ನಾಗಮಂಗಲ ಪಟ್ಟಣದ ಖಾಸಗಿ ಸಮುದಾಯ ಭವನದಲ್ಲಿ ಗೌರಿ ಗಣೇಶ ಹಬ್ಬ ಹಿನ್ನೆಲೆಯಲ್ಲಿ ಸೌಹಾರ್ದ ಸಭೆ ಹಮ್ಮಿಕೊಳ್ಳಲಾಗಿತ್ತು. ಜಿಲ್ಲಾಧಿಕಾರಿ ಡಾ.ಕುಮಾರ್, ಎಸ್ಪಿ ಡಾ.ಶೋಭರಾಣಿ ಇದ್ದರು.
ನಾಗಮಂಗಲ: ಯಾವುದೋ ಪ್ರಚೋದನೆಗೆ ಒಳಗಾಗಿ ಹಬ್ಬಗಳಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುವಂತಹ ಘಟನೆಗಳನ್ನು ನಡೆಸಿದರೆ ಅಂತಹ ವ್ಯಕ್ತಿಗಳ ವಿರುದ್ಧ ಜಿಲ್ಲಾಡಳಿತ ಕಠಿಣ ಕ್ರಮ ತೆಗೆದುಕೊಳ್ಳಲಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೋಭಾರಾಣಿ ಎಚ್ಚರಿಕೆ ನೀಡಿದರು.
ಪಟ್ಟಣದ ಖಾಸಗಿ ಸಮುದಾಯ ಭವನದಲ್ಲಿ ಜಿಲ್ಲಾಡಳಿತದಿಂದ ಬುಧವಾರ ಗೌರಿ-ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಸೌಹಾರ್ದ ಸಭೆಯಲ್ಲಿ ಮಾತನಾಡಿದರು. ಯಾರದೋ ಪ್ರಚೋದನೆಗೆ ಒಳಗಾಗಿ ಯುವ ಸಮೂಹ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಡಿ. ಇದರಿಂದ ನಿಮ್ಮ ಜೀವನದಲ್ಲಿ ತುಂಬ ಕಷ್ಟ ಅನುಭವಿಸಬೇಕಾಗುತ್ತದೆ. ಮುಖಂಡರು ನಿಮ್ಮ ಸಮುದಾಯದ ಯುವಕರಿಗೆ ಮಾರ್ಗದರ್ಶನ ನೀಡಿ. ಹೊರಗಿನಿಂದ ಬಂದಂತಹ ಕಿಡಿಗೇಡಿಗಳ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿ. ಜಿಲ್ಲೆಯಲ್ಲಿ ಧರ್ಮ ಸಂಘರ್ಷಕ್ಕೆ ಅವಕಾಶವಿಲ್ಲ ಎಂದು ಹಿಂದು, ಮುಸ್ಲಿಂ ಸಮುದಾಯದ ಮುಖಂಡರಿಗೆ ಹೇಳಿದರು.
ಧರ್ಮ ಸಂಘರ್ಷಕ್ಕೆ ಕುಮ್ಮಕ್ಕು ನೀಡುತ್ತಿರುವುದು, ಅದರ ಬಗ್ಗೆ ಚರ್ಚಿಸುವುದು ಗಮನಕ್ಕೆ ಬಂದರೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು. ಪೊಲೀಸರು ನಿಮ್ಮಂತೆಯೇ ಮನುಷ್ಯರು. ಅವರ ಸೇವೆಗೆ ಗೌರವ ನೀಡಿ ಸಹಕರಿಸಿ. ಪೊಲೀಸರ ಜತೆ ಅನವಶ್ಯಕವಾಗಿ ವಾಗ್ವಾದ ಮಾಡಿ ಗೊಂದಲ ಸೃಷ್ಟಿಸುವುದು ಬೇಡ ಎಂದರು.
