ಮಳವಳ್ಳಿಯ ಅನಂತರಾಮ್ ವೃತ್ತದಲ್ಲಿ ಸೋಮವಾರ ಡಾ.ರಾಜ್ ಅಭಿಮಾನಿಗಳ ಸಂಘದ ವತಿಯಿಂದ ರಾಜಕುಮಾರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡುವ ಮೂಲಕ ಜನ್ಮದಿನವನ್ನು ಆಚರಿಸಲಾಯಿತು. ಕೃಷ್ಣ, ರೋ.ಎಂ.ವಿ.ಸೋಮಶೇಖರ್, ಜಗದೀಶ್, ಶ್ರೀಕಂಠಯ್ಯ, ಮಂಜುನಾಥ್, ಚನ್ನಗಿರಿ, ವೆಂಕಟೇಶ್, ನಾಗರಾಜು, ಜಯರಾಮು, ರಮೇಶ ಇದ್ದರು.  
ಮಂಡ್ಯ

ಡಾ.ರಾಜ್ ಸ್ಮಾರಕದ ಬಳಿ ನಟ ಚೇತನ್ ಕ್ಷಮೆಯಾಚಿಸಲಿ

ಮಳವಳ್ಳಿ: ಕರ್ನಾಟಕ ರತ್ನ, ವರನಟ ಡಾ.ರಾಜಕುಮಾರ್ ಅವರ ಸ್ಮಾರಕ ನಿರ್ಮಾಣಕ್ಕೆ ಸರ್ಕಾರ ನೀಡಿರುವ ಭೂಮಿಯ ಬಗ್ಗೆ ಪ್ರಶ್ನೆ ಮಾಡಿರುವ ಚಿತ್ರನಟ ಚೇತನ್ ಕೂಡಲೇ ಡಾ.ರಾಜ್ ಸ್ಮಾರಕದ ಬಳಿ ಬಂದು ಕ್ಷಮೆಯಾಚಿಸದಿದ್ದರೆ ಆತನ ವಿರುದ್ಧ ಉಗ್ರ ಹೋಟಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಡಾ.ರಾಜ್ ಕಲಾ ಸಂಘದ ಅಧ್ಯಕ್ಷ ದೊಡ್ಡಯ್ಯ ಎಚ್ಚರಿಕೆ ನೀಡಿದರು.
ಪಟ್ಟಣದ ಡಾ.ರಾಜ್ ಕಲಾಭಿಮಾನಿಗಳ ಸಂಘದ ವತಿಯಿಂದ ಸೋಮವಾರ ಅನಂತರಾಮ್ ವೃತ್ತದಲ್ಲಿ ಹಮ್ಮಿಕೊಂಡಿದ್ದ ಡಾ.ರಾಜ್ ಜನ್ಮದಿನ ಕಾರ್ಯಕ್ರಮದಲ್ಲಿ ರಾಜ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡಿದ ನಂತರ ಮಾತಮಾಡಿದ ಅವರು, ಡಾ.ರಾಜ ಕುಮಾರ್ ಅವರು ಕನ್ನಡ ಚಿತ್ರರಂಗಕ್ಕೆ ಮಾತ್ರ ಸೀಮಿತಗೊಳ್ಳದೆ ನಮ್ಮ ನಾಡು, ನುಡಿ, ಸಂಸ್ಕೃತಿಗೆ ಅವರ ಜೀವಿತಾವಧಿಯನ್ನು ಮೀಸಲಿಟ್ಟಿದ್ದ ಮೇರು ವ್ಯಕ್ತಿ. ಕನ್ನಡ ಪರ ಹೋರಾಟಕ್ಕೆ ಬೆಂಬಲವಾಗಿ ನಿಲ್ಲುವುದರ ಜತೆಗೆ ಕನ್ನಡ ಚಿತ್ರರಂಗದಲ್ಲಿ ಜನರಿಗೆ ಉತ್ತಮ ಸಂದೇಶಗಳನ್ನು ನೀಡುವ ಪಾತ್ರಗಳ ಮೂಲಕ ನಾಡಿನ ಉದ್ದಗಲಕ್ಕೂ ಜನರ ಅಂತರಂಗದಲ್ಲಿ ಇಂದಿಗೂ ಚಿರಸ್ಥಾಯಿಯಾಗಿ ಉಳಿದಿದ್ದಾರೆ. 200ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟನೆ ಮಾಡಿರುವುದು ಒಂದೆಡೆಯಾದರೆ ಪೌರಾಣಿಕ ಮತ್ತು ಬಂಗಾರದ ಮನುಷ್ಯ, ಭಾಗ್ಯವಂತರು, ಒಡಹುಟ್ಟಿದವರು ಸೇರಿದಂತೆ ಬಹುಪಾಲು ಡಾ.ರಾಜ್ ನಟನೆ ಮಾಡಿದ ಚಿತ್ರಗಳ ಪಾತ್ರಗಳಲ್ಲಿ ಸಮಾಜ ಸುಧಾರಣೆಗೆ ಪೂರಕವಾಗಿವೆ. ರಾಜಕುಮಾರ್ ಅವರ ಸೇವೆ ಗುರುತಿಸಿ ರಾಜ್ಯ ಸರ್ಕಾರ ಸ್ಮಾರಕ ನಿರ್ಮಾಣಕ್ಕೆ ನೀಡಿದ್ದ ಭೂಮಿಯ ಬಗ್ಗೆ ಪ್ರಶ್ನೆ ಮಾಡಿರುವುದು ತಿಳಿಗೇಡಿ ತನವಾಗಿದೆ ಎಂದು ಕಿಡಿಕಾರಿದರು.
ಇಂತಹವರ ಕೀಳು ಮನಸ್ಥಿತಿಯ ವ್ಯಕ್ತಿಗಳಿಂದ ಸುಸ್ಥಿರ ಸಮಾಜಕ್ಕೆ ಕಳಂಕ ಉಂಟಾಗುತ್ತದೆ. ಅಲ್ಲದೆ ಇಂತಹವರು ನಾಡ ದ್ರೋಹಿಗಳೆಂದು ಪರಿಗಣಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು. ಡಾ.ರಾಜ್ ಅಭಿಮಾನಿಗಳ ಆಕ್ರೋಶ ಹೆಚ್ಚಾಗುತ್ತಿದ್ದಂತೆ ಮನೆಯಲ್ಲಿ ಕುಳಿತು ಕ್ಷಮೆಯಾಚನೆ ಮಾಡಿರುವುದನ್ನು ನಾವು ಒಪ್ಪುವುದಿಲ್ಲ. ಕೂಡಲೇ ಡಾ.ರಾಜ್ ಸ್ಮಾರಕದ ಬಳಿ ಬಂದು ತನ್ನ ಅವಿವೇಕದ ಮಾತಿನಿಂದ ನಾಡಿನ ಜನರಿಗೆ ಆಗಿರುವ ಬೇಸರಕ್ಕೆ ಬಹಿರಂಗ ಕ್ಷಮೆಯಾಚಿಸಬೇಕು. ಇಲ್ಲವಾದಲ್ಲಿ ಆತನ ಮನೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ರಾಶಿರಾಪು ಸಂಘದ ತಾಲೂಕು ಅಧ್ಯಕ್ಷ ಕೃಷ್ಣ, ರೋ.ಎಂ.ವಿ.ಸೋಮಶೇಖರ್, ಜಗದೀಶ್, ಶ್ರೀಕಂಠಯ್ಯ, ಮಂಜುನಾಥ್, ಚನ್ನಗಿರಿ, ವೆಂಕಟೇಶ್, ನಾಗರಾಜು, ಜಯರಾಮು, ರಮೇಶ ಸೇರಿದಂತೆ ಇತರರು ಇದ್ದರು.