ಮಂಡ್ಯದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ ಮಾತನಾಡಿದರು.
- ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದ ಪೂರ್ವಭಾವಿ ಸಭೆ
- ವಿವಿಧ ಸಂಘಟನೆಗಳ ಮುಖಂಡರು ಭಾಗಿ
ಮಂಡ್ಯ: ಜೂನ್ ಮಾಹೆಯಲ್ಲಿ ಬರುವ ಮಹನೀಯರ ಜಯಂತ್ಯುತ್ಸವವನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಬೇಕು ಎಂದು ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ ಹೇಳಿದರು.
ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, 4ರಂದು ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ ಹಾಗೂ 27ರಂದು ಕೆಂಪೇಗೌಡ ಜಯಂತಿ ಕಾರ್ಯಕ್ರಮವನ್ನು ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಎಲ್ಲರ ಸಹಕಾರ, ಸಮನ್ವಯತೆ ಹಾಗೂ ಸಾಮರಸ್ಯದಿಂದ ಮಹನೀಯರ ಚಿಂತನೆ ಮತ್ತು ಆದರ್ಶಗಳನ್ನು ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಅರ್ಥಪೂರ್ಣವಾಗಿ ಆಚರಿಸಬೇಕು ಎಂದು ತಿಳಿಸಿದರು.
ಮಹನೀಯರ ಜನ್ಮ ದಿನದ ಕಾರ್ಯಕ್ರಮದ ಆಹ್ವಾನ ಪತ್ರಿಕೆಯನ್ನು ಗಣ್ಯರು, ಎಲ್ಲ ಅಧಿಕಾರಿಗಳು ಹಾಗೂ ಸಂಘಟನೆಗಳಿಗೆ ತಲುಪಿಸಬೇಕು. ವೇದಿಕೆಯನ್ನು ಸ್ವಚ್ಛತೆಯಿಂದ ನೋಡಿಕೊಳ್ಳಬೇಕು. ಮಹನೀಯರ ಭಾವಚಿತ್ರಗಳ ಬ್ಯಾನರ್‌ಗಳನ್ನು ಅಳವಡಿಸಬೇಕು. ಮತ್ತು ಸಮುದಾಯದಲ್ಲಿ ಸಾಧನೆ ಮಾಡಿರುವಂತಹ ಗಣ್ಯರಿಗೆ ಗೌರವವನ್ನು ಸೂಚಿಸಬೇಕು. ಜತೆಗೆ ಚಿಂತಕರಿಂದ ಉಪನ್ಯಾಸ ಕೊಡಿಸಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಜಿಪಂ ಮಾಜಿ ಅಧ್ಯಕ್ಷ ತಗ್ಗಹಳ್ಳಿ ವೆಂಕಟೇಶ್, ಮನ್‌ಮುಲ್ ಮಾಜಿ ಅಧ್ಯಕ್ಷ ತಮ್ಮಯ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ವಿ.ನಂದೀಶ್ ಇತರರಿದ್ದರು.