ಸಾರ್ವಜನಿಕವಾಗಿ ಗಣೇಶ ಮೂರ್ತಿ ಪ್ರತಿಷ್ಠಾಪಿಸುವವರು ಕಡ್ಡಾಯವಾಗಿ ಸರ್ಕಾರದಿಂದ ಅನುಮತಿ ಪಡೆಯಬೇಕು. ಪ್ರತಿಷ್ಠಾಪನಾ ಸ್ಥಳಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸುವುದು ಕಡ್ಡಾಯ. ವಿಸರ್ಜನೆಯನ್ನು ಆದಷ್ಟು ಕಡಿಮೆ ದಿನಗಳಲ್ಲಿ ನಡೆಸಿಕೊಡಿ. ಏಕೆಂದರೆ ಪೊಲೀಸ್ ಸಿಬ್ಬಂದಿಯನ್ನು ಗಣಪತಿ ವಿಸರ್ಜನಾ ನಂತರ ದಸರಾ ಬಂದೋಬಸ್ತ್‌ಗಾಗಿ ನಿಯೋಜಿಸಬೇಕಿದೆ. ಪಟ್ಟಣದಲ್ಲಿ ಮೆರವಣಿಗೆಗೆ ಅಡಚಣೆಯಾಗದಂತೆ ಗಣಪತಿ ಮೂರ್ತಿಗಳನ್ನು ಪ್ರತಿಷ್ಠಾಪಿಸಿ. ವಿಸರ್ಜನಾ ಸ್ಥಳದಲ್ಲಿ ಕ್ರೇನ್, ಸಿಸಿ ಟಿವಿ, ಈಜು ತಜ್ಞರು, ವಿದ್ಯುತ್ ವ್ಯವಸ್ಥೆಯನ್ನು ಪುರಸಭೆಯಿಂದ ಮಾಡಲಾಗುವುದು ಎಂದರು.
ಜಿಲ್ಲಾಧಿಕಾರಿ ಡಾ.ಕುಮಾರ್ ಮಾತನಾಡಿ, ಕೋಮು ಸೌಹಾರ್ದ ವಿಷಯದಲ್ಲಿ ನಾಗಮಂಗಲ ರಾಜ್ಯಕ್ಕೆ ಮಾದರಿಯಾಗಬೇಕು. ನಮ್ಮ ವ್ಯವಸ್ಥೆಗೆ ಈ ಹಿಂದಿನ ಎರಡು ಘಟನೆಗಳು ಕಪ್ಪುಚುಕ್ಕೆಯಾಗಿವೆ. ಪ್ರೀತಿ, ಸೌಹಾರ್ದ ಮಂಡ್ಯ ಮಣ್ಣಿನ ಗುಣವಾಗಬೇಕು ಎಂದರು.
ನಮ್ಮ ಮೇಲಿರುವ ಜವಾಬ್ದಾರಿಯಷ್ಟೇ ಆಯಾ ಸಮಾಜದ ಮುಖಂಡರಿಗೂ ಇದೆ. ಸಮಾಜಘಾತುಕ ಚಿಂತನೆಗಳಿರುವಂತಹ ವ್ಯಕ್ತಿಗಳಿಗೆ ತಿಳಿವಳಿಕೆ ಹೇಳಿ. ಯಾವ ಹಬ್ಬವನ್ನು ಭಯ, ಆತಂಕದಿಂದ ಆಚರಿಸಬಾರದು. ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅನುಮತಿಗಾಗಿ ಹಲವು ಇಲಾಖೆಗಳಿಗೆ ಅಲೆಯುವುದು ಬೇಡ. ಸಿಂಗಲ್ ವಿಂಡೋ ಕಮಿಟಿಯಿಂದ 24 ಗಂಟೆಯೊಳಗೆ ಅನುಮತಿ ಸಿಗಲಿದೆ. ಸಮಾಜಘಾತುಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವವರಿಗೆ ಮುಲಾಜಿಲ್ಲದೆ ಕಠಿಣ ಕ್ರಮ ತೆಗೆದುಕೊಳ್ಳುತ್ತೇನೆ. ಇದರಲ್ಲಿ ಯಾವುದೇ ರಾಜಿ ಇಲ್ಲ ಎಂದು ಎಚ್ಚರಿಸಿದರು.
ತಾಲೂಕಿನ ಶಿಕಾರಿಪುರ ಗ್ರಾಮದ ಹಕ್ಕಿಪಿಕ್ಕಿ ಜನಾಂಗದ ಮುಖಂಡ ನವರಂಗ್ ಮಾತನಾಡಿ, ನಮ್ಮ ಗ್ರಾಮದಲ್ಲಿ ಅನೇಕರನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿದ್ದಾರೆ. ಗ್ರಾಮದಲ್ಲಿ ಮತಾಂತರವಾಗದೆ ಉಳಿದಿರುವ ಅಲ್ಪ ಸಂಖ್ಯೆಯಲ್ಲಿರುವ ನಾವು ಯಾವುದೇ ಹಿಂದೂ ಧರ್ಮದ ಆಚರಣೆ ಮಾಡಲು ಕ್ರಿಶ್ಚಿಯನ್ ಮುಖಂಡರು ಅಡ್ಡಿಪಡಿಸುತ್ತಿದ್ದಾರೆ. ನಮ್ಮ ಅಲೆಮಾರಿ ಜನಾಂಗವನ್ನು ಮತಾಂತರದಿಂದ ಉಳಿಸಿಕೊಡಿ. ನಮ್ಮ ಗ್ರಾಮದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಲು ಅವಕಾಶ ಕಲ್ಪಿಸಿಕೊಡಿ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಡಿಸಿ, ಎಸ್ಪಿ ಶೀಘ್ರ ಗ್ರಾಮಕ್ಕೆ ಬಂದು ಸಭೆ ನಡೆಸಿ ಅರಿವು ಮೂಡಿಸಲಾಗುವುದು ಎಂದರು.
