ಮಳವಳ್ಳಿ ಪಟ್ಟಣದ ಶಾಂತಿ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮವನ್ನು ನಾಗರಾಜು ಉದ್ಘಾಟಿಸಿದರು. ಶ್ರೀಕಂಠಸ್ವಾಮಿ, ಶ್ರೀಶೈಲ, ಪ್ರಮಿಳಾ, ರಂಗಸ್ವಾಮಿ, ಅನುಪಮಾ ಇದ್ದರು.  
ಮಂಡ್ಯ

ದುಶ್ಚಟ ಮುಕ್ತ, ಶಿಸ್ತುಬದ್ಧ ಜೀವನ ಶೈಲಿ ರೂಡಿಸಿಕೊಳ್ಳಿ

ಪ್ರಮುಖ ಮುಖ್ಯಾಂಶಗಳು

  • ಅಪರ ಸರ್ಕಾರಿ ಅಭಿಯೋಜಕ ಎಂ.ಎಸ್.ಶ್ರೀಕಂಠಸ್ವಾಮಿ ಸಲಹೆ
  • ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ
ಮಳವಳ್ಳಿ : ದುಶ್ಚಟ ಮುಕ್ತ ಹಾಗೂ ಶಿಸ್ತುಬದ್ಧ ಜೀವನ ಶೈಲಿಯನ್ನು ರೂಡಿಸಿಕೊಳ್ಳುವುದರಿಂದ ಭವಿಷ್ಯದ ದಿನಗಳಲ್ಲಿ ಆರೋಗ್ಯಯುತ ಬದುಕು ಕಟ್ಟಿಕೊಳ್ಳುವುದರ ಜತೆಗೆ ದೇಶದ ಅಭಿವೃದ್ಧಿ ಕಾಯಕಲ್ಪದ ಪ್ರಜೆಗಳಾಗಲು ಸಹಕಾರಿಯಾಗಲಿದೆ ಎಂದು ಅಪರ ಸರ್ಕಾರಿ ಅಭಿಯೋಜಕ ಎಂ.ಎಸ್.ಶ್ರೀಕಂಠಸ್ವಾಮಿ ತಿಳಿಸಿದರು.
ಪಟ್ಟಣದ ಶಾಂತಿ ಪದವಿ ಪೂರ್ವ ಕಾಲೇಜಿನಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಸೋಮವಾರ ಆಯೋಜಿಸಿದ್ದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.
ಬಲಿಷ್ಠ ಭವ್ಯ ಭಾರತ ನಿರ್ಮಾಣವಾಗಲು ಆರೋಗ್ಯವಂತ ಯುವ ಪೀಳಿಗೆ ಬೇಕು. ಹಾಗಾಗಿ ಇಂದಿನ ಯುವ ಸಮೂಹ ತಮ್ಮ ಶೈಕ್ಷಣಿಕ ದಿನಮಾನಗಳಲ್ಲಿ ದುಶ್ಚಟಗಳಿಂದ ದೂರವಿದ್ದು ಕೌಶಲಯುತ ಆಲೋಚನಾ ಶಕ್ತಿಯನ್ನು ಬೆಳೆಸಿಕೊಳ್ಳಿ ಎಂದು ಕರೆ ನೀಡಿದರು.
ಇತ್ತೀಚೆಗೆ ದುಷ್ಟಕೂಟಗಳ ಕೆಲವು ವಿರೋಧಿ ರಾಷ್ಟ್ರಗಳು ನಮ್ಮ ದೇಶದ ಬೆಳವಣಿಗೆ ಸಹಿಸಲಾಗದೇ ಭಾರತದ ಶಕ್ತಿಯನ್ನು ಕುಂದಿಸುವ ನಿಟ್ಟಿನಲ್ಲಿ ಹಲವಾರು ಕುತಂತ್ರಗಳನ್ನು ಮಾಡುತ್ತಿವೆ. ಅವುಗಳಲ್ಲಿ ಬಹು ಮುಖ್ಯವಾದ ತಂತ್ರಗಾರಿಕೆ ಯುವ ಪೀಳಿಗೆಯನ್ನು ದಾರಿ ತಪ್ಪಿಸುವುದಾಗಿದೆ. ಮಾದಕ ವಸ್ತುಗಳನ್ನು ಸಲಿಸಾಗಿ ಯುವ ಸಮೂಹಕ್ಕೆ ಕೈ ಸೇರುವಂತೆ ಮಾಡುವ ಮೂಲಕ ಅವರನ್ನು ದುಶ್ಚಟಗಳಿಗೆ ದಾಸರನ್ನಾಗಿಸುವುದು ಹಾಗೂ ವ್ಯಸನಿಗಳಾದವರನ್ನು ದೇಶ ವಿರೋಧಿ ಚಟುವಟಿಕೆಗಳ ದುಷ್ಕೃತ್ಯಗಳಿಗೆ ಬಳಸಿಕೊಳ್ಳಲಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಯುವಕ, ಯುವತಿಯರು ಇಂತಹ ಆಮೀಶಗಳಿಗೆ ಒಳಗಾಗಿ ದಾರಿ ತಪ್ಪುವುದರ ಜತೆಗೆ, ದೇಶ ವಿರೋಧಿ ಕೃತ್ಯಗಳಿಗೆ ನೀವೇ ವಿರೋಧಿಗಳಿಗೆ ಅಸ್ತ್ರವಾಗಬಾರದು. ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ದಿಸೆಯಿಂದಲೇ ದುಶ್ಚಟದ ದುಷ್ಪರಿಣಾಮವನ್ನು ಅರಿಯುವುದರ ಜತೆಗೆ ದುಶ್ಚಟಗಳಿಗೆ ಈಡಾಗಿರುವ ತಮ್ಮ ಕುಟುಂಬದ ಸದಸ್ಯರಿಗೆ, ನೆರೆಹೊರೆಯವರಿಗೆ ತಿಳಿವಳಿಕೆ ನೀಡಬೇಕೆಂದು ಕರೆ ನೀಡಿದರು.
ಭಾರತವು ವಿಶ್ವಗುರುವಿನ ಸ್ಥಾನ ಪಡೆಯಬೇಕಾದರೆ ವಿದ್ಯಾರ್ಥಿಗಳು ಶಿಸ್ತು ಬದ್ಧ ಜೀವನ, ಸಂಸ್ಕಾರಯುತ ಜೀವನ ನಡೆಸುವುದರ ಮೂಲಕ ದೇಶದ ಸತ್ಪ್ರಜೆಗಳಾಗಬೇಕೆಂದು ಕರೆ ನೀಡಿದರು.
ಇದೇ ಸಂಧರ್ಭದಲ್ಲಿ ದುಶ್ಚಟ ಮುಕ್ತ ಜೀವನ ನಡೆಸುವುದಾಗಿ ವಿದ್ಯಾರ್ಥಿಗಳು ಪ್ರತಿಜ್ಞಾ ವಿಧಿ ಸಂಕಲ್ಪ ಸ್ವೀಕರಿಸಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಸಿ.ಎಂ.ನಾಗರಾಜು ಮಾತನಾಡಿ, ದೇಶದ ಅಭಿವೃದ್ಧಿಯ ಚಿಂತನೆವೊಂದಿಗೆ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆಯು ಹಮ್ಮಿಕೊಳ್ಳುತ್ತಿರುವ ಮೌಲ್ಯಾಧಾರಿತ ಕಾರ್ಯಕ್ರಮಗಳು ಶ್ಲಾಘನೀಯ ಎಂದರು.
ಯೋಜನೆಯ ಮೇಲ್ವಿಚಾರಕಿ ಶ್ರೀಶೈಲ, ಪ್ರಮಿಳಾ, ಉಪನ್ಯಾಸಕ ರಂಗಸ್ವಾಮಿ, ಸೇವಾ ಪ್ರತಿನಿಧಿ ಅನುಪಮಾ ಸೇರಿದಂತೆ ಇತರರು ಇದ್ದರು.