮಕೂರಿನ ಹಾಲುಬ್ಬಲು, ಮಲೆನಾಡಿನ ಗಂಧಸಾಲೆ, ಜೀರಿಗೆ ಸಣ್ಣ, ಸಿದ್ಧ ಸಣ್ಣ, ಅಂಬೆಮೊಹರ್, ಸೇಲಂ ಸಣ್ಣ, ಎಚ್.ಎಂ.ಟಿ, ಕೆಂಪು ಸಣ್ಣ, ಬರ್ಮಾಬ್ಲಾಕ್, ಸಿಂಧೂರ ಮಧುಸಾಲೆ, ಅಂದನೂರು ಸಣ್ಣ, ದೊಡ್ಡ ಬೈರನೆಲ್ಲು, ಗೌರಿ ಸಣ್ಣ ಹಾಗೂ ಕೆಂಪು ಮುಂಡಗ.
ಔಷಧೀಯ ಹಾಗೂ ವಿಶಿಷ್ಟ ತಳಿಗಳು:
ಕರಿಗಜವಲಿ, ನವರ, ರಕ್ತಸಾಲಿ, ಕೆಂಪಕ್ಕಿ ಮತ್ತು ಕಪ್ಪು ಅಕ್ಕಿ ತಳಿಗಳು ಇದ್ದವು. 200ಕ್ಕೂ ಹೆಚ್ಚಿನ ಭತ್ತದ ತಳಿಗಳ ಪ್ರದರ್ಶನ ಆಯೋಜಿಸಲಾಗಿತ್ತು. ಸಾವಯವ ತರಕಾರಿ, ಸೊಪ್ಪು, ಹಣ್ಣು, ಬೆಲ್ಲ, ಗಾಣದ ಎಣ್ಣೆ ಮತ್ತು ವಿವಿಧ ಅಡುಗೆ ಪದಾರ್ಥಗಳು ಖರೀದಿಗೆ ಲಭ್ಯವಿದ್ದವು.
ರೈತನಾಯಕಿ ಸುನೀತಾ ಪುಟ್ಟಣ್ಣಯ್ಯ, ಮುಖಂಡರಾದ ಮುರಳೀಧರ, ವೆಂಕಟೇಶ್ ಮೊದಲಿಯರ್, ರಾ.ಸ.ಹನುಮಂತೇಗೌಡ ಇದ್ದರು.