ಡಿವೈಎಸ್ಪಿ ಚಲುವರಾಜು, ನಾಗಮಂಗಲ ಪಟ್ಟಣ ಠಾಣೆ ಇನ್‌ಸ್ಪೆಕ್ಟರ್ ಶಿವಕುಮಾರ್, ಪುರಸಭೆ ಮುಖ್ಯಾಧಿಕಾರಿ ವೀಣಾ, ಪಿಎಸ್‌ಐಗಳಾದ ರವಿಕುಮಾರ್, ಲಕ್ಷ್ಮಣ್ ಕಾಮಣ್ಣನವರ್, ನರೇಶ್ ಇದ್ದರು.
ಯಾರ ಭಾವನೆಗಳಿಗೂ ಧಕ್ಕೆಯಾಗದಂತೆ ಗಣೇಶ ಮೂರ್ತಿ ಪ್ರತಿಷ್ಠಾಪಿಸಲಾಗುವುದು. ಈ ಬಾರಿ ರಾಜ್ಯಕ್ಕೆ ಮಾದರಿಯಾಗುವಂತೆ ಗಣೇಶ ಉತ್ಸವ ನಡೆಸಿಕೊಡುತ್ತೇವೆ. ಇದರಲ್ಲಿ ಯಾವುದೇ ರಾಜಕೀಯ ಮಾಡುವುದಿಲ್ಲ. ಇದಕ್ಕೆ ಜಿಲ್ಲಾಡಳಿತದ ಸಹಕಾರ ಅಗತ್ಯ.
ಶ್ರೀನಿವಾಸ್, ಕೋಟೆ ಗಣಪತಿ ಪ್ರತಿಷ್ಠಾಪನಾ ಸಮಿತಿ ಪದಾಧಿಕಾರಿ
ಈ ಹಿಂದೆ ಆಗಿರುವ ಘಟನೆಗಳನ್ನು ಮರೆತು ಹಿಂದೂ-ಮುಸ್ಲಿಮರು ಸಹೋದರರಂತೆ ಬಾಳುತ್ತಿದ್ದೇವೆ. ಕೋಟೆ ಗಣಪತಿ ದೇಗುಲದಲ್ಲಿನ ಕಾರ್ಯಕ್ರಮಗಳಲ್ಲಿ ನಾವು ಸಂತೋಷದಿಂದ ಪಾಲ್ಗೊಳ್ಳುತ್ತಿದ್ದೆವು. ಈಗ ಸ್ವಲ್ಪ ಭಯದ ವಾತಾವರಣವಿದೆ. ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಹೇಳಿಕೆ ನೀಡಿ ಸಮಾಜಕ್ಕೆ ಧಕ್ಕೆ ತರುವಂತೆ ನಡೆದುಕೊಳ್ಳುವವರ ವಿರುದ್ಧ ಕ್ರಮ ಜರುಗಿಸಿ. ಸಾಮಾಜಿಕ ಜಾಲತಾಣಗಳ ಮೇಲೆ ಪೊಲೀಸರು ಕ್ರಮವಹಿಸಲಿ. ನಮ್ಮ ಹಬ್ಬಗಳಿಗೆ ಹಿಂದೂ ಸಮಾಜದವರು ಸಹಕಾರ ನೀಡುತ್ತಿದ್ದು, ನಾವು ಕೂಡ ಅವರ ಹಬ್ಬಗಳ ಆಚರಣೆಗೆ ಸಹಕರಿಸಲಿದ್ದೇವೆ.
ಇರ್ಷಾದ್ ಪಾಷ, ಜಾಮೀಯ ಮಸೀದಿ ಕಾರ್ಯದರ್ಶಿ